ಚಾಮರಾಜನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ರಥಕ್ಕೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಭಾನುವಾರ ಪೂಜೆ ಸಲ್ಲಿಸಿದರು. ಅರ್ಚಕ ದರ್ಶನ್, ಜಯಕುಮಾರ್, ರಾಜಶೇಖರಮೂರ್ತಿ, ಮುಖಂಡರಾದ ವೆಂಕಟನಾಗಪ್ಪ ಶೆಟ್ಟಿ, ಸುರೇಶ್ ನಾಯಕ, ಚಾ.ರಂ.ಶ್ರೀನಿವಾಸಗೌಡ, ಶಾ.ಮುರಳಿ ಇತರರು ಇದ್ದರು. 
ಚಾಮರಾಜನಗರ

ಶ್ರೀಚಾಮರಾಜೇಶ್ವರ ರಥಕ್ಕೆ ಪೂಜಾ ಸಲ್ಲಿಕೆ

ಪ್ರಮುಖ ಮುಖ್ಯಾಂಶಗಳು

  • ಜು.28ರಂದು ನಡೆಯಲಿರುವ ರಥೋತ್ಸವ
  • ತೇರಿಗೆ ಪೂಜೆ ಮಾಡಿದ ಶಾಸಕ ಸಿ.ಪುಟ್ಟರಂಗಶೆಟ್ಟಿ
ಚಾಮರಾಜನಗರ: ನಗರದ ಇತಿಹಾಸ ಪ್ರಸಿದ್ಧ ಶ್ರೀಚಾಮರಾಜೇಶ್ವರ ದೇವಸ್ಥಾನದ ರಥೋತ್ಸವನ್ನು ಜು.28ರಂದು ಹಮ್ಮಿಕೊಂಡಿರುವ ಪ್ರಯುಕ್ತ ಭಾನುವಾರ ರಥ ಚಲನಾ ಪೂಜೆಯನ್ನು ಮಾಡಲಾಯಿತು.
ರಥದ ಮನೆಯಿಂದ ದೇವಸ್ಥಾನದ ಮುಂಭಾಗಕ್ಕೆ ತಂದು ನಿಲ್ಲಿಸಿದ್ದ ತೇರಿಗೆ ಹೂ, ಅರಿಶಿಣ, ಕುಂಕುಮ ಹಾಕಿ ಪೂಜೆಗೆ ಸಜ್ಜುಗೊಳಿಸಲಾಗಿತ್ತು. ಕ್ಷೇತ್ರದ ಶಾಸಕ ಸಿ.ಪುಟ್ಟರಂಗಶೆಟ್ಟಿ ಪೂಜಾ ಕಾರ್ಯದಲ್ಲಿ ಪಾಲ್ಗೊಂಡರು. ರಥಕ್ಕೆ ದೀಪ ಬೆಳಗಿ, ಈಡುಗಾಯಿ ಹೊಡೆದು ಪ್ರಾರ್ಥನೆ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು, ಜು.28ರಂದು ನಗರದ ಪ್ರಸಿದ್ಧ ಶ್ರೀಚಾಮರಾಜೇಶ್ವರ ದೇವಸ್ಥಾನದ ಮಹಾರಥೋತ್ಸವನ್ನು ವಿಜೃಂಭಣೆಯಿಂದ ಆಚರಣೆ ಮಾಡಲು ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗುತ್ತಿದೆ. ರಾಜ್ಯದಲ್ಲಿ ಆಷಾಢ ಮಾಸದಲ್ಲಿ ನಡೆಯುವ ಅಪರೂಪದ ರಥೋತ್ಸವಗಳಲ್ಲಿ ಶ್ರೀಚಾಮರಾಜೇಶ್ವರ ರಥೋತ್ಸವವೂ ಒಂದು. ಈ ಉತ್ಸವದಲ್ಲಿ ನವಜೋಡಿಗಳು ಪಾಲ್ಗೊಂಡು ಹಣ್ಣು-ಜವನ ಎಸೆದು ಪೂಜೆ ಸಲ್ಲಿಸುತ್ತಾರೆ. ಭಕ್ತರಿಗೆ ಅಗತ್ಯ ಸಿದ್ಧತೆ ಕೈಗೊಳ್ಳುವುದು, ರಥದ ಬೀದಿಯಲ್ಲಿ ತೇರು ಸಾಗುವುದಕ್ಕಾಗಿ ಅಚ್ಚುಕಟ್ಟು ಮಾಡಲಾಗುತ್ತದೆ ಎಂದರು.
ದೇವಸ್ಥಾನದ ಪ್ರಧಾನ ಅರ್ಚಕ ಮತ್ತು ಆಗಮಿಕ ದರ್ಶನ್ ಮಾತನಾಡಿ, ಜು.28ರಂದು ಶ್ರೀಚಾಮರಾಜೇಶ್ವರ ರಥೋತ್ಸವಕ್ಕಾಗಿ ಭಾನುವಾರ ರಥ ಪೂಜೆ ಮಾಡಲಾಯಿತು. ಈ ಪೂಜೆಯ ಪ್ರಯುಕ್ತ ಪ್ರಾತಃಕಾಲದಲ್ಲಿ ಮಹಾಗಣಪತಿ ಪೂಜೆ, ಪಂಚಾಮೃತ ಅಭಿಷೇಕ, ರುದ್ರಾಭಿಷೇಕ ನೆರವೇರಿಸಿ ಅಲಂಕಾರ ಮಾಡಿ ಅಷ್ಟೋತ್ತರ ಮಹಾ ಮಂಗಳಾರತಿ ಮಾಡಲಾಯಿತು. ಮೂಲದೇವರುಗಳ ಪ್ರಾರ್ಥನೆ ಸಲ್ಲಿಸಲಾಯಿತು. ರಥವನ್ನು ಕಟ್ಟುವವರಿಗೆ ಇಂದಿನಿಂದ ಚಾಲನೆ ದೊರೆಯುತ್ತದೆ. ಮುಹೂರ್ತ ಕಂಬ, ಗಣಪತಿ, ಪೂಜೆ, ನವಗ್ರಹ ಪೂಜೆ ಮಾಡಿ ರಥಕ್ಕೆ ಪೂಜೆ ನಡೆಯಿತು. ಬಲಿ ಪ್ರಧಾನ ಮಾಡಲಾಯಿತು. ಶುಭಲಗ್ನದಲ್ಲಿ ಭ್ರುಹಸ್ಪತಿ ಪೂಜೆ ಮಾಡಿ ರಥಕ್ಕೆ ಮಹಾಮಂಗಳಾರತಿ ಪೂಜೆ ಮಾಡಲಾಯಿತು ಎಂದರು. ದೇವಸ್ಥಾನದ
ಅಮಾವಾಸ್ಯೆ ಬಳಿಕ ಚಾಲನೆ: ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ರಥ ಚಲನಾ ಪೂಜೆ ನಡೆದಿದ್ದು, ಅಮಾವಾಸ್ಯೆ ಬಳಿಕ ರಥ ಕಟ್ಟುವ ಕಾರ್ಯ ನಡೆಯಲಿದೆ. ಸುಮಾರು 15 ದಿನಗಳ ಒಳಗೆ ರಥ ಕಟ್ಟುವ ಕಾರ್ಯ ಪೂರ್ಣಗೊಳ್ಳಲಿದೆ. ದೇವಸ್ಥಾನದ ಬಂಡಿಗಾರ್ ಮಹೇಶ್ ರಥ ಕಟ್ಟುವ ಕಾರ್ಯವನ್ನು ಮಾಡಲಿದ್ದಾರೆ. ಕಾರ್ಯನಿರ್ವಾಹಣಾಧಿಕಾರಿ ರಾಜಶೇಖರಮೂರ್ತಿ, ಮುಖಂಡರಾದ ವೆಂಕಟನಾಗಪ್ಪ ಶೆಟ್ಟಿ, ಸುರೇಶ್ ನಾಯಕ, ಚಾ.ರಂ.ಶ್ರೀನಿವಾಸಗೌಡ, ಶಾ.ಮುರಳಿ, ಜಯಕುಮಾರ್ ಮತ್ತು ಇತರರು ಹಾಜರಿದ್ದರು.
ಶ್ರೀಚಾಮರಾಜೇಶ್ವರನಿಗೆ 200ನೇ ವರ್ಷದ ಸಂಭ್ರಮ:
ನಗರದಲ್ಲಿ ಶ್ರೀಚಾಮರಾಜೇಶ್ವರ ದೇವಸ್ಥಾನ ಸ್ಥಾಪನೆಯಾಗಿ 200 ವರ್ಷಗಳ ಸಂಭ್ರಮ ಮನೆ ಮಾಡಿದೆ. ಮುಮ್ಮಡಿ ಕೃಷ್ಣರಾಜ ಒಡೆಯರ್ ತಂದೆ 9ನೇ ಚಾಮರಾಜ ಒಡೆಯರು 1774ರಲ್ಲಿ ಇಲ್ಲಿನ ಜನನ ಮಂಟಪದಲ್ಲಿ ಜನಿಸಿದ್ದರು. ತಮ್ಮ ಮಾತೃಪಿತೃಗಳ ಸ್ಮರಣಾರ್ಥ 18ನೇ ಶತಮಾನದಲ್ಲಿ ಶಿಲ್ಪಿಗಳು ಹಾಗೂ ಆಗಿನ ಶೃಂಗೇರಿ ಜಗದ್ಗುರುಗಳ ಅನುಗ್ರಹ ಹಾಗೂ ಸಲಹೆಯಂತೆ ‘ಅರಿಕುಠಾರ’ ಎಂಬ ಈ ನೆಲೆಯನ್ನು ‘ಚಾಮರಾಜನಗರ’ ಎಂಬ ಹೆಸರಿನಿಂದ ಮರು ನಿರ್ಮಾಣ ಮಾಡಿದರು. ಶ್ರೀಕೆಂಪನಂಜಾಂಬ ಸಮೇತ ಚಾಮರಾಜೇಶ್ವರ ದೇವಾಲಯವನ್ನು 1826 ರಲ್ಲಿ ಶಾಲಿವಾಹನ ಶೆಕೆ 1750ರ ಸರ್ವಧಾರಿ ನಾಮ ಸಂವತ್ಸರದ ನಿಜ ಆಷಾಢ ಬಹುಳ ದ್ವಿತೀಯ ಸೋಮವಾರದಲ್ಲಿ ಅರ್ಪಿಸಿದ್ದರು. ದೇವಾಲಯ ನಿರ್ಮಿಸಿದ ಮಹಾರಾಜರು ಈ ದೇವಾಲಯಕ್ಕೆ ಹರದನಹಳ್ಳಿ, ಹೊಸಹಳ್ಳಿ, ಮುತ್ತಿಗೆ, ಬೆಂಡರವಾಡಿ, ನವಿಲೂರು, ಸಪ್ಪಯ್ಯನಪುರ, ಬೇಡರಪುರ, ಶಿವಪುರ, ಮೂಡ್ಲು ಅಗ್ರಹಾರ, ಉಮ್ಮತ್ತೂರು, ಹೆಗ್ಗೋಠಾರ ಮುಂತಾದ 13 ಗ್ರಾಮಗಳನ್ನು ದೇವರ ಆಭರಣ ಸೇವಾಜನರು, ಅಂಚೆ ಮುತ್ಸದ್ಧಿ, ಅರ್ಚಕ, ಆಗಮಿಕರುಗಳನ್ನು ನೇಮಿಸಿದ್ದರು. ಈ ದೇವಾಲಯದಲ್ಲಿ ನಿತ್ಯೋತ್ಸವ, ವಾರೋತ್ಸವ, ಪಕ್ಷತೋತ್ಸವ, ಪಕ್ಷೋತ್ಸವ, ಮಾಸೋತ್ಸವ, ಸಂವತ್ಸರೋತ್ಸವ ಜರುಗುವಂತೆ ಏರ್ಪಾಟು ಮಾಡಿದ್ದರು. ಚಿತ್ತ ನಕ್ಷತ್ರ, ಶ್ರವಣ ನಕ್ಷತ್ರ, ಉತ್ತರಾಭಾದ್ರ ನಕ್ಷತ್ರ ಹಾಗೂ ಪೂರ್ವಾಷಾಢ ನಕ್ಷತ್ರಗಳಲ್ಲಿ ವಿಶೇಷ ಉತ್ಸವ ರಥಗಳು ನಡೆಯುವಂತೆ ಸಮರ್ಪಿಸಿದ್ದರು. ದೇವಾಲಯದಲ್ಲಿರುವ ಮೂಲ ಲಿಂಗವನ್ನು ಅನುಗ್ರಹಿಸಿದ ಶೃಂಗೇರಿ ಶ್ರೀಗಳು ಈ ದೇವಾಲಯಕ್ಕೆ ಒಂದು ರಥವನ್ನು ನೀಡಿರುವುದಾಗಿ ಈ ದೇವಾಲಯದ 1867ನೇ ನಿರೂಪದಲ್ಲಿ ತಿಳಿದುಬರುತ್ತದೆ.
ಆಷಾಢದಲ್ಲೇ ರಥೋತ್ಸವ ಏಕೆ?:
ಆಷಾಢ ಮಾಸವು ಶಕ್ತಿ ದೇವತೆಯ ಆರಾಧನಾ ಮಾಸವಾಗಿರುತ್ತದೆ. ಸೂರ್ಯನು ತನ್ನ ಉತ್ತರಾಯಣ ಕಾಲವನ್ನು ಮುಗಿಸಿ ದಕ್ಷಿಣಾಯಣ (ಮಿಥುನದಿಂದ ಕಟಕ ಮಾಸಕ್ಕೆ) ಕಾಲವಾದ ಗ್ರೀಷ್ಮ ಋತುವಾಗಿರುತ್ತದೆ. ಗುರುವಿನ ಪೂರ್ಣಿಮೆಯಂದು ಇಲ್ಲಿ ರಥೋತ್ಸವ ಜರುಗುವುದು ವಿಶೇಷ. ಸನ್ಯಾಸಿಗಳು ಚಾತುರ್ಮಾಸ ಪ್ರಾರಂಭಿಸುವ ಈ ಕಾಲ ಅರ್ಥಪೂರ್ಣವಾಗಿರುತ್ತದೆ. ಈ ಆಷಾಢ ಮಾಸದಲ್ಲಿ ನೂತನ ದಂಪತಿಗಳು ಬೇರೆಯಾಗಿದ್ದು, ಈ ಬ್ರಹ್ಮ ರಥೋತ್ಸವದಲ್ಲಿ ಒಂದಾಗುವ ಸಮಯವಾಗಿರುತ್ತದೆ. ಅಂದು ನವ ದಂಪತಿಗಳು ಜೊತೆಯಾಗಿ ರಥರೂಢನಾದ ಪಾರ್ವತಿ ಸಮೇತ ಪರಮೇಶ್ವರನನ್ನು ಹೂ-ಹಣ್ಣುಗಳಿಂದ ಪೂಜಿಸಿ ಹಣ್ಣು-ಧವನವನ್ನು ರಥದ ಕಳಶಕ್ಕೆ ಅರ್ಪಿಸಿದರೇ ಗಂಡು ಸಂತಾನವಾಗುತ್ತದೆ. ಅವಿವಾಹಿತರಿಗೆ ವಿವಾಹ ಭಾಗ್ಯ ದೊರಕುತ್ತದೆ ಎಂಬ ಅಚಲವಾದ ನಂಬಿಕೆ ಇದ್ದು, ಪ್ರತ್ಯಕ್ಷ ನಿದರ್ಶನವಾಗಿರುತ್ತದೆ. ಈ ಮಾಸದಲ್ಲೇ ಚಾಮುಂಡೇಶ್ವರಿ ವರ್ಧಂತಿ ಹಾಗೂ ಭೀಮನ ಅಮಾವಾಸ್ಯೆಯು ಮಹಿಳೆಯರಿಗೆ ಉತ್ತಮ ಪತಿ ಹಾಗೂ ಮಾಂಗಲ್ಯ ಭಾಗ್ಯ ನೀಡುವ ಮಾಸವಾಗಿರುತ್ತದೆ.