ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆ ಹಿನ್ನೆಲೆಯಲ್ಲಿ ಚಾಮರಾಜನಗರದ ಜಿಲ್ಲಾಸ್ಪತ್ರೆ ಬಳಿ ಪೋಸ್ಟರ್ ಅಂಟಿಸಿ ಪ್ರಚಾರ ಮಾಡಿರುವುದು. ದೀಪು ಬುದ್ಧೆ, ದೊಡ್ಡಸ್ವಾಮಿ, ತ್ರಿಷಾ, ಶಿವಲೀಲಾ ಬೆಟಗೇರಿ ಇದ್ದರು.  
ಚಾಮರಾಜನಗರ

ಬಹಿರಂಗವಾಗಿ ಗುರುಸಿಕೊಂಡವರಷ್ಟೇ ಭಾಗಿ

ಕಿರಣ್ ಮಾದರಹಳ್ಳಿ

ಪ್ರಮುಖ ಮುಖ್ಯಾಂಶಗಳು

  • ಲಿಂಗತ್ವ ಅಲ್ಪಸಂಖ್ಯಾತರ ಸರ್ವೆ ಪೂರ್ಣ
  • ನಿರೀಕ್ಷಿತ ಮಟ್ಟದಲ್ಲಿ ಪಾಲ್ಗೊಳ್ಳದ ಸಮುದಾಯ
  • ಸರ್ವೆಯಲ್ಲಿ ಎಷ್ಟು ಜನರು ಭಾಗಿ?
ಚಾಮರಾಜನಗರ: ಜಿಲ್ಲೆಯಲ್ಲಿರುವ ಲಿಂಗತ್ವ ಅಲ್ಪಸಂಖ್ಯಾತರ ಮೂಲ ಹಂತದ ಸಮೀಕ್ಷೆ ಪೂರ್ಣಗೊಂಡಿದ್ದು, ಬಹಿರಂಗವಾಗಿ ಗುರುತಿಸಿಕೊಳ್ಳುವವರು ಸರ್ವೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ಲಿಂಗತ್ವ ಅಲ್ಪಸಂಖ್ಯಾತರ ಜನಸಂಖ್ಯೆ, ಶೈಕ್ಷಣಿಕ ಮಟ್ಟ, ಉದ್ಯೋಗ, ಶಿಕ್ಷಣದಲ್ಲಿ ಮೀಸಲಾತಿ, ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿ-ಗತಿಗಳ ಮಾಹಿತಿಯನ್ನು ಸಂಗ್ರಹಿಸಿ ಮುಖ್ಯವಾಹಿನಿಗೆ ತರುವುದು ಸರ್ವೆಯ ಉದ್ದೇಶವಾಗಿತ್ತು. ಜಿಲ್ಲೆಯ ಎಲ್ಲ ತಾಲೂಕುಗಳ ಆಸ್ಪತ್ರೆಗಳಿಗೆ ಲೈಂಗಿಕ ಲಿಂಗತ್ವ ಅಲ್ಪಸಂಖ್ಯಾತರನ್ನು ಕರೆಸಿ ಅವರ ಮಾಹಿತಿಗಳನ್ನು ಟ್ಯಾಬ್‌ನಲ್ಲಿ ಅಪ್ಲೋಡ್ ಮಾಡಲಾಗಿದೆ. ಈ ಸಮೀಕ್ಷಾ ಕಾರ್ಯದಲ್ಲಿ ಸಮಾಜದಲ್ಲಿ ಬಹಿರಂಗವಾಗಿ ಗುರುತಿಸಿಕೊಂಡಿರುವ ಲಿಂಗತ್ವ ಅಲ್ಪಸಂಖ್ಯಾತರು ಮಾತ್ರ ಪಾಲ್ಗೊಂಡಿದ್ದಾರೆ.
ಸರ್ವೆಯಲ್ಲಿ ಎಷ್ಟು ಜನರು ಭಾಗಿ?:
ಜಿಲ್ಲೆಯಲ್ಲಿ ನಡೆದ ಸರ್ವೆಯಲ್ಲಿ 501 ಲಿಂಗತ್ವ ಅಲ್ಪಸಂಖ್ಯಾತರು ಪಾಲ್ಗೊಂಡಿದ್ದಾರೆ. ಯಳಂದೂರು ತಾಲೂಕಿನಲ್ಲಿ 171, ಹನೂರು ತಾಲೂಕಿನಲ್ಲಿ 163, ಚಾಮರಾಜನಗರ ತಾಲೂಕಿನಲ್ಲಿ 89, ಕೊಳ್ಳೇಗಾಲ ತಾಲೂಕಿನಲ್ಲಿ 50, ಗುಂಡ್ಲುಪೇಟೆ ತಾಲೂಕಿನಲ್ಲಿ 28 ಲಿಂಗತ್ವ ಅಲ್ಪಸಂಖ್ಯಾತರು ಸರ್ವೆಯಲ್ಲಿ ಪಾಲ್ಗೊಂಡಿದ್ದಾರೆ. ಜಿಲ್ಲೆಯಲ್ಲಿ ಇದಕ್ಕೂ ಅಧಿಕ ಸಂಖ್ಯೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರು ಇದ್ದಾರೆ. ಈ ಸಮುದಾಯಕ್ಕಾಗಿ ಕೆಲಸ ಮಾಡುತ್ತಿರುವ ಸಮತಾ ಸೊಸೈಟಿ ಸಂಸ್ಥೆ ನೀಡಿರುವ ಮಾಹಿತಿ ಪ್ರಕಾರ, ಕೊಳ್ಳೇಗಾಲ-888, ಚಾಮರಾಜನಗರ-830, ಯಳಂದೂರು-656, ಹನೂರು-324, ಗುಂಡ್ಲುಪೇಟೆ-321 ಸೇರಿ ಒಟ್ಟು 3019 ಲಿಂಗತ್ವ ಅಲ್ಪಸಂಖ್ಯಾತರು ಇದ್ದಾರೆ. ಆದರೆ ಇವರಲ್ಲಿ 501 ಲಿಂಗತ್ವ ಅಲ್ಪಸಂಖ್ಯಾತರು ಮಾತ್ರ ಭಾಗವಹಿಸಿದ್ದಾರೆ.
ನಿರೀಕ್ಷೆ ಮಟ್ಟದಲ್ಲಿ ಭಾಗಿಯಾಗಿಲ್ಲ:
ನಿರೀಕ್ಷಿತ ಮಟ್ಟದಲ್ಲಿ ಲಿಂಗತ್ವ ಅಲ್ಪಸಂಖ್ಯಾತರು ಸರ್ವೆಯಲ್ಲಿ ಪಾಲ್ಗೊಂಡಿಲ್ಲ. ಈ ಸಮುದಾಯವನ್ನು ಇಂದಿಗೂ ಸಹ ಸಮಾಜ ತಾತ್ಸಾರದಿಂದ ಕಾಣುತ್ತಿದೆ. ಕೀಳರಿಮೆಯಿಂದ ನೋಡುತ್ತಿದೆ. ದೈಹಿಕ ಮತ್ತು ಮಾನಸಿಕ ಬದಲಾವಣೆಯಿಂದಾಗಿ ಕೆಲವರು ಕುಟುಂಬವನ್ನೇ ತೊರೆದು ಒಬ್ಬಂಟಿಗರಾಗಿದ್ದಾರೆ. ಜೀವನ ನಿರ್ವಹಣೆಯ ಸವಾಲನ್ನು ಎದುರಿಸುತ್ತಿದ್ದಾರೆ. ಉದ್ಯೋಗ ದೊರೆಯದೆ ಭಿಕ್ಷಾಟನೆ, ಲೈಂಗಿಕ ವೃತ್ತಿಯಲ್ಲಿ ತೊಡಗಿದ್ದಾರೆ. ಇನ್ನು ಕೆಲವರು ಸಮಾಜದ ದೃಷ್ಟಿಕೋನಕ್ಕೆ ಅಂಜಿ ತನ್ನ ಬಗ್ಗೆ ಎಲ್ಲೂ ಬಹಿರಂಗ ಪಡಿಸಿಕೊಳ್ಳುತ್ತಿಲ್ಲ. ಇತ್ತ ಇಚ್ಛೆಯ ಜೀವನ ನಡೆಸಲು ಸಮಾಜದ ಎದುರು ಸೋತಿದ್ದಾರೆ. ಇಂತವರು ಛಲದ ಬದುಕು ನಡೆಸುತ್ತಿದ್ದಾರೆ. ಹೀಗಾಗಿ ಸಮಾಜದಲ್ಲಿ ಗುರುತಿಸಿಕೊಂಡಿರುವವರು ಸರ್ವೆಯಲ್ಲಿ ಪಾಲ್ಗೊಂಡಿದ್ದು, ಸಮಾಜದ ಎದುರು ಗುರುತಿಸಿಕೊಳ್ಳಲು ಆಗದವರು ಭಾಗಿಯಾಗಿಲ್ಲ. ಇನ್ನು ಸರ್ವೆಯಲ್ಲಿ ಸ್ವಇಚ್ಛೆ ಇರುವವರು ಮಾತ್ರ ಪಾಲ್ಗೊಳ್ಳಬಹುದಾಗಿತ್ತು.
ಸೌಲಭ್ಯಗಳಿಗೆ ಪರಿಗಣನೆ?
ಸಮೀಕ್ಷೆಯಲ್ಲಿ ಪಾಲ್ಗೊಂಡಿರುವ ಲಿಂಗತ್ವ ಅಲ್ಪಸಂಖ್ಯಾತರ ಲೆಕ್ಕದ ಪ್ರಕಾರವೇ ಮುಂದಿನ ದಿನಗಳಲ್ಲಿ ಸರ್ಕಾರದಿಂದ ಸೌಲಭ್ಯಗಳು ದೊರೆಯುವುದಾದರೆ ತುಂಬಾ ಕಷ್ಟವಾಗಲಿದೆ. ಸರ್ವೆಯಲ್ಲಿ ಕಡಿಮೆ ಜನರು ಪಾಲ್ಗೊಂಡಿರುವುದು ಸವಲತ್ತುಗಳ ಗುರಿಯನ್ನು ಕಡಿಮೆ ಮಾಡುವ ಸಾಧ್ಯತೆಯನ್ನು ಹುಟ್ಟುಹಾಕಿದೆ. ಇನ್ನು ಜಿಲ್ಲೆಯಲ್ಲಿ ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಹಣವನ್ನು 59 ಲಿಂಗತ್ವ ಅಲ್ಪಸಂಖ್ಯಾತರು ಪಡೆದುಕೊಳ್ಳುತ್ತಿದ್ದಾರೆ. ಟ್ರ್ಯಾನ್ಸ್ ಜಂಡರ್ ಕಾರ್ಡ್ ಪಡೆದಿರುವವರಿಗೆ ಗೃಹಲಕ್ಷ್ಮಿ ಹಣ ಬರುತ್ತಿದೆ.
ಬದುಕು ದುಸ್ಥರ:
ಜಿಲ್ಲೆಯಲ್ಲಿರುವ ಲಿಂಗತ್ವ ಅಲ್ಪಸಂಖ್ಯಾತರ ಬದುಕು ದುಸ್ಥರವಾಗಿದೆ. ಆರ್ಥಿಕವಾಗಿ ತೀರ ಹಿಂದುಳಿದಿರುವ ಈ ಸಮುದಾಯಕ್ಕೆ ಸರ್ಕಾರದ ಸೌಲಭ್ಯಗಳು ಅಗಾಧ ಪ್ರಮಾಣದಲ್ಲಿ ದೊರೆಯಬೇಕಾಗಿದೆ. ಶಿಕ್ಷಣದಿಂದ ವಂಚಿತರಾಗಿರುವ ಲಿಂಗತ್ವ ಅಲ್ಪಸಂಖ್ಯಾತರು ಮರಳಿ ಶಿಕ್ಷಣ ಪಡೆಯಲು ಬದುಕಿನ ಅನಿವಾರ್ಯತೆಗಳು ಅಡ್ಡಿಯಾಗಿವೆ. ಮನೆಗಳಿಂದ ಹೊರಬಂದಿದ್ದರೂ ದುಡಿಮೆಯ ಹಣದಲ್ಲಿ ಒಂದು ಪಾಲನ್ನು ಕುಟುಂಬಕ್ಕೆ ಕಳುಹಿಸಿಕೊಡುವ ಮಾತೃ ಹೃದಯ ಇವರಲ್ಲಿ ಮಿಡಿಯುತ್ತಿದೆ. ಸ್ವಯಂ ಉದ್ಯೋಗ ಮಾಡುವ ಶಕ್ತಿ ಇದ್ದರೂ ಬಂಡವಾಳದ ಕೊರತೆ ಲಿಂಗತ್ವ ಅಲ್ಪಸಂಖ್ಯಾತರನ್ನು ಕಾಡುತ್ತಿದೆ. ಸರ್ಕಾರದಿಂದ ಸಿಗುವ ಪ್ರೋತ್ಸಾಹಧನದಲ್ಲಿ ಕೆಲವರು ಮಾತ್ರ ಸಣ್ಣ ಮಟ್ಟದ ಉದ್ಯಮ ಪ್ರಯತ್ನಗಳನ್ನು ಮಾಡಿದ್ದಾರೆ. ಬಹುಪಾಲು ಜನರು ಪ್ರಯತ್ನದಲ್ಲಿ ವಿಲರಾಗಿದ್ದಾರೆ. ಇವರ ಜೀವನದ ಮಟ್ಟವನ್ನು ಸುಧಾರಣೆ ಮಾಡಲು ಹೆಚ್ಚಿನ ಗಮನ ಹರಿಸಬೇಕಾಗಿದೆ.
ಪ್ರತಿಭೆಗಳಿಗಿಲ್ಲ ವೇದಿಕೆ:
ಲಿಂಗತ್ವ ಅಲ್ಪಸಂಖ್ಯಾತರಲ್ಲಿ ಬಹುಮುಖ ಪ್ರತಿಭೆಗಳಿದ್ದಾರೆ. ನೃತ್ಯ, ಗಾಯನ ಮತ್ತು ನಟನೆಯಲ್ಲಿ ಮಾಗಿದ ಕಲಾವಿದರನ್ನೂ ಮೀರಿಸುವಷ್ಟು ಕೌಶಲ್ಯವಿದೆ. ಆದರೆ ಸೂಕ್ತ ವೇದಿಕೆ ಇಲ್ಲದೆ ಪ್ರತಿಭೆಗಳು ಮೂಲೆಗುಂಪಾಗುತ್ತಿವೆ. ಸಮುದಾಯದ ಸಂಘ-ಸಂಸ್ಥೆಗಳ ವಾರ್ಷಿಕ ಕಾರ್ಯಕ್ರಮಗಳಲ್ಲಿ ತಮಗೆ ತಾವೇ ವೇದಿಕೆ ಸೃಷ್ಟಿಕೊಳ್ಳಲಾಗುತ್ತಿದೆ. ಜಿಲ್ಲಾಡಳಿತದಿಂದ ಬೀದಿ ನಾಟಕಗಳು, ಮಹಾಪುರುಷರ ಜಯಂತಿಗಳು ಮತ್ತು ಇನ್ನಿತರೆ ಕಾರ್ಯಕ್ರಮಗಳಲ್ಲಿ ಲಿಂಗತ್ವ ಅಲ್ಪಸಂಖ್ಯಾತರಿಗೂ ವೇದಿಕೆ ನೀಡಬೇಕಾಗಿದೆ.
ಲಿಂಗತ್ವ ಅಲ್ಪಸಂಖ್ಯಾತರ ಸರ್ವೆಗೆ ನಮ್ಮ ಸಂಘದಿಂದ ಸಂಪೂರ್ಣ ಸಹಕಾರ ನೀಡಲಾಗಿತ್ತು. ಸಮಾಜದಲ್ಲಿ ಗುರುತಿಸಿಕೊಂಡಿರುವವರು ಮಾತ್ರ ಸರ್ವೆಯಲ್ಲಿ ಪಾಲ್ಗೊಂಡಿದ್ದಾರೆ.
ದೀಪಾ ಬುದ್ಧೆ, ಸಮಾಜ ಸೊಸೈಟಿ ಅಧ್ಯಕ್ಷೆ, ಚಾಮರಾಜನಗರ
ಜಿಲ್ಲೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಸರ್ವೆ ಪೂರ್ಣಗೊಂಡಿದೆ. ಸ್ವಇಚ್ಛೆಯಿಂದ ಭಾಗವಹಿಸಿರುವವರು ಮಾತ್ರ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದಾರೆ. ಸಮೀಕ್ಷೆಗೆ ಸಮುದಾಯದವರೇ ಭಾಗವಹಿಸಿದ್ದರು.
ಶಿವಲೀಲಾ ಬೆಟಗೇರಿ, ಅಭಿವೃದ್ಧಿ ನಿರೀಕ್ಷಕಿ ಪ್ರಭಾರ, ಮಹಿಳಾ ಅಭಿವೃದ್ಧಿ ನಿಗಮ, ಚಾಮರಾಜನಗರ