ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಗ್ರಾಮದಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ ಪ್ರಜಾಸೇವೆ ಆಂದೋಲನದಲ್ಲಿ ಮಹಿಳೆಯೊಬ್ಬರು ತಮಗೆ ನಿವೇಶನ ನೀಡುವಂತೆ ಮನವಿ ಮಾಡಿದರು, ಗಣೇಶ್ ಪ್ರಸಾದ್, ಎಂ.ಎಸ್.ತನ್ಮಯಿ, ಮೋಹಿತ್ ಸಹದೇವ್, ಮಹದೇವಸ್ವಾಮಿ, ನಾಗೇಂದ್ರ ಇದ್ದರು.
- ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿಕೆ
- ತೆರಕಣಾಂಬಿ ಹೋಬಳಿ ಮಟ್ಟದ ಪ್ರಜಾಸೇವಾ ಆಂದೋಲನ
ಗುಂಡ್ಲುಪೇಟೆ: ಹೋಬಳಿ ಹಾಗೂ ತಾಲೂಕು ಮಟ್ಟದಲ್ಲಿ ಪ್ರಜಾಸೇವೆ ಆಂದೋಲನ ಮೂಲಕ ಸಾಧ್ಯವಾದಷ್ಟು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡಲಾಗುವುದು ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು.
ತಾಲೂಕಿನ ತೆರಕಣಾಂಬಿ ಗ್ರಾಮದ ಡಾ.ಜಗಜೀವನರಾಮ್ ಭವನದಲ್ಲಿ ತಾಲೂಕು ಆಡಳಿತದ ವತಿಯಿಂದ ಶನಿವಾರ ಆಯೋಜಿಸಿದ್ದ ಹೋಬಳಿ ಮಟ್ಟದ ಪ್ರಜಾಸೇವಾ ಆಂದೋಲನ ಉದ್ಘಾಟಿಸಿ ಮಾತನಾಡಿದರು.
ಸಾರ್ವಜನಿಕರ ಕುಂದುಕೊರತೆಗಳು ಹಾಗೂ ಸಮಸ್ಯೆಗಳನ್ನು ಪರಿಹರಿಸಲು ಮುಖ್ಯಮಂತ್ರಿಗಳ ಆದೇಶದ ಮೇರೆಗೆ ಪ್ರಜಾಸೇವೆ ಆಂದೋಲನ ಹಮ್ಮಿಕೊಳ್ಳಲಾಗುತ್ತಿದೆ. ಸಾರ್ವಜನಿಕರು ತಮ್ಮ ಕುಂದುಕೊರತೆಗಳ ಬಗ್ಗೆ ಸಲ್ಲಿಸಿದ ಅರ್ಜಿಗಳನ್ನು ಸ್ವೀಕರಿಸಿ ಸಾಧ್ಯವಾದ ಮಟ್ಟಿಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸಲಾಗುವುದು. ಮುಂದಿನ ದಿನಗಳಲ್ಲಿ ನಿವೇಶನ ರಹಿತರಿಗೆ ಆಯಾ ಗ್ರಾಮದಲ್ಲಿರುವ ಸರ್ಕಾರಿ ಭೂಮಿಯನ್ನು ಗುರುತಿಸಿ ನಿವೇಶನ ವಿತರಿಸಲಾಗುವುದು ಎಂದು ಹೇಳಿದರು.
ಒಟ್ಟು 89 ಅರ್ಜಿಗಳಲ್ಲಿ ನಿವೇಶನ ಕೋರಿ, ಸಾರಿಗೆ ಬಸ್ ಸೌಲಭ್ಯ ಕಲ್ಪಿಸುವುದು, ಕೆರೆಗಳಿಗೆ ನೀರು ತುಂಬಿಸುವುದು, ರಸ್ತೆ ಸರಿಪಡಿಸುವ ಬಗ್ಗೆ ಹೆಚ್ಚಿನ ಅರ್ಜಿಗಳು ಬಂದಿದ್ದವು. ಪಂಚಾಯತ್ ರಾಜ್ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದಂತೆ 66, ಕಂದಾಯ ಇಲಾಖೆ 11, ಕೆಎಸ್‌ಆರ್‌ಟಿಸಿಗೆ 2 ಹಾಗೂ ಇತರ ಇಲಾಖೆಗಳ ಬಗ್ಗೆ 15 ಅರ್ಜಿಗಳನ್ನು ಸ್ವೀಕರಿಸಿ ಆಯಾ ಇಲಾಖೆಗಳಿಗೆ ಹಂಚಿಕೆ ಮಾಡಲಾಯಿತು.
ಅರ್ಹ ಕುಟುಂಬಗಳಿಗೆ ಜಾಬ್‌ಕಾರ್ಡ್ ಪಡೆಯುವ ಸಂಬಂಧ ಜಿಲ್ಲಾ ಪಂಚಾಯಿತಿಯಿಂದ ಕೂಲಿಕಾರ್ಮಿಕ ಕುಟುಂಬಗಳಿಗೆ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ಗಾರ್ ಆ್ಯಂಡ್ ಅಜೀವಿಕ ಮಿಷನ್(ಗ್ರಾಮೀಣ) ಮಳಿಗೆ, ಗೃಹಲಕ್ಷ್ಮಿಯೋಜನೆಯ ಬಗ್ಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ, ವಿದ್ಯುತ್ ಸರಬರಾಜು ಬಗ್ಗೆ ಸೆಸ್ಕ್ ಕಚೇರಿ, ಮಹಿಳಾ ಸ್ವಸಹಾಯ ಸಂಘಗಳ ವತಿಯಿಂದ ಉತ್ಪನ್ನಗಳ ಬಗ್ಗೆ ತೆರೆಯಲಾಗಿತ್ತು.
ತಹಸೀಲ್ದಾರ್ ಎಂ.ಎಸ್.ತನ್ಮಯಿ, ಸರ್ಕಲ್‌ಇನ್‌ಸ್ಪೆಕ್ಟರ್ ಮೋಹಿತ್ ಸಹದೇವ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಷಣ್ಮುಗ, ಸೆಸ್ಕ್ ಎಇಇ ಕೆ.ಎಂ.ಸಿದ್ದಲಿಂಗಪ್ಪ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶಶಿಕುಮಾರ್, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಭಾಸ್ಕರ್ ನಾಯಕ್, ತಾಲೂಕು ಆರೋಗ್ಯಾಧಿಕಾರಿ ಡಾ.ಅಲೀಂಪಾಷಾ, ಲೋಕೋಪಯೋಗಿ ಇಲಾಖೆ ಎಇಇ ರವಿಕುಮಾರ್, ಶಿಶು ಅಭಿವೃದ್ಧಿ ಅಧಿಕಾರಿ ಹೇಮಾವತಿ, ಅಬಕಾರಿ ಇಲಾಖೆಯ ಎನ್.ದೀಪು, ತೆರಕಣಾಂಬಿ ನಾಡಕಚೇರಿಯ ಕಂದಾಯಾಧಿಕಾರಿ ನಾಗೇಂದ್ರ, ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಹದೇವಸ್ವಾಮಿ ಇತರರು ಇದ್ದರು.