ಯಳಂದೂರಿನ ಸಿಡಿಎಸ್ ಸಮುದಾಯ ಭವನದಲ್ಲಿ ಸೋಮವಾರ ಆಯೋಜಿಸಿದ್ದ ರಸ್ತೆಬದಿ ವ್ಯಾಪಾರಿಗಳ ಸಭೆಯಲ್ಲಿ ಮುಖ್ಯಾಧಿಕಾರಿ ಎಂ.ಪಿ.ಮಹೇಶ್‌ಕುಮಾರ್ ಮಾತನಾಡಿದರು. ಸಿಪಿಐ ಸುಬ್ರಹ್ಮಣ್ಯ ಆರೋಗ್ಯಾಧಿಕಾರಿ ರಾಘವೇಂದ್ರ ಇದ್ದರು. 
ಚಾಮರಾಜನಗರ

ಫುಟ್‌ಪಾತ್ ಒತ್ತುವರಿ ತೆರವಿಗೆ ವಾರದ ಗಡುವು

ಯಳಂದೂರು:

ಪಟ್ಟಣ ಪಂಚಾಯಿತಿ ವತಿಯಿಂದ ಪಟ್ಟಣದ ಮುಖ್ಯರಸ್ತೆಯಲ್ಲಿರುವ ಫುಟ್‌ಪಾತ್ ತೆರವುಗೊಳಿಸಲು ಒಂದು ವಾರದ ಗಡುವು ನೀಡಲಾಗಿದ್ದು ಅಲ್ಲಿಯವರೆಗೆ ಪಟ್ಟಣ ಪಂಚಾಯಿತಿ ನಿಗದಿಪಡಿಸಿರುವ ಸ್ಥಳದಲ್ಲಿ ಬೀದಿಬದಿ ವ್ಯಾಪಾರಿಗಳು ತಮ್ಮ ಅಂಗಡಿ-ಮುಂಗಟ್ಟುಗಳನ್ನು ಇಟ್ಟುಕೊಳ್ಳಬೇಕು ಎಂದು ಮುಖ್ಯಾಧಿಕಾರಿ ಎಂ.ಪಿ.ಮಹೇಶ್‌ಕುಮಾರ್ ಸೂಚನೆ ನೀಡಿದರು.

ಇದರಿಂದ ಪಾದಚಾರಿಗಳ ಓಡಾಟಕ್ಕೆ ತೊಂದರೆಯಾಗಿದೆ ಎಂದರು.

ಎಲ್ಲ ಕಡೆ ಏಕಾಏಕಿ ರಸ್ತೆ ಒತ್ತುವರಿ ತೆರವು ಮಾಡಲಾಗುತ್ತಿದೆ. ಆದರೆ ಇಲ್ಲಿ ನಾವು ಒಂದು ವಾರದ ಗಡುವು ನೀಡುತ್ತಿದ್ದೇವೆ. ಅಲ್ಲಿಯ ತನಕ ಪಟ್ಟಣದ ಸಂತೆ ಮೈದಾನ ಹಾಗೂ ಕೆ.ಕೆ.ರಸ್ತೆಯಲ್ಲಿರುವ ತಾಲೂಕು ಕಚೇರಿ ಮುಂಭಾಗ ಇರುವ ಖಾಲಿ ಸ್ಥಳದಲ್ಲಿ ವ್ಯಾಪಾರ ಮಾಡಿಕೊಳ್ಳಲು ನಾವು ಎಲ್ಲ ಸೌಲಭ್ಯಗಳನ್ನು ನೀಡಲು ತಯಾರಿದ್ದೇವೆ. ಹಾಗಾಗಿ ಎಲ್ಲರೂ ವಾರದೊಳಗೆ ತಮ್ಮ ಅಂಗಡಿ ಮುಂಗಟ್ಟುಗಳನ್ನು ಇಲ್ಲಿಗೆ ಸ್ಥಳಾಂತರಿಸಿಕೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ಸೋಮವಾರ ಪಂಚಾಯಿತಿಯಿಂದಲೇ ತೆರವು ಕಾರ್ಯಾಚರಣೆ ಕೈಗೊಳ್ಳಲಾಗುವುದು ಎಂದರು.
ಸಿಪಿಐ ಸುಬ್ರಹ್ಮಣ್ಯ ಮಾತನಾಡಿ, ಪಟ್ಟಣದ ಬಳೇಪೇಟೆ, ಬಸ್ ನಿಲ್ದಾಣ, ದೊಡ್ಡಂಗಡಿ ಬೀದಿ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಫುಟ್‌ಪಾತ್‌ಗಳಲ್ಲಿ ವ್ಯಾಪಾರ ಮಾಡಲಾಗುತ್ತಿದ್ದು ಇದರಿಂದ ವಾಹನ ಓಡಾಟ ಹಾಗೂ ಸಾರ್ವಜನಿಕರ ಓಡಾಟಕ್ಕೆ ಅಡಚಣೆಯಾಗುತ್ತಿದೆ. ಸುಪ್ರೀಂ ಕೋರ್ಟ್ ಆದೇಶದಂತೆ ಇದನ್ನು ತೆರವುಗೊಳಿಸಲು ಸೂಚನೆ ನೀಡಲಾಗಿದೆ. ನಾವು ಸಂವಿಧಾನದ ಆಶಯದಂತೆ ಕೆಲಸ ಮಾಡಬೇಕಿದ್ದು ವ್ಯಾಪಾರಿಗಳು ನಮ್ಮೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಕೆಲವು ವ್ಯಾಪಾರಿಗಳು ಆಕ್ಷೇಪ ವ್ಯಕ್ತಪಡಿಸಿದರು. ಜನರು ಓಡಾಡುವ ಸ್ಥಳದಲ್ಲಿ ನಮಗೆ ವ್ಯಾಪಾರವಾಗುತ್ತದೆ. ಇದ್ದಕ್ಕಿದ್ದಂತೆ ಸ್ಥಳ ಬದಲಾವಣೆ ಮಾಡಿದರೆ ವ್ಯಾಪಾರವಾಗುವುದಿಲ್ಲ. ಇಲ್ಲಿ ಹಣ್ಣು, ತರಕಾರಿ ಮಾಡುವ ವ್ಯಾಪಾರಿಗಳೇ ಹೆಚ್ಚಾಗಿದ್ದಾರೆ. ಇದು ಹೆಚ್ಚು ದಿನ ಉಳಿಯುವ ಪದಾರ್ಥಗಳು ಅಲ್ಲ. ನಮ್ಮ ಅಂಗಡಿಗಳಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿಲ್ಲ. ಹಾಗಾಗಿ ಇಲ್ಲೇ ವ್ಯಾಪಾರ ಮಾಡಲು ಅನುವು ಮಾಡಿಕೊಡಬೇಕು ಎಂದು ಕೆಲ ವ್ಯಾಪಾರಿಗಳು ಆಗ್ರಹಿಸಿದರು. ಕೆಲವರು ಒಂದು ತಿಂಗಳು ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು. ಅದಕ್ಕೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಇದಕ್ಕೆ ಅವಕಾಶವಿಲ್ಲ ನಾವು ನ್ಯಾಯಾಲಯದ ನಿಯಮಗಳನ್ನು ಪಾಲಿಸಬೇಕು. ಈ ಬಗ್ಗೆ ವರದಿ ನೀಡಬೇಕು ಎಂದು ಸಮಜಾಯಿಷಿ ನೀಡಿದರು.
ಆರೋಗ್ಯಾಧಿಕಾರಿ ರಾಘವೇಂದ್ರ, ಸಮುದಾಯ ಸಂಘಟನಾಧಿಕಾರಿ ಮಹದೇವ, ಸಂಯೋಜಕ ಪರಶಿವ, ಮಲ್ಲಿಕಾರ್ಜುನ, ಅರವಿಂದ ಸೇರಿದಂತೆ ಅನೇಕರು ಇದ್ದರು.