ಮಲ್ಲಳ್ಳಿಮಾಳ ಗ್ರಾಮದಲ್ಲಿ ಅಕ್ರಮವಾಗಿ ಪಡಿತರ ಸಾಗಣೆ ಮಾಡುತ್ತಿದ್ದ ಪ್ಯಾಸೆಂಜರ್ ಆಟೋವನ್ನು ಆಹಾರ ಇಲಾಖೆ ಇನ್‌ಸ್ಪೆಕ್ಟರ್ ಪ್ರಸಾದ್ ಹಾಗೂ ಅಗರ-ಮಾಂಬಳ್ಳಿ ಠಾಣೆ ಪೊಲೀಸರು ವಶಕ್ಕೆ ಪಡೆದಿರುವುದು.
- ಕೊಳ್ಳೇಗಾಲದಲ್ಲಿ ಸಕ್ರಿಯವಾಗಿರುವ ಜಾಲ
- ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ
ಕೊಳ್ಳೇಗಾಲ: ಅನ್ನಭಾಗ್ಯ ಯೋಜನೆಯಡಿ ಬಡವರಿಗೆ ನೀಡುವ ಪಡಿತರ ಅಕ್ಕಿಯ ಅಕ್ರಮ ಸಾಗಣೆ, ಕಾಳಸಂತೆಯಲ್ಲಿ ಮಾರಾಟ ಕೊಳ್ಳೇಗಾಲದಲ್ಲಿ ಅವ್ಯಾಹತವಾಗಿ ಸಾಗಿದೆ.
ತಾಲೂಕಿನಲ್ಲಿ ನಿರಂತರವಾಗಿ ನಡೆಯುತ್ತಿರುವ ಪಡಿತರ ಅಕ್ಕಿಯ ಅಕ್ರಮ ಸಾಗಣೆಯನ್ನು ಸಂಪೂರ್ಣವಾಗಿ ನಿಲ್ಲಿಸಲು ಸಾಧ್ಯವಾಗುತ್ತಿಲ್ಲ. ಪಟ್ಟಣ ಸೇರಿದಂತೆ ಗ್ರಾಮಾಂತರ ಪ್ರದೇಶದಲ್ಲಿನ ಪ್ರತಿ ಮನೆಗೆ ತೆರಳಿ ಬಡವರಿಗೆ ನೀಡುವ ಪಡಿತರವನ್ನು ಕಡಿಮೆ ಬೆಲೆಯಲ್ಲಿ ಖರೀದಿಸಿ ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಜಾಲ ಸಕ್ರಿಯವಾಗಿದೆ.
ಅಕ್ರಮವಾಗಿ ಪಡಿತರ ಅಕ್ಕಿಯನ್ನು ಬೈಕ್, ಗೂಡ್ಸ್ ವಾಹನ, ಕಾರು ಇತ್ಯಾದಿ ವಾಹನಗಳಲ್ಲಿ ಸಾಗಿಸುವ ಕುರಿತು ಮಾಹಿತಿ ತಿಳಿದ ಪೊಲೀಸ್ ಇಲಾಖೆ ಮತ್ತು ಕೊಳ್ಳೇಗಾಲ ಆಹಾರ ಇಲಾಖೆ ಅಧಿಕಾರಿಗಳು ಜಂಟಿಯಾಗಿ ದಾಳಿ ನಡೆಸಿ ಅಕ್ರಮ ಎಸಗುವವರನ್ನು ಮಾಲು ಸಮೇತ ವಶಕ್ಕೆ ಪಡೆದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವ ಮೂಲಕ ಕಾನೂನು ಕ್ರಮ ಜರುಗಿಸಿ ಬಿಸಿ ಮುಟ್ಟಿಸುವ ಕೆಲಸ ಮಾಡಲಾಗುತ್ತಿದೆ. ಆದರೂ, ಕಾಯುವವನು ಹೆಚ್ಚೋ ಕದಿಯುವವನು ಹೆಚ್ಚೋ ಎಂಬ ಗಾದೆ ಮಾತಿನಂತೆ ಈ ದಂಧೆ ಮಾತ್ರ ನಿಂತಿಲ್ಲ. ರಾಜಾರೋಷವಾಗಿ ಪ್ರತಿ ಮನೆಗೆ ತೆರಳಿ ತೂಕ ಹಾಕಿಕೊಂಡು ಪಡಿತರ ಅಕ್ಕಿಯನ್ನು ಪಡೆದು ಸಂಗ್ರಹಿಸಿ ಬೈಕ್, ಕಾರು, ಗೂಡ್ಸ್ ವಾಹನದಲ್ಲಿ ಮಳ್ಳವಳ್ಳಿ, ಬನ್ನೂರು ಭಾಗದ ರೈಸ್ ಮಿಲ್‌ಗಳಿಗೆ ಸಾಗಣೆ ಮಾಡಲಾಗುತ್ತಿದೆ. ಈ ಅಕ್ರಮ ಕೆಲಸವನ್ನು ದಲ್ಲಾಳಿಗಳು ವೃತ್ತಿಯಾಗಿಸಿಕೊಂಡಿದ್ದಾರೆ. ಎಗ್ಗಿಲ್ಲದೆ ಸಾಗುತ್ತಿರುವ ಪಡಿತರ ಅಕ್ಕಿ ಅಕ್ರಮ ಮಾರಾಟ ನಿಲ್ಲುವುದು ಯಾವಾಗ ಎಂಬುದು ಈಗ ಯಕ್ಷ ಪ್ರಶ್ನೆಯಾಗಿದೆ.
ವಿವಿಧ ಠಾಣೆಯಲ್ಲಿ ಪ್ರಕರಣ ದಾಖಲು ಕೊಳ್ಳೇಗಾಲ ತಾಲೂಕು ವ್ಯಾಪ್ತಿಯಲ್ಲಿ ಕಳೆದ 2 ವರ್ಷಗಳಲ್ಲಿ ಅಕ್ರಮ ಪಡಿತರ ಸಾಗಣೆ ಮಾಡುವವರ ವಿರುದ್ಧ ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆ ಮತ್ತು ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆ, ಅಗರ-ಮಾಂಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
2024-25ರಲ್ಲಿ ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆಯಲ್ಲಿ 3 ಪ್ರಕರಣ ದಾಖಲಾಗಿದ್ದು 4023 ಕೆಜಿ ಪಡಿತರ ಅಕ್ಕಿಯನ್ನು ಜಪ್ತಿ ಮಾಡಿ ಇಬ್ಬರನ್ನು ಬಂಧಿಸಲಾಗಿದೆ. 2025-26 ರಲ್ಲಿ ಒಟ್ಟು 4 ಪ್ರಕರಣ ದಾಖಲಾಗಿದ್ದು, 32300 ಕೆಜಿ (323 ಕ್ವಿಂಟಾಲ್) ಪಡಿತರ ವಶಕ್ಕೆ ಪಡೆದು ಇಬ್ಬರನ್ನು ಬಂಧಿಸಲಾಗಿತ್ತು. ಅಂತೆಯೇ, ಕೊಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 2024-25 ರಲ್ಲಿ 5 ಪ್ರಕರಣ ದಾಖಲಾಗಿದ್ದು 8056 ಕೆಜಿ ಅಕ್ಕಿ ವಶಕ್ಕೆ ಪಡೆದು 5 ಜನರನ್ನು ಬಂಧಿಸಲಾಗಿತ್ತು. 2025-26ರಲ್ಲಿ 7 ಪ್ರಕರಣ ದಾಖಲಾಗಿದ್ದು 8066 ಕೆಜಿ ಅಕ್ಕಿ ವಶಕ್ಕೆ ಪಡೆದು 10 ಜನರನ್ನು ಬಂಧಿಸಲಾಗಿತ್ತು. 2025-2026ನೇ ಸಾಲಿನಲ್ಲಿ ಅಗರ-ಮಾಂಬಳ್ಳಿ ಪೊಲೀಸ್ ಠಾಣೆಯಲ್ಲಿ 1 ಪ್ರಕರಣ ದಾಖಲಾಗಿದ್ದು 1310 ಕೆಜಿ ಅಕ್ಕಿ ವಶಕ್ಕೆ ಪಡೆದು ಒಬ್ಬನನ್ನು ಬಂಧಿಸಲಾಗಿತ್ತು. ಅಂತೆಯೇ, 2026-27ನೇ ಸಾಲಿನಲ್ಲಿ ಏ.4 ರಂದು ಪ್ರಕರಣವೊಂದು ದಾಖಲಾಗಿದ್ದು 755 ಕೆಜಿ ಪಡಿತರ ಅಕ್ಕಿಯನ್ನು ವಶಕ್ಕೆ ಪಡೆಯಲಾಗಿತ್ತು. ಇದು ಕೊಳ್ಳೇಗಾಲದಲ್ಲಿ ಸಕ್ರಿಯವಾಗಿರುವ ಪಡಿತರ ಅಕ್ಕಿ ಮಾರಾಟ ದಂಧೆಗೆ ಸಾಕ್ಷಿಯಾಗಿದೆ.
ಕೊಳ್ಳೇಗಾಲ ತಾಲೂಕಿನ ಆಹಾರ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಅಕ್ರಮ ಚಟುವಟಿಕೆ ತಡೆಗಟ್ಟಲು ದಾಳಿ ನಡೆಸಿ ಕ್ರಮವಹಿಸುತ್ತಿದ್ದರೂ ಸಂಪೂರ್ಣವಾಗಿ ನಿಲ್ಲಿಸಲು ಸಾಧ್ಯವಾಗುತ್ತಿಲ್ಲ. ಪಡಿತರ ಅಕ್ಕಿಯನ್ನು ಕಡಿಮೆ ಬೆಲೆಗೆ ಖರೀದಿಸಿ ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ದಂಧೆ ನಿಂತಿಲ್ಲ.
ಸರ್ಕಾರ ನೀಡುವ ಅಕ್ಕಿಯನ್ನು ಜನರಿಂದ 16 ರಿಂದ 17 ರೂ.ಗೆ ಖರೀದಿಸಲಾಗುತ್ತಿದೆ. ಈ ಕೃತ್ಯಕ್ಕೆ ದಲ್ಲಾಳಿಗಳು ಸ್ಥಳೀಯರನ್ನು ಬಳಸಿಕೊಳ್ಳಲಾಗುತ್ತಿದೆ. ಖರೀದಿ ನಂತರ ಗೂಡ್ಸ್ ವಾಹನ, ಕಾರು ಇತರ ವಾಹನಗಳಲ್ಲಿ ಮಳ್ಳವಳ್ಳಿ, ಬನ್ನೂರು ಭಾಗದ ರೈಸ್ ಮಿಲ್‌ಗಳಿಗೆ ಮಾರಾಟ ಮಾಡಲಾಗುತ್ತಿದೆ. ಈವರೆಗೆ ಪಡಿತರವನ್ನು ವ್ಯಾಪಾರಿಗಳಿಗೆ ಮಾರಾಟ ಮಾಡುವವರ ವಿರುದ್ಧ ಯಾವುದೇ ಕ್ರಮವಾಗಿಲ್ಲದಿರುವುದು ಅಧಿಕಾರಿಗಳ ಇಚ್ಛಾಶಕ್ತಿಯನ್ನು ಪ್ರಶ್ನಿಸುತ್ತಿದೆ.