ಗುಳ್ಯ ಗ್ರಾಮದ ಅಂಚೆ ಕಚೇರಿ ಬಳಿ ಪಿಂಚಣಿ ಹಣ ಪಡೆಯಲು ಕಾದು ಕುಳಿತಿರುವ ಮಹಿಳೆಯರು.
ಹನೂರು: ತಾಲೂಕಿನ ಡಿ.ಎಂ ಸಮುದ್ರ (ಗುಳ್ಯ) ಗ್ರಾಮದಲ್ಲಿ ಸಮರ್ಪಕವಾಗಿ ಪಿಂಚಣಿ ಹಣ ನೀಡದೆ ಸತಾಯಿಸಲಾಗುತ್ತಿದೆ ಎಂದು ಆರೋಪಿಸಿ ಅಂಚೆ ಕಚೇರಿ ನೌಕರನ ವಿರುದ್ಧ ಮಂಗಳವಾರ ಫಲಾನುಭವಿಗಳು ಆಕ್ರೋಶ ವ್ಯಕ್ತಪಡಿಸಿದರು.
ಗುಳ್ಯದ ಅಂಚೆ ಕಚೇರಿಯಲ್ಲಿ ಹಿಂದೆ ಕಾಲಕಾಲಕ್ಕೆ ಪಿಂಚಣಿ ವಿತರಣೆಯಾಗುತ್ತಿತ್ತು. ಯಾವುದೇ ಸಮಸ್ಯೆ ಇರಲಿಲ್ಲ. ಆದರೆ 2 ವರ್ಷದಿಂದೀಚೆಗೆ ಇಲ್ಲಿನ ಪೋಸ್ಟ್‌ಮೆನ್ ಸಮರ್ಪಕವಾಗಿ ಪಿಂಚಣಿ ಹಣ ನೀಡುತ್ತಿಲ್ಲ. 4 ತಿಂಗಳ ಹಣ ನೀಡಬೇಕಿದ್ದು, ಕಳೆದ ಮೂರು ದಿನಗಳಿಂದ ನಾನು ಸೇರಿದಂತೆ ಇತರ ಫಲಾನುಭವಿಗಳು ಕಚೇರಿಗೆ ಆಗಮಿಸುತ್ತಿದ್ದಾರೆ. ಆದರೆ ಪೋಸ್ಟ್‌ಮೆನ್ ಹಣ ನೀಡದೆ ಸತಾಯಿಸುತ್ತಿದ್ದಾರೆ. ಮಹಿಳೆಯರ ಜತೆ ಸೌಜನ್ಯದಿಂದ ವರ್ತಿಸದೆ ಉಡಾಫೆಯಿಂದ ಉತ್ತರಿಸುತ್ತಾರೆ. ಕೂಲಿ ಕೆಲಸ ಬಿಟ್ಟು ಪಿಂಚಣಿ ಪಡೆಯಲು ಆಗಮಿಸಿ ಕಾದು ಕುಳಿತರೂ ಹಣ ನೀಡುತ್ತಿಲ್ಲ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಸಮರ್ಪಕವಾಗಿ ಪಿಂಚಣಿ ಹಣ ವಿತರಿಸುವಂತೆ ಹಾಗೂ ಇಲ್ಲಿನ ಸಿಬ್ಬಂದಿಯನ್ನು ವರ್ಗಾಯಿಸುವಂತೆ ಹೊಸದೊಡ್ಡಿಯ ಕಮಲಮ್ಮ ಒತ್ತಾಯಿಸಿದರು.
ರೈತ ಸಂಘದ ಗೌರವಾಧ್ಯಕ್ಷ ಪುಟ್ಟಸ್ವಾಮಿ ಮಾತನಾಡಿ, ಗ್ರಾಮದ ಅಂಚೆ ಕಚೇರಿಗೆ ಸುತ್ತಮುತ್ತಲ ಗ್ರಾಮದ ವೃದ್ಧರು ಆಗಮಿಸುತ್ತಾರೆ. ಆದರೆ ಇಲ್ಲಿನ ನೌಕರ ಗಿರೀಶ್ ಫಲಾನುಭವಿಗಳಿಗೆ ಪಿಂಚಣಿಯನ್ನು ಸರಿಯಾಗಿ ನೀಡುತ್ತಿಲ್ಲ. ಹಣ ನೀಡಿದರೆ ಕಮಿಷನ್ ಪಡೆಯುತ್ತಿದ್ದಾರೆ. ಜತೆಗೆ ಕರ್ತವ್ಯದ ವೇಳೆಯಲ್ಲೇ ಮದ್ಯ ಸೇವಿಸಿ ಮಹಿಳೆಯರನ್ನು ಅವ್ಯಾಚ ಶಬ್ದಗಳಿಂದ ನಿಂದಿಸುತ್ತಾರೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕ್ರಮವಹಿಸಿ ಈತನನ್ನು ವರ್ಗಾಯಿಸುವಂತೆ ಒತ್ತಾಯಿಸಿದರು.