ಮಲೆ ಮಹದೇಶ್ವರ ಬೆಟ್ಟದ ದೇವಸ್ಥಾನದಲ್ಲಿ ಸೋಮವಾರ ಮುಂಜಾನೆ ಧನುರ್ಮಾಸದ ಪೂಜೆ ನೆರವೇರಿತು. ಸಾಲೂರು ಶ್ರೀಗಳಾದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಬೇಡಗಂಪಣ ಸರದಿ ಅರ್ಚಕ ಅಣ್ಣಯ್ಯ ಮತ್ತು ಇತರರು ಇದ್ದರು. 
ಚಾಮರಾಜನಗರ

ಮಾದಪ್ಪನಿಗೆ ಮಾಕಳಿ ಬೇರಿನ ಉಪ್ಪಿನಕಾಯಿ ನೈವೇದ್ಯ

ಎಂ.ರವಿ

ಮಹದೇಶ್ವರ ಬೆಟ್ಟದಲ್ಲಿ ಬೇಡಗಂಪಣರಿಂದ ವಿಶೇಷ ಪೂಜೆ

ಮಹದೇಶ್ವರ ಬೆಟ್ಟ: ಪ್ರಸಿದ್ಧ ಯಾತ್ರಾ ಸ್ಥಳ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಾದಪ್ಪನಿಗೆ ಮಾಕಳಿ ಬೇರು, ನಿಂಬೆ ಹಣ್ಣಿನ ಉಪ್ಪಿನಕಾಯಿ, ಉದ್ದಿನ ಹಪ್ಪಳ, ದೇಸಿ ಹಸುವಿನ ಮೊಸರು ಮತ್ತು ಇನ್ನಿತರ ಖಾದ್ಯಗಳನ್ನು ನೈವೇದ್ಯಕ್ಕೆ ಅರ್ಪಿಸಲಾಗಿದೆ.
ಪಷ್ಠಿಯ ಮಾರನೇ ದಿನದಿಂದ ಸಂಕ್ರಾಂತಿಯವರೆಗೆ ಸಾಲೂರು ಬೃಹನ್ಮಠದ ಪೀಠಾಧಿಪತಿ ಶ್ರೀಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಬೇಡಗಂಪಣರ ಸಂಪ್ರದಾಯದಂತೆ ಮುಂಜಾನೆ ವಿಶೇಷ ಪೂಜೆಗಳು ನಡೆಯಲಿವೆ. ಈ ಸಂದರ್ಭದಲ್ಲಿ ಬೇಡಗಂಪಣ ಅರ್ಚಕರು ಉಪವಾಸವಿದ್ದು, ನೈವೇದ್ಯಗಳನ್ನು ಸಲ್ಲಿಸುತ್ತಾರೆ. ಅಂತೆಯೇ ಸೋಮವಾರವೂ ದೇವರಿಗೆ ನೈವೇದ್ಯವನ್ನು ಇಡಲಾಯಿತು.
ಮಾದಪ್ಪನಿಗೆ ಮುಂಜಾನೆ ಪೂಜೆ: ಸೋಮವಾರ ಮುಂಜಾನೆ 3 ಗಂಟೆಗೆ ಪೂಜೆ ಪ್ರಾರಂಭವಾಯಿತು. ಮೊದಲ ಪೂಜೆ ಅಭಿಷೇಕ ಮತ್ತು ಅರ್ಚನೆ ಮಾಡಲಾಯಿತು. ಮಹಾ ಪ್ರಸಾದವನ್ನು ಅರ್ಪಿಸಲಾಯಿತು. 5.45ಕ್ಕೆ ಪೂಜೆ ಮುಗಿಯಿತು. ಸಾಲೂರು ಶ್ರೀಗಳು ಪೂಜೆಯಲ್ಲಿ ಪಾಲ್ಗೊಂಡರು. ಪೂಜೆ ಮುಗಿದ ನಂತರ ಪಾರ್ವತಿ ಮತ್ತು ಪರಮೇಶ್ವರರ ಉತ್ಸವ ಮೂರ್ತಿಗಳನ್ನು ದೇಗುಲದ ಪ್ರಾಂಗಣದಲ್ಲಿ ಮೂರು ಸುತ್ತು ಉತ್ಸವ ಮಾಡಲಾಯಿತು.