ಚಾಮರಾಜನಗರದ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ದೊಡ್ಡರಸನಕೊಳ ಅಭಿವೃದ್ಧಿ ಕಾಣದೆ ಹಾಳಾಗಿರುವುದು.  
ಚಾಮರಾಜನಗರ

ದೊಡ್ಡರಸನಕೊಳ ಅಭಿವೃದ್ಧಿಯಲ್ಲಿ ನಿರ್ಲಕ್ಷ್ಯ

ಪ್ರಮುಖ ಮುಖ್ಯಾಂಶಗಳು

  • ಅಂತರ್ಜಲ ಕುಸಿತಕ್ಕೂ ಕಾರಣ
  • ಕುಸಿದಿರುವ ಸುತ್ತುಗೋಡೆ
  • ಜನಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷ್ಯ
ಚಾಮರಾಜನಗರ: ಜಿಲ್ಲಾ ಹೃದಯ ಭಾಗದಲ್ಲಿರುವ ಇತಿಹಾಸ ಪ್ರಸಿದ್ಧ ದೊಡ್ಡರಸನ ಕೊಳ ಇಂದಿಗೂ ಅಭಿವೃದ್ಧಿ ಕಾಣದೇ, ನಿರ್ಲಕ್ಷ್ಯಕ್ಕೆ ಒಳಗಾಗಿದೆ.
ನಗರದ ಹೊಸ ಖಾಸಗಿ ಬಸ್ ನಿಲ್ದಾಣದ ಸಮೀಪದಲ್ಲಿ ಇರುವ ದೊಡ್ಡರಸನ ಕೊಳವನ್ನು ಕ್ರಿ.ಶ 1826 ರಲ್ಲಿ ಶ್ರೀ ಚಾಮರಾಜೇಶ್ವರ ಸ್ವಾಮಿ ದೇವಸ್ಥಾನವನ್ನು ನಿರ್ಮಾಣ ಮಾಡಿದ ಸಂದರ್ಭದಲ್ಲೇ, ಈ ದೊಡ್ಡರಸನ ಕೊಳವನ್ನು ನಿರ್ಮಾಣ ಮಾಡಲಾಗಿದೆ. ಈ ಕಾರಣಕ್ಕೆ ದೊಡ್ಡರಸನ ಕೊಳ ತನ್ನದೇಯಾದ ಐತಿಹಾಸಿಕ ಮಹತ್ವವನ್ನು ಒಳಗೊಂಡಿದೆ. ಈ ದೊಡ್ಡರಸನ ಕೊಳಕ್ಕೆ ಹೊಂದಿಕೊಂಡಂತೆ, ನಗರದ ಪ್ರಸಿದ್ಧ ಕೊಳದ ಗಣಪತಿ ದೇವಸ್ಥಾನ ಮತ್ತು ಅಯ್ಯಪ್ಪಸ್ವಾಮಿ ದೇವಸ್ಥಾನ ಹಾಗೂ ಸುಬ್ರಹ್ಮಣ್ಯ ದೇವಸ್ಥಾನವಿದೆ. ಈ ದೇವಸ್ಥಾನಗಳಿಗೆ ವಿಶೇಷ ದಿನಗಳಲ್ಲಿ ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ಪೂಜೆ ಸಲ್ಲಿಸುತ್ತಾರೆ. ಆದರೇ ದೊಡ್ಡರಸನಕೊಳವನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಯಾರು ಮನಸ್ಸು ಮಾಡದೇ ನಿರ್ಲಕ್ಷ್ಯಕ್ಕೆ ಒಳಗಾಗಿದೆ.
ಕೊಳದ ಸುತ್ತಲೂ ಗಿಡಗೆಂಟಿಗಳು ಬೆಳೆದುಕೊಂಡು ಯಾರು ಸಮೀಪ ಹೋಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೊಳದ ಮಧ್ಯೆದಲ್ಲಿ ನೀರು ನಿಲ್ಲುವ ಸ್ಥಳ, ಮೆಟ್ಟಿಲುಗಳು, ಆಸನಗಳು ಮುರಿದುಹೋಗಿದೆ. ಕೊಳದ ಸುತ್ತು ಗೋಡೆ ಭಾಗಶಃ ಕುಸಿದಿದ್ದು, ಮಳೆಗಾಲದಲ್ಲಿ ಹೆಚ್ಚಿನ ನೀರು ತುಂಬಿದರೇ ಮತ್ತಷ್ಟು ಕುಸಿಯುವ ಸಾಧ್ಯತೆಗಳಿದೆ. ಕೊಳದ ಮಧ್ಯೆದಲ್ಲಿ ಅಳವಡಿಸಿದ್ದ ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು, ಸ್ಮಶಾನದಂತೆ ಗೋಚರವಾಗುತ್ತದೆ. ಈ ನಿಟ್ಟಿನಲ್ಲಿ ಐತಿಹಾಸಿಕ ದೊಡ್ಡರಸನ ಕೊಳವನ್ನು ಅಭಿವೃದ್ಧಿಗೊಳಿಸುವ ದೃಷ್ಟಿಯಲ್ಲಿ ಜನಪ್ರತಿನಿಧಿಗಳು ಹಾಗೂ ನಗರಸಭೆ ಅಧಿಕಾರಿಗಳು ಮನಸ್ಸು ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಕುಸಿದಿರುವ ಸುತ್ತುಗೋಡೆ:
ದೊಡ್ಡರಸನ ಕೊಳದ ರಕ್ಷಣೆಗಾಗಿ ಸುತ್ತಲೂ ಎತ್ತರವಾದ ಸುತ್ತು ಗೋಡೆ ನಿರ್ಮಾಣ ಮಾಡಲಾಗಿದ್ದು, ಅನೇಕ ಕಡೆಗಳಲ್ಲಿ ಕುಸಿದು ಬಿದ್ದಿದೆ. ಹಿಂದಿನ ವರ್ಷ ಸುರಿದ ಭಾರಿ ಮಳೆಯಿಂದಾಗಿ ಕೊಳ ಭರ್ತಿಯಾಗಿತ್ತು. ಈ ಸಂದರ್ಭದಲ್ಲಿ ಖಾಸಗಿ ಬಸ್ ನಿಲ್ದಾಣದ ರಸ್ತೆಗೆ ಹೊಂದಿಕೊಂಡ ಸುತ್ತು ಗೋಡೆ ಕುಸಿದುಬಿದ್ದಿತ್ತು. ಮತ್ತೊಂದು ಭಾಗದಲ್ಲಿ ಹಲವಾರು ವರ್ಷಗಳ ಹಿಂದೆಯೇ ಗೋಡೆ ಕುಸಿದು ಬಿದ್ದಿದೆ. ಆದರೆ ಗೋಡೆ ಕುಸಿದು ಬಿದ್ದಾಗಲೆಲ್ಲ ನಗರಸಭೆ ವತಿಯಿಂದ ತೇಪೆ ಹಾಕುವ ಕೆಲಸವನ್ನು ಮಾಡಲಾಗುತ್ತಿದೆ. ಆದರೇ ಇದನ್ನು ಸಮರ್ಪಕವಾಗಿ ಅಭಿವೃದ್ಧಿಗೊಳಿಸುವ ಮನಸ್ಸನ್ನು ಯಾರು ಮಾಡುತ್ತಿಲ್ಲ. ಕೊಳದ ಒಂದು ಭಾಗದಲ್ಲಿರುವ ಮೆಟ್ಟಿಲುಗಳು ಹಾಳಾಗಿದ್ದು, ಯಾವುದನ್ನು ಸರಿಪಡಿಸುವ ಕಾರ್ಯವನ್ನು ಮಾಡಿಲ್ಲ. ಕೊಳದ ಮಧ್ಯೆ ಭಾಗದಲ್ಲಿ ನೀರು ತುಂಬುವ ಸ್ಥಳವೂ ಕೂಡ ಸಂಪೂರ್ಣ ಹಾಳಾಗಿದೆ. ಸುತ್ತಲೂ ಅಳವಡಿಸಿರುವ ವಿದ್ಯುತ್ ಕಂಬಗಳು ಹಾಗೂ ಸಿಮೆಂಟ್ ಹಾಸುಗಳು ಮುರಿದು ಬಿದ್ದಿದೆ. ಆಗಾಗಿ ಸಂಬಂಧಪಟ್ಟ ಅಧಿಕಾರಿಗಳು ಕ್ರಮವಹಿಸಿ ದೊಡ್ಡರಸನ ಕೊಳವನ್ನು ಅಭಿವೃದ್ಧಿಪಡಿಸಿದ್ದೇ ಆದರೇ, ಆಕರ್ಷಕವಾದ ಉದ್ಯಾನವನ ಆಗಲಿದೆ. ಆದರೇ ಈ ವರೆಗೂ ಯಾವ ಜನಪ್ರತಿನಿಧಿಯಾಗಲಿ, ಅಧಿಕಾರಿಯಾಗಲಿ ಇತ್ತ ಗಮನಹರಿಸಿಲ್ಲ ಎಂದು ಸಾರ್ವಜನಿಕರು ಬೇಸರ ಹೊರ ಹಾಕಿದ್ದಾರೆ.
ಗಣಪತಿ ವಿಸರ್ಜನೆಗೆ ಮಾತ್ರ ನೆನಪು:
ನಗರದ ಶ್ರೀವಿದ್ಯಾ ಗಣಪತಿ ಮಂಡಳಿಯಿಂದ ಪ್ರತಿವರ್ಷವೂ ಪ್ರತಿಷ್ಠಾಪಿಸುವ ದೊಡ್ಡ ಗಣಪತಿಯನ್ನು ಇದೇ ದೊಡ್ಡರಸನ ಕೊಳದಲ್ಲಿ ವಿಸರ್ಜನೆ ಮಾಡುವುದರಿಂದ ಆಗ ಮಾತ್ರ ಈ ಕೊಳ ಎಲ್ಲರಿಗೂ ನೆನಪಾಗುತ್ತದೆ. ಆ ಸಂದರ್ಭದಲ್ಲಿ ಮಾತ್ರ ದೊಡ್ಡರಸನಕೊಳಕ್ಕೆ ನಗರಸಭೆ ವತಿಯಿಂದ ನೀರು ತುಂಬಿಸಲಾಗುತ್ತದೆ. ಇಲ್ಲವಾದರೇ ಬರೀ ಬದಿಯ ನೀರು ಕಾಣಸಿಗುತ್ತದೆ. ಮಳೆ ನೀರನ್ನೇ ಆಶ್ರಯಿಸಿರುವ ದೊಡ್ಡರಸನಕೊಳವನ್ನು ಅಭಿವೃದ್ಧಿಗೊಳಿಸಿದ್ದೆ ಆದರೇ, ಹೆಚ್ಚಿನ ನೀರು ಸಂಗ್ರಹವಾಗುವುದಕ್ಕೂ ಅನುಕೂಲವಾಗುತ್ತದೆ. ಆದರೇ ಜನನಿಬಿಡ ಪ್ರದೇಶದಲ್ಲಿ ಕೊಳವಿದ್ದರೂ, ಇದರ ಅಭಿವೃದ್ಧಿ ಯಾರು ಕೂಡ ಮುತುವರ್ಜಿ ವಹಿಸಿಲ್ಲ. ಬಹುಮುಖ್ಯವಾಗಿ ಈ ಕೊಳದ ಸಮೀಪದಲ್ಲಿರುವ ಕೊಳದ ಗಣಪತಿಗೂ ಹಲವಾರು ವಿಶೇಷತೆಗಳಿದ್ದೂ, ಕೊಳವನ್ನು ಒಂದು ಉತ್ತಮ ಉದ್ಯಾನವನ್ನಾಗಿ ಅಭಿವೃದ್ಧಿಪಡಿಸಿದ್ದೇ ಆದರೆ, ಪ್ರೇಕ್ಷಣೀಯ ಸ್ಥಳವಾಗುತ್ತದೆ. ಸಮೀಪದ ದೇವಾಲಯಗಳಿಗೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ.
ಅಂರ್ತಜಲಕ್ಕೆ ಕುಸಿತಕ್ಕೆ ಕಾರಣ:
ನಗರದ ಹೃದಯ ಭಾಗದಲ್ಲಿರುವ ಐತಿಹಾಸಿಕ ದೊಡ್ಡ ಅರಸನಕೊಳವನ್ನು ಅಭಿವೃದ್ಧಿ ಮಾಡದೇ, ಜಿಲ್ಲಾ ಕೇಂದ್ರದಲ್ಲಿ ಅಂತರ್ಜಲ ಕುಸಿತಕ್ಕೂ ಕಾರಣವಾಗಿದೆ. ಪ್ರಸ್ತುತ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣ ಹಾಗೂ ಖಾಸಗಿ ಬಸ್ ನಿಲ್ದಾಣ ಇರುವ ಜಾಗವು ಈ ಹಿಂದೆ ಕೆರೆಯಾಗಿದ್ದರಿಂದ ನೀರಿನ ಸಂಗ್ರಹವಾಗಿ ಅಂತರ್ಜಲ ವೃದ್ಧಿಗೆ ಸಹಕಾರಿಯಾಗಿತ್ತು. ಇದರಿಂದ ದೊಡ್ಡರಸನಕೊಳದಲ್ಲೂ ಯಾವಾಗಲೂ ನೀರು ಸಂಗ್ರಹವಾಗುತ್ತಿತ್ತು ಎಂದು ಹಿರಿಯರು ಹೇಳುತ್ತಾರೆ. ವರ್ಷಪೂರ್ತಿ ಕೊಳದಲ್ಲಿ ನೀರು ಸಂಗ್ರಹವಾಗುತ್ತಿದ್ದರಿಂದ ನಗರದ ಸುತ್ತಲೂ ಅಂರ್ತಜಲ ಹೆಚ್ಚಳವಾಗಿ ಕುಡಿಯುವ ನೀರಿನ ಸಮಸ್ಯೆಗಳು ತಲೆದೋರುತ್ತಿರಲಿಲ್ಲ. ಇತ್ತೀಚೆಗೆ ಕೊಳದಲ್ಲಿ ನೀರು ಸಂಗ್ರಹವಾಗದೇ ಸುತ್ತಮುತ್ತಲಿನ ಪ್ರದೇಶದಲ್ಲಿ ಅಂತರ್ಜಲ ಕುಸಿದು, ನೀರಿನ ಸಮಸ್ಯೆ ಎದುರಾಗುತ್ತಿದೆ. ಈ ಭಾಗದ ಸಾರ್ವಜನಿಕರು ಈ ಸಂಬಂಧ ಸಾಕಷ್ಟು ಬಾರಿ ಮನವಿ ಮಾಡಿದರೂ, ಅಧಿಕಾರಿಗಳು ಇತ್ತ ಗಮನಹರಿಸದೇ ಸಮಸ್ಯೆ ಎದುರಾಗುತ್ತಿದೆ.
ನಗರದ ದೊಡ್ಡರಸನಕೊಳವನ್ನು ಅಭಿವೃದ್ಧಿಪಡಿಸಿ ವರ್ಷಪೂರ್ತಿ ನೀರು ತುಂಬುವಂತೆ ನೋಡಿಕೊಂಡರೆ, ಜಿಲ್ಲಾ ಕೇಂದ್ರದ ಅರ್ಧ ನೀರಿನ ಸಮಸ್ಯೆ ಬಗೆಹರಿಯುತ್ತದೆ. ದೊಡ್ಡರಸನಕೊಳದ ಅಭಿವೃದ್ಧಿ ಮಾಡದೇ ಅಂತರ್ಜಲ ಕುಸಿತ ಕಾಣುತ್ತಿದೆ. ಇದನ್ನು ಸಮರ್ಪಕವಾಗಿ ಅಭಿವೃದ್ಧಿಗೊಳಿಸದರೇ ಪ್ರೇಕ್ಷಣೀಯ ಸ್ಥಳವಾಗಿ ರೂಪುಗೊಳ್ಳುತ್ತದೆ.
-ಸುರೇಶ್ ಎನ್.ಋಗ್ವೇದಿ, ಅಧ್ಯಕ್ಷ, ಜೈಹಿಂದ್ ಪ್ರತಿಷ್ಠಾನ, ಚಾಮರಾಜನಗರ
ನಗರದ ದೊಡ್ಡರಸನಕೊಳ ಅಭಿವೃದ್ಧಿ ಸಂಬಂಧ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಅನುದಾನ ನಿಗದಿ ಸಂಬಂಧ ಸಿಬ್ಬಂದಿಗಳಿಂದ ಮಾಹಿತಿಯನ್ನು ಪಡೆದುಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಅಗತ್ಯ ಅನುದಾನ ಮೀಸಲಿರಿಸಿ ದೊಡ್ಡರಸನಕೊಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು.
-ಪರಶುರಾಮ್ ಛಲವಾದಿ, ಪೌರಾಯುಕ್ತ, ನಗರಸಭೆ, ಚಾಮರಾಜನಗರ