ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ಭಕ್ತರು ದೇಚರ ದರ್ಶನ ಪಡೆದ 
ಚಾಮರಾಜನಗರ

ಬೆಟ್ಟದ ಮಾದಪ್ಪನಿಗೆ ಎಣ್ಣೆಮಜ್ಜನ ಸೇವೆ

ಪ್ರಮುಖ ಮುಖ್ಯಾಂಶಗಳು

  • ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿ
  • ಅವರಾತ್ರಿ ಅಮಾವಾಸ್ಯೆ ಹಿನ್ನೆಲೆ
ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ಅವರಾತ್ರಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ಶನಿವಾರ ಸಂಜೆ ಸಾಲೂರು ಬೃಹನ್ಮಠದ ಪೀಠಾಧಿಪತಿ ಡಾ.ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರ ಸಮ್ಮುಖದಲ್ಲಿ ಬೇಡಗಂಪಣ ಅರ್ಚಕರು ಮಾದಪ್ಪನಿಗೆ ಎಣ್ಣೆಮಜ್ಜನ ಸೇವೆ ನೆರವೇರಿಸಿದರು.
ದೇಗುಲದಲ್ಲಿ ಬೆಳಗ್ಗೆ ಎಂದಿನಂತೆ ಮಾದಪ್ಪನಿಗೆ ಪೂಜೆ ನೆರವೇರಿಸಲಾಯಿತು. ಸಂಜೆ 6.30 ರಿಂದ ರಾತ್ರಿ 8.30ರವರೆಗೆ ಸಾಲೂರು ಬೃಹನ್ಮಠದ ಪೀಠಾಧಿಪತಿ ಡಾ.ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರ ಸಮ್ಮುಖದಲ್ಲಿ ಬೇಡಗಂಪಣ ಸರದಿ ಅರ್ಚಕರು ಮಾದಪ್ಪನ ಲಿಂಗಮೂರ್ತಿಗೆ ಹುಚ್ಚೆಳ್ಳೆಣ್ಣೆ, ಎಳನೀರು, ಜೇನುತುಪ್ಪ, ಮೊಸರು, ಸಕ್ಕರೆ, ಖರ್ಜೂರ, ದ್ರಾಕ್ಷಿಯ ಜತೆಗೆ ಹಾಲಿನ ಅಭಿಷೇಕ ಹಾಗೂ ಸಹಸ್ರ ಬಿಲ್ವಾರ್ಚನೆಯನ್ನು ನೆರವೇರಿಸಿದರು. ಬಳಿಕ ಮಾದಪ್ಪನ ಮೂರ್ತಿಯನ್ನು ವಿವಿಧ ಪುಷ್ಪಗಳಿಂದ ಸಿಂಗರಿಸಲಾಯಿತು. ಧೂಪ, ದೀಪಧಾರತಿ ಹಾಗೂ ಮಹಾಮಂಗಳಾರತಿ ಬೆಳಗಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಸಂಜೆ ಚಿನ್ನದ ತೇರಿನ ಉತ್ಸವದಲ್ಲಿ ಭಾಗಿಯಾಗಿದ್ದರು.
ಕಾಲ್ನಡಿಗೆಯಲ್ಲಿ ಸಾಗುತ್ತಿರುವ ಭಕ್ತರು: ಇನ್ನು ಶ್ರೀ ಕ್ಷೇತ್ರಕ್ಕೆ ಆಗಮಿಸಿದ್ದ ಹರಕೆಹೊತ್ತ ಭಕ್ತರು ಮುಡಿಸೇವೆ, ಉರುಳುಸೇವೆ, ಪಂಜಿನಸೇವೆ ಹಾಗೂ ರಜಾ ಹೊಡೆಯುವ ಸೇವೆಯನ್ನು ಕೈಗೊಂಡಿದ್ದರು. ಕೆಲ ಭಕ್ತರು ದೇಗುಲದ ಸುತ್ತ ಹುಲಿ, ಬಸವ ಹಾಗೂ ರುದ್ರಾಕ್ಷಿ ವಾಹನದ ಉತ್ಸವಾಧಿ ಸೇವೆಗಳಲ್ಲಿ ಭಾಗಿಯಾಗಿದ್ದರು. ರಜಾ ದಿನ ಭಾನುವಾರ ಹೆಚ್ಚಿನ ಭಕ್ತರು ಮ.ಬೆಟ್ಟಕ್ಕೆ ಆಗಮಿಸಲಿದ್ದು, ಉತ್ಸಾವಾಧಿ ಸೇವೆ, ಹರಕೆ ಹಾಗೂ ಪೂಜಾ ಕೈಂಕರ್ಯದಲ್ಲಿ ಭಾಗಿಯಾಗಲಿದ್ದಾರೆ. ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಭಕ್ತರಿಗೆ ಅಗತ್ಯ ಮೂಲ ಸೌಕರ್ಯ ಒದಗಿಸಲು ಅಗತ್ಯ ಕ್ರಮವಹಿಸಿದೆ.