ಸೌದೆ ವ್ಯಾಪಾರಕ್ಕೆ ಖರೀದಿಸಿದ ಮರ ಕಟಾವಿಗೆ ಸಕಾಲಕ್ಕೆ ಅನುಮತಿ ನೀಡದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ತಾಲೂಕಿನ ಮರ ಮುಟ್ಟುಗಾರರ ಸಂಘದ ಸಮಸ್ಯೆಯನ್ನು ಶಾಸಕ ಎ.ಆರ್.ಕೃಷ್ಣಮೂರ್ತಿ ಆಲಿಸಿದರು. 
ಚಾಮರಾಜನಗರ

ಮರ ಕಟಾವಿಗೆ ಅನುಮತಿ ನೀಡದಿದ್ದಕ್ಕೆ ಆಕ್ರೋಶ

ಪ್ರಮುಖ ಮುಖ್ಯಾಂಶಗಳು

  • ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆ
  • ಹೋರಾಟಗಾರರ ಸಮಸ್ಯೆ ಆಲಿಸಿದ ಶಾಸಕ ಎಆರ್‌ಕೆ
ಕೊಳ್ಳೇಗಾಲ: ಸೌದೆ ವ್ಯಾಪಾರಕ್ಕೆ ಖರೀದಿಸಿದ ಮರ ಕಟಾವಿಗೆ ಸಕಾಲಕ್ಕೆ ಅನುಮತಿ ನೀಡದ ಅರಣ್ಯ ಇಲಾಖೆ ವಿರುದ್ಧ ಬುಧವಾರ ಕೊಳ್ಳೇಗಾಲ, ಹನೂರು ಹಾಗೂ ಯಳಂದೂರು ತಾಲೂಕಿನ ಮರ ಮುಟ್ಟುಗಾರರ ಸಂಘ ಪ್ರತಿಭಟನೆ ನಡೆಸಿತು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಪ್ರತಿಭಟನಾಕಾರರು ನಂತರ ಮೆರವಣಿಗೆ ಮೂಲಕ ಅರಣ್ಯ ಇಲಾಖೆ ಕಚೇರಿಗೆ ತೆರಳಿದರು. ದಾರಿಯುದ್ದಕ್ಕೂ ಅರಣ್ಯ ಇಲಾಖೆ ವಿರುದ್ಧ ಅಕ್ರೋಶ ಹೊರ ಹಾಕಿದರು.
ಪ್ರತಿಭಟನಾ ಮೆರವಣಿಗೆ ಮಾರ್ಗ ಮಧ್ಯೆದಲ್ಲಿ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಪ್ರತಿಭಟನಾಕಾರರನ್ನು ಭೇಟಿ ಮಾಡಿ ಸಮಸ್ಯೆ ಆಲಿಸಿದರು.
ಸೌದೆ ವ್ಯಾಪಾರಿ ಮತೀನ್ ಅಹಮ್ಮದ್ ಮಾತನಾಡಿ, ರೈತರು ಮಾರಾಟ ಮಾಡಿದ ಮರಗಳ ಕಟಾವಿಗೆ ಅರಣ್ಯ ಇಲಾಖೆಗೆ ಅರ್ಜಿ ಸಲ್ಲಿಸಿದರೆ ಕಾಲಮಿತಿಯೊಳಗೆ ಅನುಮತಿ ದೊರೆಯುತ್ತಿಲ್ಲ. ಇಲಾಖೆ ಅವರೇ ಹರಾಜು ಮಾಡಿದ ಮರಕ್ಕೆ ಸೌದೆ ವ್ಯಾಪಾರಿಯಿಂದ ಹಣ ಕಟ್ಟಿಸಿಕೊಂಡು 2 ತಿಂಗಳಾದರೂ ಕಟಾವಿಗೆ ಅನುಮತಿ ನೀಡಿಲ್ಲ. ಇದ್ದರಿಂದ ಸೌದೆ ವ್ಯಾಪಾರಿಗಳಿಗೆ, ರೈತರಿಗೆ ಬಹಳ ತೊಂದರೆಯಾಗಿದೆ. ಅಲ್ಲದೆ, ರೈತರಿಂದ ಖರೀದಿಸಿದ ಮರಗಳನ್ನು ಸಾಗಿಸುವಾಗ ದಂಡವನ್ನು ಕಟ್ಟಿಸಿಕೊಳ್ಳುತ್ತಿದ್ದಾರೆ. ಇದ್ದರಿಂದ ಬಹಳ ತೊಂದರೆಯಾಗಿದೆ ಎಂದರು.
ಬಳಿಕ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಅರಣ್ಯ ಇಲಾಖೆಯ ಸಿಸಿಎಫ್ ಮಾಲತಿ ಪ್ರಿಯಾ ಅವರಿಗೆ ದೂರವಾಣಿ ಕರೆ ಮಾಡಿ ಮಾತನಾಡಿದರು. ರೈತರು ತಮ್ಮ ಕಷ್ಟ ಕಾಲಕ್ಕೆ ತಾವು ಬೆಳೆದ ಸಣ್ಣ-ಪುಟ್ಟ ಮರಗಳನ್ನು ಸೌದೆ ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಾರೆ. ಅದು ಬೆಲೆ ಬಾಳುವ ಮರಗಳಲ್ಲ. ಆದರೆ ಅರಣ್ಯ ಅಧಿಕಾರಿಗಳು ಮರಗಳನ್ನು ಸಾಗಿಸುವಾಗ ದಂಡ ಹಾಕಿ ದೂರು ದಾಖಲಿಸುತ್ತಿದ್ದಾರೆ. ಹರಾಜು ಮಾಡಿದ ಮರ ಕಟಾವಿಗೂ ಸಕಾಲಕ್ಕೆ ಅನುಮತಿ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ. ಹಾಗಾಗಿ ಸಮಸ್ಯೆ ಬಗೆಹರಿಸಲು ಸಭೆ ಆಯೋಜಿಸುವಂತೆ ತಿಳಿಸಿದರು.
ಧರಣಿನಿರತರೊಂದಿಗೆ ಮಾತನಾಡಿದ ಶಾಸಕರು, ಸೋಮವಾರ ಸಿಸಿಎಫ್ ಅವರು ಸಭೆ ದಿನಾಂಕವನ್ನು ತಿಳಿಸಲಿದ್ದಾರೆ. ಸಭೆಯಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು. ಬಳಿಕ ಹೋರಾಟಗಾರರು ಪ್ರತಿಭಟನೆ ಕೈ ಬಿಟ್ಟರು.
ಸೌದೆ ವ್ಯಾಪಾರಿಗಳಾದ ಅಮ್ಜಾದ್ ಖಾನ್, ಮಹಮ್ಮದ್ ಮತೀನ್, ಗಿರಿವಾಸ್, ಪುಟ್ಟರಾಜು, ನಾರಾಯಣಿ, ಕಾಮಗೆರೆ ಸಿದ್ದಯ್ಯ, ಡಿಪೋ ರವಿ, ಫಾಜೀಲ್, ಆಸದ್ ಪಾಷ, ನಾಗಣ್ಣ, ರಂಗಸ್ವಾಮಿ, ಚಾಂದ್, ನೀಲಿಸಿದ್ದಯ್ಯ, ಅಂಚೆ ಪುಟ್ಟರಾಜು, ಶಶಾಂಕ್, ಚಂದ್ರು, ರಂಗಶೆಟ್ಟಿ, ಅಸ್ಲಾಂ ಪಾಷ, ರೈತ ಸಂಘದ ಅಣಗಳ್ಳಿ ಬಸವರಾಜು, ರಾಮಕೃಷ್ಣ, ದಶರಥ್ ಮತ್ತಿತ ರಿದ್ದರು.