ವಡಕೆಹಳ್ಳದಲ್ಲಿ ರೈತರು ಆರಂಭಿಸಿರುವ ಅಅಹೋ ರಾತ್ರಿ ಧರಣಿಯಲ್ಲಿ ನಾಲ್‌ರೋಡ್ ಭಾಗದ ರೈತರು, ಮಹಿಳೆಯರು ಪಾಲ್ಗೊಂಡಿರುವುದು. 
ಚಾಮರಾಜನಗರ

ಅಹೋ ರಾತ್ರಿ ಧರಣಿಗೆ ಮಹಿಳೆಯರು, ರೈತರ ಬೆಂಬಲ

ಹನೂರು: ನೀರು ತುಂಬಿಸುವ ಯೋಜನೆ ರೂಪಿಸುವಂತೆ ಆಗ್ರಹಿಸಿ 21 ದಿನದಿಂದ ತಾಲೂಕಿನ ವಡಕೆಹಳ್ಳದಲ್ಲಿ ರೈತರು ಆರಂಭಿಸಿರುವ ಅಹೋ ರಾತ್ರಿ ಧರಣಿಯಲ್ಲಿ ಮಹಿಳೆಯರು ಸೇರಿದಂತೆ ರೈತರು ಪಾಲ್ಗೊಳ್ಳುವ ಮೂಲಕ ಬೆಂಬಲ ಸೂಚಿಸಿದರು.
ರೈತ ಸಂಘ ಹಾಗೂ ದಂಟಳ್ಳಿ ಏತ ನೀರಾವರಿ ಸಮಿತಿ ವತಿಯಿಂದ 21 ದಿನಗಳಿಂದಲೂ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಸಂಘ ಸಂಸ್ಥೆ, ಚರ್ಚ್ ಫಾದರ್‌ಗಳು ಧರಣಿಗೆ ಆಗಮಿಸಿ ಬೆಂಬಲ ಸೂಚಿಸಿದ್ದಾರೆ. ಆದರೆ ಈವರೆಗೂ ಸಮಸ್ಯೆ ಬಗೆಹರಿದಿಲ್ಲ. ಇದರಿಂದ ಅಸಾಮಾಧಾನ ವ್ಯಕ್ತಪಡಿಸಿದ ನಾಲ್‌ರೋಡ್, ಸುಳವಾಡಿ, ಮಾರ್ಟಳ್ಳಿ, ಬಿದರಹಳ್ಳಿ ಹಾಗೂ ಈ ಭಾಗದ ಇತರ ಗ್ರಾಮದ ರೈತರು, ಮಹಿಳೆಯರು ಮಾರ್ಟಳ್ಳಿ ಚಚ್ ಧರ್ಮಗುರು ಮಾರ್ಷಲ್ ಅವರ ನೇತೃತ್ವದಲ್ಲಿ 15 ಕಿಮೀ ಅಂತರವಿರುವ ನಾಲ್‌ರೋಡ್‌ನಿಂದ ವಡಕೆಹಳ್ಳದ ಧರಣಿ ಸ್ಥಳಕ್ಕೆ ಪಾದಯಾತ್ರೆ, ಟ್ರಾಕ್ಸರ್ ಹಾಗೂ ಬೈಕ್ ಮೂಲಕ ಆಗಮಿಸಿದರು. ಈ ವೇಳೆ ಶಾಸಕರು ಹಾಗೂ ಮುಖ್ಯಮಂತ್ರಿ ಅವರ ವಿರುದ್ಧ ಘೋಷಣೆಯನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಶೈಲೇಂದ್ರ ಮಾತನಾಡಿ, ಕಾವೇರಿ ನದಿಯಿಂದ ಈ ಭಾಗಕ್ಕೆ ಏತ ನೀರಾವರಿ ಯೋಜನೆ ರೂಪಿಸಿ ರೈತರು ಹಾಗೂ ಜನರಿಗೆ ಅನುಕೂಲ ಕಲ್ಪಿಸುವಂತೆ ಒತ್ತಾಯಿಸಿ ಕಳೆದ 21 ದಿನಗಳಿಂದಲೂ ರಾತ್ರಿ ಧರಣಿ ನಡೆಸಲಾಗುತ್ತಿದೆ. ಆದರೆ ಈವರೆಗೂ ಸಮಸ್ಯೆ ಬಗೆಹರಿದಿಲ್ಲ. ರೈತರನ್ನು ಸಹನೆಯನ್ನು ಸರ್ಕಾರ ಪರೀಕ್ಷಿಸುತ್ತಿದೆ. ಆದ್ದರಿಂದ ಬೇಡಿಕೆ ಈಡೇರುವವರೆಗೂ ಧರಣಿಯನ್ನು ಕೈ ಬಿಡುವ ಪ್ರಶ್ನೆಯೇ ಇಲ್ಲ. ಸದ್ಯದಲ್ಲಿಯೇ ರೈತರೆಲ್ಲರೂ ಬೆಂಗಳೂರಿಗೆ ಪಾದಯಾತ್ರೆಯನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಮಾರ್ಟಳ್ಳಿ ಗ್ರಾಮ ಘಟಕದ ಅಧ್ಯಕ್ಷ ಅರ್ಪುದರಾಜ್, ಕಾರ್ಯದರ್ಶಿ ಲೂರ್ದುಸ್ವಾಮಿ, ರೈತ ಮುಖಂಡರಾದ ಜಾನ್, ಜೋಸೆಫ್, ಡೇವಿಡ್, ಪೀಟರ್, ಅಂತೋಣಿಸ್ವಾಮಿ, ಪುಟ್ಟಸ್ವಾಮಿ ಇತರರು ಇದ್ದರು.