ಚಾಮರಾಜನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಆಯೋಜಿಸಿದ್ದ ತರಬೇತಿ ಶಿಬಿರವನ್ನು ಡಿಸಿ ಶ್ರೀರೂಪಾ ಉದ್ಘಾಟಿಸಿದರು. ಬಸವರಾಜು ಹಡಪದ, ಪಿ.ಚಂದ್ರು, ವಿಜಯ ಕುಮಾರ್, ಮಹದೇವ್, ದೀಪು ಇದ್ದರು.
- ಹರಾಜು ಪ್ರಕ್ರಿಯೆಯಲ್ಲಿ ಕನ್ನಡಿಗರಿಗೆ ಅನ್ಯಾಯವೆಂದು ಆರೋಪ
- ಸಾರ್ವಜನಿಕರಿಂದ ತರಬೇತಿ ಕಾರ್ಯಕ್ರಮ ಬಹಿಷ್ಕಾರ
ಚಾಮರಾಜನಗರ : ಅಬಕಾರಿ ಸನ್ನದುಗಳ ಇ-ಹರಾಜಿನಲ್ಲಿ ಕನ್ನಡಿಗರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಅನ್ಯಾಯವಾಗಲಿದೆ ಎಂದು ಆರೋಪಿಸಿ ಮುಖಂಡರು ಸಭೆ ಬಹಿಷ್ಕಾರ ಮಾಡಿ ಹೊರ ನಡೆದರು.
ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ರಾಜ್ಯ ಅಬಕಾರಿ ಇಲಾಖೆ ವತಿಯಿಂದ ಅಬಕಾರಿ ಸನ್ನದುಗಳ ಇ-ಹರಾಜು ಪ್ರಕ್ರಿಯೆ ಕುರಿತು ಸಾರ್ವಜನಿಕರಿಗೆ ಬುಧವಾರ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಮುಖಂಡರಾದ ವೆಂಕಟರಮಣಸ್ವಾಮಿ (ಪಾಪು) ಮತ್ತು ಪು.ಶ್ರೀನಿವಾಸ್ ನಾಯಕ ಮಾತನಾಡಿ, ಜಿಲ್ಲೆ ಅತ್ಯಂತ ಹಿಂದುಳಿದ ಹಾಗು ಪರಿಶಿಷ್ಟ ಜಾತಿ ಹಾಗೂ ಪಂಗಡದವರು ಹೆಚ್ಚು ವಾಸಿಸುವ ಪ್ರದೇಶವಾಗಿದೆ. ಸರ್ಕಾರ ಹಾಗೂ ಅಬಕಾರಿ ಸಚಿವರು ಚಾಮರಾಜನಗರ ಜಿಲ್ಲೆಯ ಎಲ್ಲಾ ಸನ್ನದನ್ನು ಸಾಮಾನ್ಯ ವರ್ಗಕ್ಕೆ ನಿಗಧಿಪಡಿಸಿದೆ. ಇದರಿಂದ ಎಸ್ಸಿ, ಎಸ್ಟಿಗಳು ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ. ಇದನ್ನು ಪರಿಷ್ಕರಣೆ ಮಾಡಬೇಕು. ಚಾಮರಾಜನಗರಕ್ಕೆ ಕನಿಷ್ಟ ಮೂರು ಪರವಾನಗಿಯನ್ನು ಎಸ್‌ಸಿ,ಎಸ್‌ಟಿ ಹಾಗೂ ಒಬಿಸಿಗಳಿಗೆ ನೀಡಬೇಕು. ಹೀಗಿದ್ದರೆ ನಾವು ಇ.ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುತ್ತೇವೆ. ಇಲ್ಲವೇ ಜ.19 ರಂದು ನಡೆಯಲಿರುವ ಇ-ಹರಾಜು ಪ್ರಕ್ರಿಯೆಗೆ ಅಡ್ಡಿ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಮುಖಂಡ ಸಿ.ಬಿ.ಸೂರ್ಯಕುಮಾರ್ ಮಾತನಾಡಿ, ಸನ್ನದು ಖರೀದಿಗೆ ಠೇವಣಿ ಹಣ 80 ಲಕ್ಷ ರೂ, ನಿಗಧಿ ಮಾಡಿದ್ದು, ಇದನ್ನು ತಂಬುವುದು ಈ ವರ್ಗಗಳಿಗೆ ಕಷ್ಟವಾಗುತ್ತದೆ. ಕನಿಷ್ಟ 10 ಲಕ್ಷ ರೂ. ನಿಗಧಿಯಾಗಬೇಕು. ಇದೊಂದು ಆವೈಜ್ಞಾನಿಕ ಇ-ಹರಾಜು ಆಗಿದ್ದು, ತರಬೇತಿಯ ಅವಶ್ಯಕತೆ ಇಲ್ಲ. ಕರ್ನಾಟಕದಲ್ಲಿ ನಡೆಯುವ ಸನ್ನದು ಹರಾಜಿಗೆ ಹೊರ ರಾಜ್ಯದವರು ಭಾಗವಹಿಸಲು ಅವಕಾಶ ನೀಡಿ, ಕನ್ನಡಿಗರಿಗೆ ಅನ್ಯಾಯ ಮಾಡಲಾಗಿದೆ. ನಮ್ಮ ರಾಜ್ಯದಲ್ಲಿ ನಮಗೆ ಮೊದಲ ಪ್ರಾತಿನಿಧ್ಯ ನೀಡಬೇಕು ಎಂದು ಆಗ್ರಹಿಸಿದರು. ಬಳಿಕ ಮುಖಂರು ಸಭೆಯನ್ನು ಬಹಿಷ್ಕರಿಸಿ ಹೊರನಡೆದರು.
ಬಳಿಕ ಅಧಿಕಾರಿಗಳು ಸಭೆಯಲ್ಲಿದ್ದವರಿಗೆ ತರಬೇತಿ ನೀಡಿದರು. ಶಿಬಿರದಲ್ಲಿ ಅಬಕಾರಿ ಜಂಟಿ ಆಯುಕ್ತ ಬಸವರಾಜು ಹಡಪದ, ಅಬಕಾರಿ ಉಪ ಆಯುಕ್ತ ಪಿ.ಚಂದ್ರು, ಉಪ ಅಧೀಕ್ಷಕ ವಿಜಯ ಕುಮಾರ್, ಅಬಕಾರಿ ಇನ್ಸ್ಪೆಕ್ಟರ್‌ಗಳಾದ ಮಹದೇವ್, ದೀಪು, ದಯಾನಂದ ಇನ್ನಿತರರು ಭಾಗವಹಿಸಿದ್ದರು.
ಆದಾಯ ತರುವುದರಲ್ಲಿ 2ನೇ ಸ್ಥಾನ:
ಸರ್ಕಾರಕ್ಕೆ ಆದಾಯ ತಂದು ಕೊಡುವ ಇಲಾಖೆಗಳ ಪೈಕಿ ಅಬಕಾರಿ ಇಲಾಖೆಯು ಎರಡನೇ ಸ್ಥಾನದಲ್ಲಿದೆ ಎಂದು ಜಿಲ್ಲಾಧಿಕಾರಿ ಶ್ರೀರೂಪಾ ಹೇಳಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಬಕಾರಿ ಸನ್ನದುಗಳ ಇ-ಹರಾಜು ಪ್ರಕ್ರಿಯೆ ಕುರಿತು ಸಾರ್ವಜನಿಕ ತರಬೇತಿಯನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಜ. 19ಕ್ಕೆ ಹರಾಜು ಪ್ರಕ್ರಿಯೆ ನಡೆಯಲಿದ್ದು, ಅನ್‌ಲೈನ್ ಬಿಡ್ ಇರುತ್ತದೆ. ಇದರ ವ್ಯವಹಾರಗಳು ಕೋಟಿ ಲೆಕ್ಕದಲ್ಲಿ ಇರುತ್ತದೆ. ಆದರೆ, ಎಲ್ಲರು ಭಾಗವಹಿಸಬೇಕೆಂಬ ಉದ್ದೇಶದಿಂದ ಸಾರ್ವಜನಿಕರವಾಗಿ ಹರಾಜು ಮಾಡಲಾಗುತ್ತದೆ ಎಂದರು.