ಹನೂರು ತಾಲೂಕಿನ ನಾಗಣ್ಣನಗರ ಗ್ರಾಮಸ್ಥರು ಶಾಸಕ ಎಂ.ಆರ್.ಮಂಜುನಾಥ್ ಭೇಟಿಯಾಗಿ ಸಮಸ್ಯೆ ಹೇಳಿಕೊಂಡರು. ಮುರುಗೇಶ್, ಸುರೇಂದ್ರ, ಸುಗುಣ, ಲಕ್ಷ್ಮೀ ಭಾಗ್ಯಮ್ಮ ಇತರರು ಇದ್ದರು.
- ಶಾಸಕ ಎಂ.ಆರ್.ಮಂಜುನಾಥ್ ಭರವಸೆ
- ಮೂಲಸೌಕರ್ಯ ಒದಗಿಸುವಂತೆ ಗ್ರಾಮಸ್ಥರಿಂದ ಮನವಿ
ಹನೂರು: ತಾಲೂಕಿನ ನಾಗಣ್ಣನಗರ ಗ್ರಾಮವನ್ನು ಕಂದಾಯ ಗ್ರಾಮವಾಗಿಸಲು ಈಗಾಗಲೇ ಅಗತ್ಯ ಕ್ರಮವಹಿಸಲಾಗಿದೆ ಎಂದು ಶಾಸಕ ಎಂ.ಆರ್.ಮಂಜುನಾಥ್ ಹೇಳಿದರು.
ಪಟ್ಟಣದ ಲೋಕೋಪಯೋಗಿ ಇಲಾಖೆ ಅತಿಥಿಗೃಹದಲ್ಲಿ ಭಾನುವಾರ ಭೇಟಿಯಾದ ಗ್ರಾಮಸ್ಥರಿಂದ ಸಮಸ್ಯೆ ಆಲಿಸಿ ಮಾತನಾಡಿದ ಅವರು, ನಾಗಣ್ಣನಗರ ಗ್ರಾಮ ಕಂದಾಯ ವ್ಯಾಪ್ತಿಗೆ ಸೇರದೇ ಇರುವುದರಿಂದ ಅಗತ್ಯ ಮೂಲಸೌಕರ್ಯವನ್ನು ಪಡೆಯಲು ಸಾಧ್ಯವಾಗದಿರುವುದು ಗಮನಕ್ಕೆ ಬಂದಿದೆ. ಈ ಸಂಬಂಧ ಈಗಾಗಲೇ ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಲಾಗಿದ್ದು, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದ್ದರಿಂದ ಈ ಕಾರ್ಯ ಮುಂದಿನ ದಿನಗಳಲ್ಲಿ ಕಾರ್ಯರೂಪಕ್ಕೆ ಬರಲಿದೆ. ಅಲ್ಲಿಯವರೆಗೂ ಅಗತ್ಯ ಮೂಲಸೌಕರ್ಯವನ್ನು ಒದಗಿಸಲು ಕ್ರಮವಹಿಸಲಾಗುವುದು ಎಂದು ತಿಳಿಸಿದರು. ಇದೇ ವೇಳೆ ಪಿಡಿಒ ಪುಷ್ಪಲತಾ ಅವರಿಗೆ ಗ್ರಾಮದಲ್ಲಿನ ಸಮಸ್ಯೆಗಳ ಸಂಬಂಧ ಅಗತ್ಯ ಕ್ರಮವಹಿಸುವಂತೆ ಸೂಚಿಸಲಾಯಿತು.
ಇದಕ್ಕೂ ಮೊದಲು ಗ್ರಾಮಸ್ಥರು ಮಾತನಾಡಿ, ಕಂದಾಯ ಗ್ರಾಮಕ್ಕೆ ಒಳಪಡದೇ ಇರುವುದರಿಂದ ಅಗತ್ಯ ಮೂಲಸೌಕರ್ಯದ ಜತೆಗೆ ಸರ್ಕಾರದ ಸವಲತ್ತುಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದರಿಂದ ತುಂಬ ತೊಂದರೆಯನ್ನು ಅನುಭವಿಸುತ್ತಿದ್ದೇವೆ. ಇನ್ನು ಈ ಭಾಗದಿಂದ ಶಾಲಾ, ಕಾಲೇಜಿಗೆ ಹೆಚ್ಚಿನ ವಿದ್ಯಾರ್ಥಿಗಳು ತೆರಳುತ್ತಾರೆ. ಆದರೆ ಬಸ್ ಸೌಕರ್ಯವಿಲ್ಲ. ಇದರಿಂದ ವಿದ್ಯಾರ್ಥಿಗಳು ತೊಂದರೆಪಡುವಂತಾಗಿದೆ. ಆದ್ದರಿಂದ ಗ್ರಾಮಕ್ಕೆ ಬಸ್ ಸೌಕರ್ಯ ಒದಗಿಸುವಂತೆ ಮನವಿ ಮಾಡಿದರು. ಗ್ರಾಮಕ್ಕೆ ಬಸ್ ಸೌಕರ್ಯ ಕಲ್ಪಿಸುವಂತೆ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.
ಮುಖಂಡರಾದ ಮುರುಗೇಶ್, ಸುರೇಂದ್ರ, ಮಹದೇವಮ್ಮ, ಲಕ್ಷ್ಮೀ ಭಾಗ್ಯಾ, ಸುಗುಣ, ಮಾದಮ್ಮ, ಪೆರಿಯಮ್ಮ ಇತರರು ಇದ್ದರು.