ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯ ಆವರಣದಲ್ಲಿ ಮಹಾ ಶಿವರಾತ್ರಿಯಂದು ನೆರೆದಿದ್ದ ಭಕ್ತರು. 
ಚಾಮರಾಜನಗರ

ಮಹದೇಶ್ವರ ಬೆಟ್ಟದಲ್ಲಿ ಶಿವರಾತ್ರಿಗೆ ಎಣ್ಣೆಮಜ್ಜನ ಸೇವೆ

ಪ್ರಮುಖ ಮುಖ್ಯಾಂಶಗಳು

  • ಸಾಲೂರು ಬೃಹನ್ಮಠದಲ್ಲಿ ಇಷ್ಟಲಿಂಗ ಪೂಜೆ
  • ಜಾಗರಣೆ ಮಾಡಿ ಶಿವ ಸ್ಮರಣೆ ಮಾಡಿದ ಭಕ್ತರು
ಹನೂರು: ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಸ್ಥಳ ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ಮಹಾ ಶಿವರಾತ್ರಿ ಅಮಾವಾಸ್ಯೆ ಹಿನ್ನಲೆಯಲ್ಲಿ ಭಾನುವಾರ ಸಂಜೆ ಸಾಲೂರು ಬೃಹನ್ಮಠದ ಪೀಠಾಧಿಪತಿ ಡಾ.ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿ ನೇತೃತ್ವದಲ್ಲಿ ಬೇಡಗಂಪಣ ಅರ್ಚಕರಿಂದ ಸ್ವಾಮಿಗೆ ಎಣ್ಣೆಮಜ್ಜನ ಸೇವೆ ನೆರವೇರಿತು.
ಮಹಾ ಶಿವರಾತ್ರಿ ಅಂಗವಾಗಿ ಶ್ರೀಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಗರ್ಭಗುಡಿ ಹಾಗೂ ದೇಗುಲದ ಒಳಾಂಗಣವನ್ನು ವಿವಿಧ ಹಣ್ಣು, ತರಕಾರಿ, ಧಾನ್ಯದ ಫಲ ಹಾಗೂ ವಿವಿಧ ಪುಷ್ಪಗಳಿಂದ ವಿಶೇಷವಾಗಿ ಸಿಂಗರಿಸಲಾಗಿತ್ತು. ಜತೆಗೆ ದೇಗುಲದ ಸುತ್ತಲು ವಿವಿಧ ಹೂಗಳಿಂದ ಸಿಂಗಾರ ಮಾಡಲಾಗಿತ್ತು.
ಸಾಲೂರು ಮಠದಲ್ಲಿ ಇಷ್ಟಲಿಂಗ ಪೂಜೆ:
ಮಹಾ ಶಿವರಾತ್ರಿ ಜಾತ್ರೆ ಆರಂಭದ ಹಿನ್ನಲೆ ಶನಿವಾರ ರಾತ್ರಿ ಸಾಲೂರು ಶ್ರೀಗಳ ನೇತೃತ್ವದಲ್ಲಿ ಸ್ವಾಮಿಯ ಉತ್ಸವ ಮೂರ್ತಿಯನ್ನು ಬಿಳಿ ಕುದುರೆ ವಾಹನದಲ್ಲಿ ದೇಗುಲದಿಂದ ಮಠಕ್ಕೆ ಮೆರವಣಿಗೆಯ ಮೂಲಕ ಕರೆ ತರಲಾಗಿತ್ತು. ಬೆಳಗ್ಗೆ ಸ್ವಾಮಿಗೆ ಇಷ್ಟಲಿಂಗ ಶಿವಪೂಜೆಯನ್ನು ನೆರವೇರಿಸಲಾಯಿತು. ಹಾಲು, ಮೊಸರು, ಎಳನೀರು ಹಾಗೂ ಇನ್ನಿತರೆ ದ್ರವ್ಯಗಳಿಂದ ಅಭಿಷೇಕ ನೆರವೇರಿಸಿ ಮಹಾ ಮಂಗಳಾರತಿ ಬೆಳಗಿಸಲಾಯಿತು. ದೇಗುಲದಿಂದ ಆಗಮಿಸಿದ ಬೇಡಗಂಪಣ ಅರ್ಚಕರು ಭಕ್ತರ ಸಮ್ಮುಖದಲ್ಲಿ ಸತ್ತಿಗೆ, ಸೂರಿಪಾನಿ ಹಾಗೂ ವಾದ್ಯ ಮೇಳದೊಂದಿಗೆ ಉತ್ಸವ ಮೂರ್ತಿಯನ್ನು ಮೆರವಣಿಗೆಯ ಮೂಲಕ ಮಾದಪ್ಪನ ಸನ್ನಿಧಿಗೆ ಕರೆದೊಯ್ಯಲಾಯಿತು. ದೇಗುಲದಲ್ಲಿ ಪ್ರದಕ್ಷಿಣೆ ಹಾಕಿಸಿ ಮಹಾ ಮಂಗಳಾರತಿ ಬೆಳಗಿಸಿ ಬರಮಾಡಿಕೊಳ್ಳಲಾಯಿತು.
ಮಾದಪ್ಪನಿಗೆ ಎಣ್ಣೆಮಜ್ಜನ ಸೇವೆ: ಮಾದಪ್ಪನ ಸನ್ನಿಧಿಯಲ್ಲಿ ಬೆಳಗ್ಗೆ ಡಾ. ಶ್ರೀಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರ ಸಮ್ಮುಖದಲ್ಲಿ ಸ್ವಾಮಿಗೆ ಮಹಾ ಶಿವರಾತ್ರಿ ವಿಶೇಷ ಪೂಜೆಯನ್ನು ನೆರವೇರಿಸಲಾಯಿತು.. ದೇಗುಲದ ಸುತ್ತ ಸ್ವಾಮಿಯ ಉತ್ಸವ ನಡೆಸಲಾಯಿತು. ಸಂಜೆ 7 ರಿಂದ 8.30ರೊಳಗೆ ಸಾಲೂರು ಶ್ರೀಗಳ ಸಾನಿಧ್ಯದಲ್ಲಿ ಬೇಡಗಂಪಣ ಅರ್ಚಕರಿಂದ ಮಾದಪ್ಪನಿಗೆ ಮಹಾರುದ್ರಾಭಿಷೇಕ, ಪಂಚಾಮೃತ ಅಭಿಷೇಕ ಹಾಗೂ ಇತರೆ ಅಭಿಷೇಕದ ಜತೆಗೆ ಸಹಸ್ರ ಬಿಲ್ವಾರ್ಚನೆ ಸೇವೆ ನೆರವೇರಿಸಲಾಯಿತು. ಎಣ್ಣೆಮಜ್ಜನ ಸೇವೆಯನ್ನು ನೆರವೇರಿಸಿ ಕೀರಿಟ ಧಾರಣೆಯೊಂದಿಗೆ ಮಾದಪ್ಪನ ಮೂರ್ತಿಯನ್ನು ವಿವಿಧ ಪುಷ್ಪಗಳಿಂದ ಸಿಂಗರಿಸಲಾಯಿತು. ಧೂಪ, ದೀಪಧಾರತಿಯೊಂದಿಗೆ ಮಹಾಮಂಗಳಾರತಿ ಬೆಳಗಿಸಿ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ಈ ಮೂಲಕ ಮಾದಪ್ಪನಿಗೆ ಎಣ್ಣೆಮಜ್ಜನ ಸೇವೆಯು ಸಾಂಪ್ರದಾಯಿಕವಾಗಿ ನೆರವೇರಿತು.

ಜಾಗರಣೆಗೆ ಬಂದ ಭಕ್ತರು:ರಾತ್ರಿ ಜಾಗರಣೆ ಹಿನ್ನಲೆ ಮಧ್ಯಾಹ್ನದ ಬಳಿಕ ಮ.ಬೆಟ್ಟಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚಾಗಿತ್ತು. ರಾತ್ರಿ ದೇಗುಲದ ಆವರಣ ಹಾಗೂ ರಂಗಮಂದಿರದಲ್ಲಿ ವಾಸ್ತವ್ಯ ಹೂಡಿದ್ದ ಭಕ್ತರು ಶಿವನ ಸ್ಮರಣೆ ಮಾಡಿದರು.