ಯಳಂದೂರು ಪಟ್ಟಣದ ಗಾಂಧಿ ಸರ್ಕಲ್‌ನಲ್ಲಿ ುಟ್‌ಪಾತ್ ವ್ಯಾಪಾರಿಗಳು ಹಾಗೂ ಪಟ್ಟಣ ಪಂಚಾಯಿತಿ ಅಧಿಕಾರಿಗಳ ನಡುವೆ ಗುರುವಾರ ವಾಗ್ವಾದ ನಡೆಯಿತು.
ಸುಪ್ರೀಂ ಕೋರ್ಟ್ ಆದೇಶದನ್ವಯ ಪಟ್ಟಣದಲ್ಲಿ ಫುಟ್‌ಪಾತ್ ತೆರವುಗೊಳಿಸುವ ಪ್ರಕ್ರಿಯೆಯನ್ನು ಪಟ್ಟಣ ಪಂಚಾಯಿತಿಯಿಂದ ಆ.17ರಂದು ಆರಂಭಿಸಲಾಗಿತ್ತು. ಆದರೆ, ತೆರವು ಮಾಡಿದ ಎರಡೇ ದಿನಕ್ಕೆ ಮತ್ತೆ ಫುಟ್‌ಪಾತ್ ಆಕ್ರಮಿಸಿಕೊಂಡಿರುವ ವ್ಯಾಪಾರಿಗಳು ಎಂದಿನಂತೆ ವಹಿವಾಟನ್ನು ಮುಂದುವರಿಸಿದ್ದಾರೆ.
ಮತ್ತೆ ವ್ಯಾಪಾರಿಗಳನ್ನು ತೆರವುಗೊಳಿಸಲು ಬಂದ ಅಧಿಕಾರಿಗಳೊಂದಿಗೆ ವ್ಯಾಪಾರಸ್ಥರು ವಾಗ್ವಾದ ನಡೆಸಿದ್ದಾರೆ. ಜತೆಗೆ ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆ ವ್ಯಾಪಾರ ಮಾಡಿಕೊಳ್ಳುತ್ತೇವೆ ಎಂದು ಕೇಳಿಕೊಂಡ ಕಾರಣ ಅಧಿಕಾರಿಗಳು ವಾಪಸ್ಸಾಗಿದ್ದಾರೆ ಎಂದೂ ತಿಳಿದುಬಂದಿದೆ.
ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ
ಕೋರ್ಟ್ ಆದೇಶದಂತೆ ಆ.17ರಂದು ಪಟ್ಟಣದ ಗಾಂಧಿ ಸರ್ಕಲ್ ಬಳಿ ಇರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯದ ಬಳಿ ಪಪಂ ಅಧಿಕಾರಿಗಳು ುಟ್‌ಪಾತ್ ತೆರವುಗೊಳಿಸಿದ್ದರು. ಆದರೆ ಮತ್ತೆ ಅದೇ ಸ್ಥಳದಲ್ಲಿ ವ್ಯಾಪಾರಿಗಳು ವ್ಯಾಪಾರ ಮುಂದುವರಿಸಿದ್ದರು. ಹೀಗಾಗಿ ಗುರುವಾರ ಪರಿಶೀಲನೆಗೆ ಬಂದ ಅಧಿಕಾರಿಗಳೊಂದಿಗೆ ವ್ಯಾಪಾರಿಗಳು ಮಾತಿನ ಚಕಮಕಿ ನಡೆಸಿದರು. ಈ ವೇಳೆ ಪ್ರಭಾರ ಮುಖ್ಯಾಧಿಕಾರಿ ಮಹದೇವನಾಯಕ ಸಿಬ್ಬಂದಿಯೊಂದಿಗೆ ವಾಪಸ್ಸಾಗಿದ್ದು, ಸಾರ್ವಜನಿಕರ ಅನುಮಾನಕ್ಕೆ ಕಾರಣವಾಗಿದೆ. ರಾಜಕೀಯ ಒತ್ತಡ, ಕೆಲವರ ಹಿತಾಶಕ್ತಿ ಕಾಯುವ ನಿಟ್ಟಿನಲ್ಲಿ ಅಧಿಕಾರಿಗಳು ಸುಪ್ರೀಂ ಕೋರ್ಟ್ ಆದೇಶವನ್ನೇ ಪಾಲಿಸುತ್ತಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಗುರುತಿಸಿರುವ ಜಾಗಕ್ಕೆ ಹೋಗಲು ಹಿಂದೇಟು
ಪಟ್ಟಣ ಪಂಚಾಯಿತಿ ಈ ಹಿಂದೆ ಫುಟ್‌ಪಾತ್ ವ್ಯಾಪಾರಿಗಳ ಸಭೆ ಕರೆದು 15 ದಿನಗಳ ಬಳಿಕ ತೆರವಿಗೆ ಮುಂದಾಗುವುದಾಗಿ ತಿಳಿಸಿತ್ತು. ಅದರಂತೆ ತೆರವು ಕಾರ್ಯಾಚರಣೆ ಪ್ರಾರಂಭವಾದರೂ ಅದು ಒಂದು ದಿನಕ್ಕೆ ಮಾತ್ರ ಸೀಮಿತವಾಯಿತು. ಅಲ್ಲದೇ ರಸ್ತೆ ಬದಿ ವ್ಯಾಪಾರಿಗಳ ಅನುಕೂಲಕ್ಕಾಗಿ ಪಟ್ಟಣದ ಸಂತೆ ಮೈದಾನ ಹಾಗೂ ತಾಲೂಕು ಕಚೇರಿ ಮುಂಭಾಗದಲ್ಲಿ ವ್ಯಾಪಾರಕ್ಕೆ ಅವಕಾಶ ನೀಡಲಾಗಿದೆ. ಆದರೆ ಅಲ್ಲಿ ಹೋಗಿ ವ್ಯಾಪಾರ ಮಾಡಲು ವ್ಯಾಪಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಅಲ್ಲಿ ವ್ಯಾಪಾರವಾಗುವುದಿಲ್ಲ. ಅಲ್ಲಿಗೆ ನಾವು ಹೋಗುವುದಿಲ್ಲ ಎಂದು ವಾದಿಸುತ್ತಿದ್ದಾರೆ.
ಹಬ್ಬ ಇರುವುದರಿಂದ ಒಂದೆರಡು ದಿನ ವ್ಯಾಪಾರಕ್ಕೆ ಅವಕಾಶ ನೀಡಬೇಕೆಂದು ವ್ಯಾಪಾರಿಗಳು ಮನವಿ ಮಾಡಿದ್ದಾರೆ. ಆದರೆ ಸುಪ್ರೀಂಕೋರ್ಟ್ ಆದೇಶ ಇರುವುದರಿಂದ ಹೀಗೆ ಮಾಡಲು ಸಾಧ್ಯವಿಲ್ಲ. ನಿಮಗೆ ನಿಗದಿಯಾಗಿರುವ ಸ್ಥಳದಲ್ಲಿ ನೀವು ವ್ಯಾಪಾರ ಮಾಡಿಕೊಳ್ಳಿ ಎಂದು ಸೂಚನೆ ನೀಡಲಾಗಿದೆ. ಈ ಸಂಬಂಧ ನಗರಾಭಿವೃದ್ಧಿ ಯೋಜನಾಧಿಕಾರಿಗಳಿಗೆ ಮಾಹಿತಿ ನೀಡಿ ಪಾದಚಾರಿ ಮಾರ್ಗ ಒತ್ತುವರಿ ತೆರವುಗೊಳಿಸಲಾಗುವುದು.
ಮಹದೇವನಾಯಕ, ಪ್ರಭಾರ ಮುಖ್ಯಾಧಿಕಾರಿ, ಯಳಂದೂರು ಪಪಂ