ಯಳಂದೂರು ಪಟ್ಟಣದಲ್ಲಿ ನಿರ್ಮಾಣ ಹಂತದಲ್ಲಿರುವ ನೂತನ ಆಸ್ಪತ್ರೆ ಕಟ್ಟಡವನ್ನು ಶಾಸಕ ಎ.ಆರ್.ಕೃಷ್ಣಮೂರ್ತಿ ಮಂಗಳವಾರ ಪರಿಶೀಲಿಸಿದರು.
- ಶಾಸಕ ಎ.ಆರ್.ಕೃಷ್ಣಮೂರ್ತಿ ಮಾಹಿತಿ
- * ಕಾಮಗಾರಿ ಪರಿಶೀಲನೆ
ಯಳಂದೂರು: ಪಟ್ಟಣದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ನೂರು ಹಾಸಿಗೆಗಳ ತಾಲೂಕು ಆಸ್ಪತ್ರೆ ಕಟ್ಟಡವನ್ನು ಆಗಸ್ಟ್ ವೇಳೆಗೆ ಉದ್ಘಾಟನೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಮಾಹಿತಿ ನೀಡಿದರು.
ಪಟ್ಟಣದಲ್ಲಿ ನಡೆಯುತ್ತಿರುವ ನೂತನ ಆಸ್ಪತ್ರೆಯ ಕಟ್ಟಡದ ಕಾಮಗಾರಿಯನ್ನು ಮಂಗಳವಾರ ಪರಿಶೀಲಿಸಿ ಮಾತನಾಡಿದರು. ಜುಲೈ ತಿಂಗಳ ಕೊನೆಯಲ್ಲಿ ಈ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಸಂಬಂಧಪಟ್ಟ ಇಲಾಖೆ ಅಧಿಕಾರಿ ಹಾಗೂ ಗುತ್ತಿಗೆದಾರರು ಮಾಹಿತಿ ನೀಡಿದ್ದಾರೆ. ಆಗಸ್ಟ್ ತಿಂಗಳಲ್ಲಿ ಇದನ್ನು ಮುಖ್ಯಮಂತ್ರಿ ಅವರಿಂದಲೇ ಉದ್ಘಾಟಿಸಲು ಕ್ರಮ ವಹಿಸಲಾಗುವುದು ಎಂದು ಮಾಹಿತಿ ನೀಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯರವರು ನನ್ನ ಮನವಿಯ ಮೇರೆಗೆ ರಾಜ್ಯದ 7ನೇ ಆಸ್ಪತ್ರೆಯ ನೂತನ ಕಟ್ಟಡಕ್ಕೆ ಅನುದಾನವನ್ನು ಬಿಡುಗಡೆ ಮಾಡಿ, ಅವರೇ ಶಂಕುಸ್ಥಾಪನೆ ನೆರವೇರಿಸಿದ್ದರು. ನೂತನ ಕಟ್ಟಡದಲ್ಲಿ ಹಳೆಯ ಆಸ್ಪತ್ರೆ ಸೇರಿದಂತೆ ನೂರು ಹಾಸಿಗೆಗಳು ಇರಲಿವೆ. ಇದರೊಂದಿಗೆ ಎರಡು ಶಸ್ತ್ರ ಚಿಕಿತ್ಸೆ ಕೊಠಡಿಗಳು, ಐಸಿಯು, ಎಂಐಸಿಯು ಕೊಠಡಿ ಕೂಡ ಇರಲಿದೆ. ಇದರೊಂದಿಗೆ ರಿಕವರಿಂಗ್ ರೂಂ ಕೂಡ ಇರಲಿದೆ. ಆಸ್ಪತ್ರೆಯ ಮತ್ತೊಂದು ಬದಿಯಲ್ಲಿ ಸುಸಜ್ಜಿತ ಹೈಟೆಕ್ ಶವಾಗಾರ ಕಟ್ಟಡದ ಕಾಮಗಾರಿ ನಡೆಯುತ್ತಿದ್ದು ಇದು ಕೂಡ ಪೂರ್ಣಗೊಳ್ಳಲಿದೆ. ವಸತಿ ಗೃಹಗಳು ಕೂಡ ಇದರಲ್ಲಿ ಸೇರಿವೆ ಎಂದರು.
ಆಸ್ಪತ್ರೆಗೆ ತೆರಳಲು ಬೈಪಾಸ್ ರಸ್ತೆ ಹಾಗೂ ಆಸ್ಪತ್ರೆ ಮುಂಭಾಗದಿಂದ ಎರಡು ಕಡೆಯಿಂದ ರಸ್ತೆ ಮಾಡಲು ಸೂಚನೆ ನೀಡಲಾಗಿದೆ. ಇದಕ್ಕೆ ಪಟ್ಟಣ ಪಂಚಾಯಿತಿ ಹಾಗೂ ಸರ್ವೇ ಇಲಾಖೆಯಿಂದ ಜಾಗವನ್ನು ಸರ್ವೇ ಮಾಡಿಸಿ ನೀಡಲಾಗುವುದು. ಸುಸಜ್ಜಿತ ರಸ್ತೆಯ ಎರಡೂ ಕಡೆ ನಿರ್ಮಾಣ ಆದರೆ ಇಲ್ಲಿಗೆ ಬರುವ ರೋಗಿಗಳಿಗೆ ಹೆಚ್ಚಿನ ಅನುಕೂಲ ಆಗಲಿದೆ. ಇದರೊಂದಿಗೆ ಆಸ್ಪತ್ರೆಯ ಮುಂಭಾಗದಲ್ಲಿ ರೋಗಿಗಳು ನಿಲ್ಲಲು ಬಸ್ ಶೆಲ್ಟರ್ ವ್ಯವಸ್ಥೆ ನನ್ನ ಶಾಸಕರ ನಿಧಿ ಅನುದಾನದಲ್ಲೇ ಮಾಡುತ್ತೇನೆ. ಇದರೊಂದಿಗೆ ಪಟ್ಟಣದಲ್ಲಿ ಎರಡೂವರೆ ಕೋಟಿ ರೂ. ವೆಚ್ಚದಲ್ಲಿ ನೂತನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಟ್ಟಡವನ್ನು ನಿರ್ಮಿಸಲು ಕ್ರಮ ವಹಿಸಲಾಗಿದೆ ಎಂದರು.
5.75 ಕೋಟಿ ರೂ. ವೆಚ್ಚದಲ್ಲಿ ಬಿಳಿಗಿರಿರಂಗನ ಬೆಟ್ಟ, ಯಳಂದೂರು ಪಟ್ಟಣದ ಇಂದಿರಾ ಕ್ಯಾಂಟೀನ್ ಬಳಿ ಹಾಗೂ ಸಮೀಪದ ಸಂತೆಮರಳ್ಳಿಯಲ್ಲಿ ಸುಸಜ್ಜಿತ ಬಸ್ ನಿಲ್ದಾಣದ ಕಾಮಗಾರಿಗಳಿಗೂ ಆದಷ್ಟು ಬೇಗ ಚಾಲನೆ ನೀಡಲು ಕ್ರಮ ವಹಿಸಲಾಗುವುದು. ಮಳ್ಳಹಳ್ಳಿ ಗೇಟ್ ಬಳಿ ಈಗಾಗಲೇ ಜಾಗವನ್ನು ಗುರುತಿಸಲಾಗಿದ್ದು. ಅಲ್ಲಿ ಅಗ್ನಿಶಾಮಕ ಠಾಣೆಯನ್ನು ನಿರ್ಮಾಣ ಮಾಡಲು ಆದಷ್ಟು ಬೇಗ ಚಾಲನೆ ನೀಡಲಾಗುವುದು ಎಂದರು.
ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ 120 ಕೋಟಿ ರೂ. ವೆಚ್ಚದಲ್ಲಿ ನೀರಾವರಿ ಕಾಮಗಾರಿಗಳಿಗೆ ಅನುದಾನ ನೀಡಲಾಗಿದೆ ಆದಷ್ಟು ಬೇಗ ಈ ಕಾಮಗಾರಿ ಕೂಡ ಆರಂಭಗೊಳ್ಳಲಿದೆ. ಇದರೊಂದಿಗೆ ಸಿಲ್ಕ್ ಪಾರ್ಕ್ ಹಾಗೂ ರೇಷ್ಮೆ ಕೈಗಾರಿಕೆ ಪುನಶ್ಚೇತನಕ್ಕೂ ಕೂಡ 15 ಕೋಟಿ ರೂ. ವೆಚ್ಚದ ಯೋಜನೆಗೆ ಚಾಲನೆ ಕೂಡ ನೀಡಲಾಗುವುದು. ಕೊಳ್ಳೇಗಾಲದಲ್ಲಿ ವಿಭಾಗ ಉಪವಿಭಾಗ ಮಟ್ಟದ 250 ಹಾಸಿಗೆಯ ಆಸ್ಪತ್ರೆ ಕಟ್ಟಡದ ಕಾಮಗಾರಿಗೂ ಕೂಡ ಚಾಲನೆ ನೀಡಲಾಗುವುದು ಎಂದರು.
ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಚಿದಂಬರಂ ಮಾತನಾಡಿ, ಆಸ್ಪತ್ರೆಯ ಕಟ್ಟಡದ ಕಾಮಗಾರಿ ಶಾಸಕರ ಕಾಳಜಿಯಿಂದ ವೇಗವಾಗಿ ನಡೆಯುತ್ತಿದೆ. ಸುಸಜ್ಜಿತ ಆಸ್ಪತ್ರೆ ಇದಾಗಲಿದೆ. ಈ ಆಸ್ಪತ್ರೆ ನಿರ್ಮಾಣವಾದ ನಂತರ ಈ ಭಾಗದ ರೋಗಿಗಳಿಗೆ ತುಂಬ ಅನುಕೂಲವಾಗಲಿದೆ. ಹಳೆಯ ಕಟ್ಟಡದ ಕೊಠಡಿಗಳನ್ನು ಕ್ಷಯ ರೋಗ, ನಾಯಿ ಕಡಿತ, ಸಾಂಕ್ರಾಮಿಕ ರೋಗಗಳ ವಾರ್ಡ್‌ಗಳಾಗಿ ಪರಿವರ್ತಿಸಲಾಗುವುದು. ಇದರೊಂದಿಗೆ ನೂತನ ಆಸ್ಪತ್ರೆಯಲ್ಲಿ ಎಕ್ಸ್ ರೇ, ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಹಾಗೂ ಸುಸಜ್ಜಿತ ಲ್ಯಾಬ್ ಕೂಡ ನಿರ್ಮಾಣಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
ಎಇಇ ಗುರುಪ್ರಸಾದ್, ತಾಲೂಕು ವೈದ್ಯಾಧಿಕಾರಿ ಡಾ.ಶ್ರೀಧರ್, ತಾಲೂಕು ಆರೋಗ್ಯ ಅಧಿಕಾರಿ ಡಾ.ತನುಜಾ, ತಹಸೀಲ್ದಾರ್ ಎಸ್.ಎಲ್. ನಯನಾ, ತಾಲೂಕು ಪಂಚಾಯಿತಿ ಇಒ ವೇಣು, ಪಪಂ ಮುಖ್ಯಾಧಿಕಾರಿ ಮಹೇಶ್ ಕುಮಾರ್, ಆರೋಗ್ಯಾಧಿಕಾರಿ ರಾಘವೇಂದ್ರ, ಕೆಆರ್‌ಐಡಿಎಲ್‌ನ ಎಇಇ ಚಿಕ್ಕಲಿಂಗಯ್ಯ, ಟಿಎಪಿಸಿಎಂಎಸ್ ಅಧ್ಯಕ್ಷ ಜೆ.ಯೋಗೇಶ್, ಮುಖಂಡರಾದ ಕಂದಹಳ್ಳಿ ನಂಜುಂಡಸ್ವಾಮಿ, ಬಿಳಿಗಿರಿ ರಂಗನಾಥಸ್ವಾಮಿ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಶ್ರೀನಿವಾಸ್, ಲಿಂಗರಾಜ ಮೂರ್ತಿ ಸೇರಿದಂತೆ ಅನೇಕರು ಇದ್ದರು.