ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವ ಸಂಬಂಧ ಸದನದಲ್ಲಿ ಪ್ರಸ್ತಾಪಿಸುವಂತೆ ಸರ್ಕಾರಿ ಪರವಾನಗಿ ಭೂ ಮಾಪಕರು ಹನೂರಿನಲ್ಲಿ ಶಾಸಕ ಎಂ.ಆರ್ ಮಂಜುನಾಥ್ ಅವರಲ್ಲಿ ಮನವಿ ಸಲ್ಲಿಸಿದರು. ಮಹದೇವಸ್ವಾಮಿ, ಮಾದೇಶ್, ರಾಜೇಂದ್ರ ಇತರರಿದ್ದರು.  
ಚಾಮರಾಜನಗರ

ಕೆಲಸಕ್ಕೆ ಸರಿಯಾದ ವೇತನ ಸಿಗುತ್ತಿಲ್ಲ

ಪ್ರಜ್ವಲ್.ಎನ್

ಪ್ರಮುಖ ಮುಖ್ಯಾಂಶಗಳು

  • ಸದನದಲ್ಲಿ ಪ್ರಸ್ತಾಪಿಸುವಂತೆ ಶಾಸಕರಲ್ಲಿ ಮನವಿ
ಹನೂರು: ಸರ್ಕಾರಿ ಪರವಾನಗಿ ಭೂ ಮಾಪಕರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವ ಸಂಬಂಧ ಸದನದಲ್ಲಿ ಧ್ವನಿ ಎತ್ತುವಂತೆ ತಾಲೂಕು ಭೂ ಮಾಪಕರ ಸಂಘದ ಪದಾಧಿಕಾರಿಗಳು ಭಾನುವಾರ ಶಾಸಕ ಎಂ.ಆರ್ ಮಂಜುನಾಥ್ ಅವರಲ್ಲಿ ಮನವಿ ಸಲ್ಲಿಸಿದರು.
ಹನೂರಿನ ಶಾಸಕರ ನಿವಾಸದಲ್ಲಿ ಭಾನುವಾರ ಪದಾಧಿಕಾರಿಗಳು ಭೇಟಿಯಾಗಿ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ತಾಲೂಕು ಭೂ ಮಾಪಕರ ಸಂಘದ ಅಧ್ಯಕ್ಷ ಎಚ್.ಎಂ. ಮಹದೇವಸ್ವಾಮಿ ಮಾತನಾಡಿ, ಸರ್ಕಾರಿ ಪರವಾನಗಿ ಭೂ ಮಾಪಕರಾಗಿ ಸುಮಾರು 23 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದು, ಇಲಾಖೆಗೆ ಅನುಕೂಲವಾಗುವಂತೆ ಸರ್ಕಾರಿ ಭೂ ಮಾಪಕರು ನಿರ್ವಹಿಸುವ ದರಖಾಸ್ತು, ಪೋಡಿ, ಆಕಾರ ಬಂದ್, ದಾಖಲೆಗಳ ಡಿಜಿಟಲೀಕರಣ, ಹದ್ದುಬಸ್ತು ಅಳತೆ, ಕೋರ್ಟ್ ಅಳತೆ, ಕೆರೆ ಅಳತೆ, ಪೋಡಿ ಮುಕ್ತ ಅಳತೆ, ಪವರ್ ಗ್ರಿಡ್, ಬ್ಯಾಕ್‌ಲಾಗ್ ಪೋಡಿ, ಸ್ವಮಿತ್ವ ಯೋಜನೆ ಸೇರಿದಂತೆ ಇಲಾಖೆಯ ಎಲ್ಲ ಕೆಲಗಳನ್ನು ನಿರ್ವಹಿಸುತ್ತಿದ್ದೇವೆ. ಆದರೆ ಈವರೆಗೂ ಕೆಲಸಕ್ಕೆ ಸೇವಾ ಭದ್ರತೆ ಇಲ್ಲ. ಜತೆಗೆ ಕೆಲಸಕ್ಕೆ ಸರಿಯಾದ ವೇತನ ಸಿಗುತ್ತಿಲ್ಲ. ಹಾಗಾಗಿ ನಮಗೆ ಒಂದು ಬಾರಿ ವಿಶೇಷ ನೇಮಕಾತಿ ಮಾಡಬೇಕು. ಇಲ್ಲವೇ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು.
ಇಲ್ಲವಾದಲ್ಲಿ ಕೆಲಸ ನಿರ್ವಹಿಸುವುದಿಲ್ಲ ಎಂದು ಫೆ.26ರಿಂದ ರಾಜ್ಯಾದ್ಯಂತ ಪ್ರತಿಭಟನೆ ಕೈಗೊಂಡಿದ್ದೇವೆ. ಈ ಸಂಬಂಧ ಮಾ.4ರಂದು ಭೂ ಮಾಪನ ಇಲಾಖೆಯ ಸಹಾಯಕ ನಿರ್ದೇಶಕರು ಹಾಗೂ ಇಲಾಖೆಯ ಆಯುಕ್ತರಿಗೂ ಮನವಿ ಸಲ್ಲಿಸಲಾಗಿದೆ. ಆದರೆ ಈವರೆಗೂ ಯಾವುದೇ ಕ್ರಮವಾಗಿಲ್ಲ. ಆದ್ದರಿಂದ ಈ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಿ ಅನುಕೂಲ ಕಲ್ಪಿಸುವಂತೆ ಮನವಿ ಮಾಡಿದರು. ಶಾಸಕರು ಈ ಬಗ್ಗೆ ಅಗತ್ಯ ಕ್ರಮವಹಿಸುವುದಾಗಿ ಭರವಸೆ ನೀಡಿದರು.
ಭೂ ಮಾಪಕರಾದ ಮಾದೇಶ್, ಪ್ರಮೋದ್‌ಕುಮಾರ್, ಮಹೇಶ್, ರಾಜೇಂದ್ರ, ಪ್ರವೀಣ್ ಹಾಗೂ ಇನ್ನಿತರರಿದ್ದರು.