ಗುಂಡ್ಲುಪೇಟೆ ತಾಲೂಕಿನ ಹಂಗಳಾಪುರ ಗ್ರಾಮದಲ್ಲಿ ಕಾಲುಬಾಯಿ ಲಸಿಕೆ ಮಾಹಿತಿಯನ್ನು ನಮೂದು ಮಾಡುತ್ತಿರುವ ಸಿಬ್ಬಂದಿ
- ಕಾಲುಬಾಯಿ ರೋಗ ತಡೆಗೆ ರಾಸುಗಳಿಗೆ ವ್ಯಾಕ್ಸಿನ್ ಕಾರ್ಯಕ್ರಮ
- ಮೊಬೈಲ್ ತಂತ್ರಾಂಶದಲ್ಲಿ ನಮೂದು ಪ್ರಕ್ರಿಯೆ ತಲೆಬಿಸಿ
ಚಾಮರಾಜನಗರ: ರಾಸುಗಳಿಗೆ ತಗಲುವ ಮಾರಣಾಂತಿಕ ಕಾಯಿಲೆಯಾಗಿರುವ ಕಾಲುಬಾಯಿ ರೋಗಕ್ಕೆ ಹಾಕುತ್ತಿರುವ ಲಸಿಕೆಗೆ ಒಟಿಪಿ ಮತ್ತು ನೆಟ್‌ವರ್ಕ್ ಅಡ್ಡಿಯಾಗುತ್ತಿದೆ.
ರಾಷ್ಟ್ರೀಯ ಜಾನುವಾರು ಆರೋಗ್ಯ ಮತ್ತು ರೋಗ ನಿಯಂತ್ರಣ ಕಾರ್ಯಕ್ರಮದಡಿ ದೇಶದಾದ್ಯಂತ ಜಾನುವಾರುಗಳಿಗೆ ಏ.23ರಿಂದ ಒಂದು ತಿಂಗಳ ಕಾಲ ಲಸಿಕೆ ಹಾಕುವ ಕಾರ್ಯಕ್ರಮ ಶುರುವಾಗಿದೆ. ಜಿಲ್ಲೆಯಲ್ಲಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಲಸಿಕಾ ಕಾರ್ಯಕ್ರಮವನ್ನು ಮುನ್ನಡೆಸುತ್ತಿದ್ದು, ಹಿಂದಿನ ವರ್ಷಕ್ಕಿಂತಲೂ ಭಿನ್ನವಾಗಿ ಡಿಜಿಟಲೀಕರಣಗೊಳ್ಳಲು ಸೂಚಿಸಿರುವ ನಿಯಮಾವಳಿಗಳು ಲಸಿಕೆ ಹಾಕುವ ಕಾರ್ಯದ ವೇಗವನ್ನು ತಗ್ಗಿಸಿದೆ.
ಆಧಾರ್ ಕಡ್ಡಾಯ, ಒಟಿಪಿ ಹೇಳ್ಬೇಕು: ಲಸಿಕಾ ಕಾರ್ಯಕ್ರಮದಲ್ಲಿ ನೋಂದಣಿ ಮಾಡಿಕೊಳ್ಳಲು ಭಾರತ್ ಪಶುಧನ್ ಎಂಬ ಮೊಬೈಲ್ ಆ್ಯಪ್‌ನ ಬಳಕೆ ಮಾಡಲಾಗುತ್ತಿದೆ. ರೈತರ ಆಧಾರ್ ಕಾರ್ಡ್ ನಂಬರ್, ಇದಕ್ಕೆ ಲಿಂಕ್ ಆಗಿರುವ ಮೊಬೈಲ್‌ಗೆ ಬರುವ ಒಟಿಪಿ, ರಾಸುಗಳಿಗೆ ಕಿವಿಗೆ ಹಾಕಿರುವ ಕಿವಿಯೋಲೆಯ ಸಂಖ್ಯೆಯನ್ನು ಆ್ಯಪ್‌ನಲ್ಲಿ ನಮೂದಿಸಿ ಲಸಿಕೆ ಹಾಕಬೇಕಾಗಿದೆ.
ಈ ಹಿಂದಿನ ವರ್ಷಗಳಲ್ಲಿ ರೈತರ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದು ಮಾಡುವುದು, ಒಟಿಪಿ ಹಾಕುವುದು ಕಡ್ಡಾಯವಿರಲಿಲ್ಲ. ಆದರೆ ಈ ವರ್ಷದಿಂದ ಈ ಮಾಹಿತಿಯನ್ನು ಕಡ್ಡಾಯವಾಗಿ ನಮೂದು ಮಾಡಬೇಕಾಗಿದೆ. ಲಸಿಕೆ ಹಾಕುವ ಕಾರ್ಯದಲ್ಲಿ ತೊಡಗಿರುವ ಮೈತ್ರಿ ಕಾರ್ಯಕರ್ತೆಯರು, ಇಲಾಖೆಯ ಡಿ ಗ್ರೂಪ್ ನೌಕರರಿಗೆ ತಲೆಬಿಸಿ ಶುರುವಾಗಿರುವುದೇ ಇಲ್ಲಿ. ಮೊಬೈಲ್ ಇಲ್ಲದ ರೈತರು, ಆಧಾರ್ ನಂಬರ್ ಹೇಳಲು ಹಿಂದೇಟು ಹಾಕುವರು, ಒಟಿಪಿ ಕೊಡಲು ಅನುಮಾನ ಪಡುವವರನ್ನು ಮನವೊಲಿಸುವುದೇ ದೊಡ್ಡ ಸಮಸ್ಯೆಯಾಗುತ್ತಿದೆ.
ನೆಟ್‌ವರ್ಕ್ ಸಮಸ್ಯೆ: ಜಿಲ್ಲೆ ಭಾಗಶಃ ಅರಣ್ಯಪ್ರದೇಶದಿಂದ ಕೂಡಿದೆ. ರೈತರು ಮತ್ತು ರಾಸುಗಳ ಮಾಹಿತಿಯನ್ನು ಮೊಬೈಲ್‌ನಲ್ಲಿ ಪಶುಧನ್ ತಂತ್ರಾಂಶದಲ್ಲಿ ನಮೂದು ಮಾಡಲು ನೆಟ್‌ವರ್ಕ್ ಬೇಕಾಗಿದೆ. ಬೆಟ್ಟ, ಗುಡ್ಡಗಾಡು ಪ್ರದೇಶಗಳಲ್ಲಿ ನೆಟ್‌ವರ್ಕ್ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ. ಇಂತಹ ಕಡೆಗಳಲ್ಲಿ ತಂತ್ರಾಂಶವನ್ನು ನಮೂದು ಮಾಡಲು ಸಿಬ್ಬಂದಿ ಪರದಾಡಬೇಕಾಗಿದೆ. ಅಲ್ಲದೇ, ಒಟಿಪಿ ಹೇಳಲು ಮೊಬೈಲ್ ಇದ್ದಿದ್ದರೆ ರೈತರನ್ನೇ ಸ್ಥಳದಲ್ಲಿ ನಿಲ್ಲಿಸಿ ಫೋಟೋ ತೆಗೆದು ಆ್ಯಪ್‌ನಲ್ಲಿ ಅಪ್ಲೋಡ್ ಮಾಡಬೇಕಾಗಿದ್ದು, ಈ ಕಾರ್ಯಕ್ಕೂ ನೆಟ್‌ವರ್ಕ್ ಬೇಕಾಗಿರುವುದರಿಂದ ಕಾಡಂಚಿನ ಗ್ರಾಮಗಳಲ್ಲಿ ಲಸಿಕಾ ಕಾರ್ಯಕ್ರಮಕ್ಕೆ ತಂತ್ರಾಂಶವೇ ದೊಡ್ಡ ತೊಡಕಾಗಿಬಿಟ್ಟಿದೆ. ಲಸಿಕಾ ಕಾರ್ಯಕ್ರಮದಲ್ಲಿ ದೇಶದಲ್ಲಿ ಪ್ರತಿ ವರ್ಷ ಕರ್ನಾಟಕ ರಾಜ್ಯ ಶೇ.90ಕ್ಕಿಂತಲೂ ಹೆಚ್ಚು ಪ್ರಮಾಣದಲ್ಲಿ ಗುರಿ ತಲುಪುತ್ತಿದೆ. ಆದರೆ ಈ ಸಲ ಎದುರಾಗಿರುವ ತಾಂತ್ರಿಕ ಅಡಚಣೆ ಲಸಿಕೀಕರಣದ ವೇಗವನ್ನು ತಗ್ಗಿಸಿದೆ.
ದಿನಕ್ಕೆ 20-30ರಷ್ಟು ಮಾತ್ರ ಪ್ರಗತಿ: ತಾಂತ್ರಿಕ ಸಮಸ್ಯೆ ಇಲ್ಲದ ಹಿಂದಿನ ವರ್ಷಗಳಲ್ಲಿ ದಿನಕ್ಕೆ 100 ರಾಸುಗಳಿಗೆ ಲಸಿಕೆಯನ್ನು ಹಾಕಿಸಲಾಗುತ್ತಿದೆ. ಬಹುಬೇಗನೆ ಲಸಿಕಾ ಕಾರ್ಯಕ್ರಮ ಮುಗಿಸಿ ಗುರಿ ತಲುಪಲಾಗುತ್ತಿತ್ತು. ಆದರೆ ಈಗ ದಿನಕ್ಕೆ 20-30 ರಾಸುಗಳಿಗೆ ಮಾತ್ರ ಲಸಿಕೆಯನ್ನು ಹಾಕಲಾಗುತ್ತಿದೆ. ಒಂದು ಹಸುವಿಗೆ ಲಸಿಕೆ ಹಾಕಲು ಹೆಚ್ಚು ಸಮಯ ಹಿಡಿಯುತ್ತಿದೆ. ಅಲ್ಲದೇ ಲಸಿಕೆಯ ತೇವಾಂಶ ಕಡಿಮೆಯಾದರೆ ಉಪಯೋಗಿಸಲು ತೊಂದರೆಯಾಗುತ್ತದೆ. ಇದರಿಂದಾಗಿ ಒಂದು ತಿಂಗಳ ಕಾಲ ನಡೆಯುವ ಲಸಿಕಾ ಕಾರ್ಯಕ್ರಮವು ಮತ್ತಷ್ಟು ದಿನ ಮುಂದುವರೆಯುವುದರಲ್ಲಿ ಅನುಮಾನವಿಲ್ಲ.
10 ಸಾವಿರ ರಾಸುಗಳಿಗೆ ಲಸಿಕೆ: ಪಶುಧನ್ ಮೊಬೈಲ್ ಆ್ಯಪ್‌ನಲ್ಲಿ ರಾಸುಗಳ ಮಾಹಿತಿ ನಮೂದು ಮಾಡಬೇಕಾಗಿರುವುದರ ನಡುವೆ 10,500 ರಾಸುಗಳಿಗೆ ಲಸಿಕೆ ಹಾಕಲಾಗಿದೆ. ತಂತ್ರಾಂಶದಲ್ಲಿ 7500 ರಾಸುಗಳ ಮಾಹಿತಿಯನ್ನು ಅಳವಡಿಸಲಾಗಿದೆ.
221561 ರಾಸುಗಳಿಗೆ ಲಸಿಕೆ ಗುರಿ:
ಜಿಲ್ಲೆಯಲ್ಲಿ 9ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಕಾರ್ಯಕ್ರಮದಲ್ಲಿ ಚಾಮರಾಜನಗರ ತಾಲೂಕಿನ 65202, ಗುಂಡ್ಲುಪೇಟೆ ತಾಲೂಕಿನ 61176, ಕೊಳ್ಳೇಗಾಲ ತಾಲೂಕಿನಲ್ಲಿ 24024, ಹನೂರು ತಾಲೂಕಿನ 62607, ಯಳಂದೂರು ತಾಲೂಕಿನ 8552 ಸೇರಿ ಒಟ್ಟು 22156 ಜಾನುವಾರುಗಳಿಗೆ ಲಸಿಕೆ ಹಾಕಬೇಕಾಗಿದೆ. 222400 ಡೋಸ್ ಲಸಿಕೆಗಳು ಲಭ್ಯವಿದೆ.
"
ಕಾಲುಬಾಯಿ ಲಸಿಕಾ ಕಾರ್ಯಕ್ರಮದ ಮಾಹಿತಿಯನ್ನು ಮೊಬೈಲ್ ತಂತ್ರಾಂಶದಲ್ಲಿ ನಮೂದು ಮಾಡುವಾಗ ಒಟಿಪಿ, ನೆಟ್‌ವರ್ಕ್ ಸಮಸ್ಯೆಯ ಅಡಚಣೆ ಉಂಟಾಗುತ್ತಿದೆ. ಈ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ.
— ಡಾ.ಬಿ.ಮಂಜುನಾಥ್ ಉಪ ನಿರ್ದೇಶಕ, ಜಿಲ್ಲೆ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಚಾಮರಾಜನಗರ
"
ಡಿಜಿಟಲೀಕರಣದ ಹೆಸರಿನಲ್ಲಿ ಜಾನುವಾರುಗಳಿಗೆ ಕಾಲುಬಾಯಿ ರೋಗಕ್ಕೆ ಲಸಿಕೆ ಹಾಕಲು ಅಡಚಣೆಯಾಗದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಕ್ರಮವಹಿಸಬೇಕು. ಗ್ರಾಮೀಣ ಭಾಗದಲ್ಲಿರುವ ಸರ್ಕಾರಿ ಗೋಮಾಳಗಳನ್ನು ಬಂಡವಾಳಶಾಹಿಗಳಿಗೆ ನೀಡಲು ಡಿಜಿಟಲೀಕರಣದ ಅಂಕಿ-ಅಂಶವನ್ನು ಬಳಕೆ ಮಾಡಿಕೊಳ್ಳುವ ಹುನ್ನಾರ ನಡೆಯಲೂಬಾರದು.
— ಹಳ್ಳಿಕೆರೆಹುಂಡಿ ಭಾಗ್ಯರಾಜ್, ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ, ಚಾಮರಾಜನಗರ