ಚಾಮರಾಜನಗರದ ನೂತನ ಜಿಲ್ಲಾ ಕೇಂದ್ರ ಗ್ರಂಥಾಲಯ 
ಚಾಮರಾಜನಗರ

ನೂತನ ಲೈಬ್ರರಿಗೆ ಇನ್ನೂ ಬೇಕು ಅನುದಾನ

ಕಿರಣ್ ಮಾದರಹಳ್ಳಿ

ಪ್ರಮುಖ ಮುಖ್ಯಾಂಶಗಳು

  • ಉದ್ಘಾಟನೆಯಾಗಲು ಮೀನಾಮೇಷ ಎಣಿಸಿದ್ದ ಗ್ರಂಥಾಲಯ
  • ಇದೆ ಉಪಕರಣಗಳ ಅವಶ್ಯಕತೆ, ಇಲಾಖೆಯಲ್ಲಿಲ್ಲ ಕಾಯಂ ಸಿಬ್ಬಂದಿ
ಚಾಮರಾಜನಗರ: ಉದ್ಘಾಟನೆಯಾಗಲು ಮೀನಾಮೇಷ ಎಣಿಸುತ್ತಾ ಕೊನೆಗೂ ಲೋಕಾರ್ಪಣೆಗೊಂಡಿರುವ ನೂತನ ಜಿಲ್ಲಾ ಕೇಂದ್ರ ಗ್ರಂಥಾಲಯ ಹಲವು ಅವಶ್ಯಕತೆಗಳನ್ನು ಬೇಡುತ್ತಿದೆ.
ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಆವರಣದಲ್ಲಿ 3 ಕೋಟಿ ರೂ.ವೆಚ್ಚದಲ್ಲಿ ಲೈಬ್ರರಿ ನಿರ್ಮಾಣವಾಗಿದ್ದು, ಇನ್ನೂ ಸುಮಾರು 1 ಕೋಟಿ ರೂ.ಗಳ ಅನುದಾನದ ಅಗತ್ಯವಿದೆ. ಗ್ರಂಥಾಲಯ ನಿರ್ಮಾಣಕ್ಕೆ 2021ರಲ್ಲಿ ಶಂಕುಸ್ಥಾಪನೆಯಾಗಿ ನಂತರ ಕಾಮಗಾರಿ ಶುರುವಾಯಿತು. ಬಳಿಕ ಕಟ್ಟಡ ಕಟ್ಟಿ ವರ್ಷವೇ ಕಳೆದರೂ ಉದ್ಘಾಟನೆಯಾರಲಿಲ್ಲ. ಓದುಗರ ಒತ್ತಾಯಕ್ಕೆ ಮಣಿದು ಕೊನೆಗೂ ಲೈಬ್ರರಿ ಉದ್ಘಾಟನೆಯಾಯಿತು. ಇಷ್ಟು ಸುದೀರ್ಘ ಸಮಯ ತೆಗೆದುಕೊಂಡ ಬಳಿಕವೂ ಲೈಬ್ರರಿ ಪರಿಪೂರ್ಣವಾಗಿ ಸಜ್ಜಾಗಿಲ್ಲ.
ನೂತನ ಗ್ರಂಥಾಲಯದ ಅಗತ್ಯಗಳನ್ನು ಮುಖ್ಯ ಗ್ರಂಥಾಲಯ ಅಧಿಕಾರಿ ಶಿವಸ್ವಾಮಿ ಪಟ್ಟಿ ಮಾಡಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರಿಗೆ ಮನವಿ ಸಲ್ಲಿಸಿದ್ದು, ಇದರ ಪ್ರಕಾರ, ಲೈಬ್ರರಿಗೆ 20 ಕಂಪ್ಯೂಟರ್, 2 ಲ್ಯಾಪ್‌ಟಾಪ್, ಸುತ್ತುಗೋಡೆ ನಿರ್ಮಾಣ, ಸಭಾಂಗಣದಲ್ಲಿ ಆಡಿಟೋರಿಯಂ, ಒಳಾಂಗಣದಲ್ಲಿ ನೆಲಹಾಸು, ಆಸನಗಳ ವ್ಯವಸ್ಥೆ, ಧ್ವನಿವರ್ಧಕ, ಪ್ರೊಜೆಕ್ಟರ್, ಪರದೆ, ದ್ವಿಚಕ್ರ ವಾಹನಗಳ ನಿಲುಗಡೆ ಸ್ಥಳ, ಮಳೆ ನೀರು ಹರಿದು ಹೋಗಲು ಚರಂಡಿ ನಿರ್ಮಾಣ, ಧ್ವಜ ಸ್ಥಂಭ, ಉದ್ಯಾನ ನಿರ್ಮಾಣ, ಲ್‌ಟಿ ಬಳಕೆಗಾಗಿ ಜನರೇಟರ್ ಸೌಲಭ್ಯದ ಅಗತ್ಯವಿದೆ. ಇದಕ್ಕೆಲ್ಲ ಅಂದಾಜು 1 ಕೋಟಿ ರೂ.ಬೇಕಾಗುತ್ತದೆ. ಸೋಮವಾರ ಉದ್ಘಾಟನೆಯಾದ ಗ್ರಂಥಾಲಯಕ್ಕೆ ಪುಸ್ತಕಗಳನ್ನು ಕೊಡಿಸುವುದಾಗಿ ತಿಳಿಸಿರುವ ಶಾಸಕ ಸಿ.ಪುಟ್ಟರಂಗಶೆಟ್ಟಿ ಉಳಿದ ಅವಶ್ಯಕತೆಗಳಿಗೂ ಅನುದಾನ ನೀಡುವುದಾಗಿ ಭರವಸೆ ಕೊಟ್ಟಿದ್ದಾರೆ.
ಕಾಯಂ ಸಿಬ್ಬಂದಿ ಇಲ್ಲ: ಜಿಲ್ಲಾ ಗ್ರಂಥಾಲಯ ಇಲಾಖೆಗೆ ಕಾಯಂ ಸಿಬ್ಬಂದಿ ಇಲ್ಲದೆ ಕಷ್ಟದಲ್ಲಿದೆ. ಇಲಾಖೆಗೆ ಮಂಜೂರಾಗಿರುವ ಹುದ್ದೆಗಳು ಒಟ್ಟು 15 ಆಗಿದೆ. ಆದರೆ ಸರ್ಕಾರದಿಂದ ಭರ್ತಿಯಾಗಿರುವ ಹುದ್ದೆಗಳು ಕೇವಲ 3 ಮಾತ್ರ. ಮುಖ್ಯ ಗ್ರಂಥಾಲಯ ಅಧಿಕಾರಿ, ಚಾಮರಾಜನಗರ ಮತ್ತು ಗುಂಡ್ಲಪೇಟೆ ತಾಲೂಕುಗಳಲ್ಲಿರುವ ಗ್ರಂಥಾಲಯ ಸಹಾಯಕರು ಮಾತ್ರ ಸರ್ಕಾರದಿಂದ ನೇಮಕವಾಗಿದ್ದು, ಇದರಲ್ಲೂ ಚಾಮರಾಜನಗರದ ಗ್ರಂಥಾಲಯ ಸಹಾಯಕಿ ಅನಾರೋಗ್ಯ ಪೀಡಿತರಾಗಿದ್ದಾರೆ. ಇಲಾಖೆಯ ನಿರ್ವಹಣೆಗಾಗಿ ಬೇಕಾದ ಕಂ್ಯೂಟರ್ ಆಪರೇಟರ್, ಪುಸ್ತಕ ಜೋಡಿಸುವವರು, ಸ್ವಚ್ಛತೆ ಕೆಲಸ ಮಾಡುವವರು ಸೇರಿದಂತೆ ಒಟ್ಟು 12 ಸಿಬ್ಬಂದಿಯನ್ನು ಕೈ ರಶೀದಿ ಆಧಾರದಲ್ಲಿ ಕೆಲಸಕ್ಕೆ ತೆಗೆದುಕೊಳ್ಳಲಾಗಿದೆ.
ಇವರಿಗೆಲ್ಲಾ ಜಿಲ್ಲಾ ಗ್ರಂಥಾಲಯದಿಂದಲೇ ಸಂಬಳ ವಿತರಣೆ ಮಾಡಬೇಕಾಗಿದೆ. ಅಂದರೆ ಚಾಮರಾಜನಗರ ಮತ್ತು ಕೊಳ್ಳೇಗಾಲ ನಗರಸಭೆ, ಗುಂಡ್ಲುಪೇಟೆಯ ಪುರಸಭೆ, ಹನೂರಿನ ಪಟ್ಟಣ ಪಂಚಾಯಿತಿಗಳಲ್ಲಿ ಸಾರ್ವಜನಿಕರಿಂದ ವಸೂಲಿ ಮಾಡುವ ಭೂ ಕಂದಾಯದ ಮೇಲಿನ ಗ್ರಂಥಾಲಯ ಉಪಕರ ಶೇ.6ರಷ್ಟು ಹಣದಿಂದ ಸಂಬಳ ನೀಡಬೇಕು. ನೀರು, ವಿದ್ಯುತ್ ಶುಲ್ಕ ಪಾವತಿ ಸೇರಿದಂತೆ ಗ್ರಂಥಾಲಯ ನಿರ್ವಹಣೆಯ ಹೊಣೆಗಾರಿಯೂ ಇದೆ.
ಖಾಸಗಿ ಸಹಕಾರಕ್ಕೂ ಪ್ರಯತ್ನ:
ಗ್ರಂಥಾಲಯದಲ್ಲಿ ಶ್ರವ್ಯ ಮತ್ತು ದೃಶ್ಯ ಸಮಸ್ಯೆ ಇರುವ ಓದುಗರಿಗೆ ತಂತ್ರಜ್ಞಾನ ಆಧಾರಿತ ವ್ಯವಸ್ಥೆ ಕಲ್ಪಿಸಲು ಮುಖ್ಯ ಗ್ರಂಥಾಲಯ ಅಧಿಕಾರಿ ಶಿವಸ್ವಾಮಿ ಚಿಂತನೆ ನಡೆಸಿದ್ದಾರೆ. ಈ ಸಂಬಂಧ ಜಿಲ್ಲಾ ಕೇಂದ್ರ ಗ್ರಂಥಾಲಯ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಶ್ರೀರೂಪಾ ಅವರ ಗಮನಕ್ಕೆ ತಂದು ಅಗತ್ಯವಿರುವ ಅನುದಾನಕ್ಕಾಗಿ ಖಾಸಗಿ ಕಂಪನಿಗಳ ಸಿಎಸ್‌ಆರ್ ಂಡ್‌ಗೆ ಮನವಿ ಮಾಡಲು ಯೋಚನೆ ಇದೆ.
29,193 ಸದಸ್ಯರು:
ಜಿಲ್ಲಾ ಕೇಂದ್ರ ಗ್ರಂಥಾಲಯ 29,193 ಸದಸ್ಯತ್ವ ನೊಂದಣಿ ಮಾಡಿಕೊಂಡಿದೆ. ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕ, ಕಥೆ, ಕಾದಂಬರಿ ಇನ್ನಿತರೆ ಸೇರಿ ಒಟ್ಟು 26,000 ಪುಸ್ತಕಗಳನ್ನು ಹೊಂದಿದೆ. ಪ್ರತಿದಿನ ಪತ್ರಿಕೆ ಓದುಗರು ನೂರಕ್ಕೂ ಹೆಚ್ಚು ಜನ ಬರುತ್ತಾರೆ. 80-90 ಸ್ಪಧಾತ್ಮಕ ಪರೀಕ್ಷೆಗಳಿಗೆ ಓದುತ್ತಿರುವ ಉದ್ಯೋಗಾಕಾಂಕ್ಷಿಗಳು ಆಗಮಿಸುತ್ತಿದ್ದಾರೆ ಎಂದು ಜಿಲ್ಲಾ ಗ್ರಂಥಾಲಯ ಇಲಾಖೆ ಮಾಹಿತಿ ನೀಡಿದೆ.
ರಂಗಮಂದಿರದಂತೆ ಆಗದಿರಲಿ:
ನಗರದ ಡಾ.ರಾಜ್‌ಕುಮಾರ್ ರಂಗಮಂದಿರದ ಪರಿಸ್ಥಿತಿ ನೂತನ ಗ್ರಂಥಾಲಯಕ್ಕೆ ಬರಬಾರದು. ಈ ಲೈಬ್ರರಿ ರೀತಿಯಲ್ಲೇ ರಂಗಮಂದಿರ ನಿರ್ಮಾಣವಾಗಿ ಉದ್ಘಾಟನೆ ಕಾಣದೆ ನಿಂತಿತ್ತು. ಕಲಾವಿದರ ಒತ್ತಾಯದ ಮೇರೆಗೆ ರಂಗಮಂದಿರ ಉದ್ಘಾಟನೆ ಕಂಡಿತು. ಈಗಲೂ ಸಹ ಇದರ ಬಾಲ್ಕನಿಯಲ್ಲಿ ಆಸನಗಳಿಲ್ಲ. ಧ್ವನಿ, ಬೆಳಕು, ಜನರೇಟರ್ ಇಲ್ಲ. ಕೊರತೆಗಳ ನಡುವೆಯೇ ಕಲಾ ಪ್ರದರ್ಶನಗಳು ನಡೆಯುತ್ತಿವೆ. ಹೊಸ ಲೈಬ್ರರಿಯೂ ಮುಂದೆ ಇದೇ ರೀತಿ ಕೊರತೆಗಳ ಮಧ್ಯೆಯೇ ಉಳಿದುಬಿಟ್ಟರೆ ಓದುಗರಿಗೆ ಉತ್ತಮ ಸ್ಥಳ ಮತ್ತು ಅಗತ್ಯ ಸೌಲಭ್ಯ ಒದಗಿಸಿಕೊಡದ ಆಡಳಿತ ವ್ಯವಸ್ಥೆ ಇದ್ದರೂ ವ್ಯರ್ಥ.
ಇಲಾಖೆಯಲ್ಲಿ ಕಾಯಂ ಸಿಬ್ಬಂದಿ ಕೊರತೆ ಇದ್ದು, ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ನೂತನ ಗ್ರಂಥಾಲಯದ ಅವಶ್ಯಕತೆಗಳನ್ನು ಪಟ್ಟಿ ಮಾಡಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರಿಗೆ ಮನವಿ ಸಲ್ಲಿಸಲಾಗಿದೆ. ಅವರಿಂದ ಸಕಾರಾತ್ಮಕ ಸ್ಪಂದನೆ ದೊರೆತಿದೆ.
ಶಿವಸ್ವಾಮಿ, ಮುಖ್ಯ ಗ್ರಂಥಾಲಯ ಅಧಿಕಾರಿ ಚಾಮರಾಜನಗರ