ಗುಂಡ್ಲುಪೇಟೆ ತಾಲೂಕಿನ ಮಲ್ಲಯ್ಯನಪುರ ಗ್ರಾಮದ ಗುಡ್ಡದಲ್ಲಿ ನೂರಾರು ಅಡಿ ಆಳದವರೆಗೆ ಕಲ್ಲು ತೆಗೆಯಲಾಗಿದೆ.
- ಕೂತನೂರು ಬಳಿ ಅಹೋರಾತ್ರಿ ಲೂಟಿ
- ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಚ್ಚಾದ ಟಿಪ್ಪರ್‌ಗಳ ಆರ್ಭಟ
ಗುಂಡ್ಲುಪೇಟೆ:
ತಾಲೂಕಿನ ಮಡಹಳ್ಳಿ ಕೂತನೂರು ಸಮೀಪ ಅಹೋರಾತ್ರಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೂ ಜಿಲ್ಲಾಡಳಿತ ಸುಮ್ಮನಿರುವ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೂತನೂರಿಗೆ ಸೇರಿದ ಸರ್ಕಾರಿ ಗುಡ್ಡದಲ್ಲಿ ಬಿಳಿಕಲ್ಲು ಗಣಿಗಾರಿಕೆ ನಡೆಸಲಾಗುತ್ತಿದೆ. ಸುಮಾರು ಆರೇಳು ವರ್ಷಗಳಿಂದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅನುಮತಿ ಪಡೆದು 4 ಜನರು ಕಾರ್ಮಿಕರ ನೆರವಿನಿಂದ ಸಣ್ಣ ಪ್ರಮಾಣದಲ್ಲಿ ಗಣಿಗಾರಿಕೆ ನಡೆಸುತ್ತಿದ್ದರು.
ಆದರೆ, ನೆರೆಯ ಕೇರಳಂ ಹಾಗೂ ತಾಲೂಕಿನ ಕ್ರಷರ್‌ಗಳಲ್ಲಿ ಕಲ್ಲಿಗೆ ಬೇಡಿಕೆ ಹೆಚ್ಚಾಗಿದ್ದರಿಂದ ದೊಡ್ಡ ದೊಡ್ಡ ಉದ್ಯಮಿಗಳು ಇವರಿಂದ ಸಬ್‌ಲೀಸ್ ಪಡೆದು ಬೃಹತ್ ಪ್ರಮಾಣದಲ್ಲಿ ಗಣಿಗಾರಿಕೆ ನಡೆಸುತ್ತಿದ್ದಾರೆ.
ಅಧಿಕೃತವಾಗಿ ನಾಲ್ಕು ಲೀಸ್ ಇದ್ದರೆ ಅನಧಿಕೃತವಾಗಿ 8 ಕಡೆಗಳಲ್ಲಿ ಗಣಿಗಾರಿಕೆ ನಡೆಯುತ್ತಿದೆ. ಜತೆಗೆ 20, 30 ಗುಂಟೆ ವಿಸ್ತೀರ್ಣವನ್ನು ಲೀಸ್ ಪಡೆದು ನಾಲ್ಕಾರು ಎಕರೆಯಷ್ಟು ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿರುವ ಪರಿಣಾಮ ಗುಡ್ಡವು ದಿನೇ ದಿನೆ ಕರಗುತ್ತಿದೆ. ಅಲ್ಲದೆ ನೂರಾರು ಅಡಿ ಆಳದವರೆಗೂ ಕಲ್ಲು ತೆಗೆದಿರುವುದು ಸ್ಯಾಟಲೈಟ್ ಚಿತ್ರಗಳಲ್ಲಿ ಸೆರೆಯಾಗಿದೆ. ಆದರೂ ಇದನ್ನು ತಡೆಗಟ್ಟಬೇಕಾದ ಗಣಿ ಇಲಾಖೆ ಯಾವುದೇ ಕ್ರಮಕೈಗೊಂಡಿಲ್ಲ. ಗಣಿ ಇಲಾಖೆ ವಾಹನಗಳ ಚಾಲಕರು ಆಗಾಗ ಇಲ್ಲಿಗೆ ಬಂದು ಹಣ ವಸೂಲಿ ಮಾಡಿಕೊಂಡು ಪರೋಕ್ಷವಾಗಿ ಸಹಕಾರ ನೀಡುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.
ಸಾಲದ್ದಕ್ಕೆ ರಾತ್ರಿಯಿಡೀ ಕಲ್ಲು ತೆಗೆದು ಸ್ಥಳೀಯ ಕ್ರಷರ್‌ಗಳಿಗೆ ಕಡಿಮೆ ದರಕ್ಕೆ ಸರಬರಾಜು ಮಾಡುತ್ತಿದ್ದಾರೆ. ಇದರಿಂದ ಸಕ್ರಮವಾಗಿ ಗಣಿಗಾರಿಕೆ ನಡೆಸುತ್ತಿರುವ ಕ್ವಾರಿಗಳ ಕಲ್ಲುಗಳಿಗೆ ಬೇಡಿಕೆ ಇಲ್ಲದಂತಾಗಿದೆ ಎಂದು ಉದ್ಯಮಿಗಳು ಆರೋಪಿಸಿದ್ದಾರೆ.
ರಾತ್ರಿ ವೇಳೆ ಗುಡ್ಡದಲ್ಲಿ ತೆಗೆದ ಕಲ್ಲುಗಳನ್ನು ದೊಡ್ಡ ಟಿಪ್ಪರ್‌ಗಳ ಮೂಲಕ ಕೇರಳಕ್ಕೆ ಸಾಗಿಸಲಾಗುತ್ತಿದೆ. ಪ್ರತಿದಿನವೂ ಬೆಳಗ್ಗೆ 6 ರಿಂದ ರಾತ್ರಿ 9 ಗಂಟೆವರೆಗೆ ಕೇರಳಂಗೆ 300 ಲಾರಿಗಳಷ್ಟು ಕಲ್ಲು ಸಾಗಿಸಿದರೆ, ರಾತ್ರಿ ವೇಳೆ ಅಷ್ಟೇ ಪ್ರಮಾಣದಲ್ಲಿ ಸ್ಥಳೀಯ ಕ್ರಷರ್‌ಗಳಿಗೆ ಪೂರೈಕೆ ಮಾಡಲಾಗುತ್ತಿದೆ. ಇದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಟಿಪ್ಪರ್‌ಗಳ ಆರ್ಭಟ ಹೆಚ್ಚಾಗಿದ್ದು ಅಪಘಾತಗಳಿಗೆ ಕಾರಣವಾಗುತ್ತಿದೆ.
ಐದು ವರ್ಷಗಳ ಹಿಂದೆ ಸಮೀಪದ ಗುಮ್ಮಕಲ್ಲುಗುಡ್ಡದಲ್ಲಿ ಹೀಗೆಯೇ ಗಣಿಗಾರಿಕೆ ನಡೆಸಿದ ಪರಿಣಾಮ ಗುಡ್ಡಕುಸಿದು ಮೂವರು ಕಾರ್ಮಿಕರು ಸಾವಿಗೀಡಾಗಿದ್ದರೂ ಗಣಿ ಇಲಾಖೆ ಅಕ್ರಮ ಗಣಿಗಾರಿಕೆ ತಡೆಗಟ್ಟುವ ಬದಲು ಅಧಿಕಾರಿಗಳೇ ಪರೋಕ್ಷವಾಗಿ ಸಹಕಾರ ನೀಡುತ್ತಿದ್ದಾರೆ ಎಂದು ಗಣಿ ಉದ್ಯಮಿಗಳೇ ಆರೋಪಿಸುತ್ತಿದ್ದಾರೆ.
ಈಗಾಗಲೇ ತಾಲೂಕಿನ ಅಮೂಲ್ಯವಾದ ಗಣಿಸಂಪತ್ತು ದರೋಡೆಯಾಗುತ್ತಿದೆ. ಟಿಪ್ಪರ್ ಆಟಾಟೋಪದಿಂದ ಪದೇ ಪದೆ ಅಪಘಾತಗಳು ಸಂಭವಿಸಿ ಸಾವು, ನೋವುಗಳಾಗುತ್ತಿವೆ. ಶಾಲಾ ಮಕ್ಕಳಿದ್ದ ವಾಹನಕ್ಕೆ ಟಿಪ್ಟರ್ ಡಿಕ್ಕಿ ಹೊಡೆದ ಘಟನೆ ನಂತರ ಶಾಲೆಗಳ ಸಮಯದಲ್ಲಿ ಸಂಚರಿಸದಂತೆ ನಿರ್ಬಂಧ ವಿಧಿಸಿದ್ದರೂ ಪಾಲನೆಯಾಗುತ್ತಿಲ್ಲ. ಪೊಲೀಸರು ನೆಪಮಾತ್ರಕ್ಕೆ ಇವುಗಳಿಗೆ ದಂಡವಿಧಿಸುತ್ತಿದ್ದಾರೆ. ಇನ್ನಾದರೂ ಸರ್ಕಾರ ಅಕ್ರಮ ತಡೆಗಟ್ಟಲು ವಿಫಲರಾದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು.
ನಂದೀಶ್ ವಕೀಲರು, ಗುಂಡ್ಲುಪೇಟೆ
ಈ ಬಗ್ಗೆ ನಮಗೆ ದೂರುಗಳು ಬಂದಿದ್ದು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಆರೋಪಗಳಲ್ಲಿ ಸತ್ಯಾಂಶವಿರುವುದು ಕಂಡುಬಂದಿದೆ. ಅಕ್ರಮ ಗಣಿಗಾರಿಕೆಗೆ ಸಹಕಾರ ನೀಡುತ್ತಿರುವ ಚಾಲಕರು ಹಾಗೂ ಅಧಿಕಾರಿಗಳನ್ನು ಬದಲಾಯಿಸಿ ಅನಧಿಕೃತ ಗಣಿಗಾರಿಕೆ ಮಾಡುವವರ ವಿರುದ್ಧ ಕ್ರಮಕೈಗೊಳ್ಳಲಾಗುವುದು.
ನವೀನ್ ಹಿರಿಯ ಭೂವಿಜ್ಞಾನಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ