ಉದ್ದನೂರು ಕೆರೆಗೆ ಶಾಸಕ ಎಂ.ಆರ್ ಮಂಜುನಾಥ್ ಭೇಟಿ ನೀಡಿ ಪರಿಶೀಲಿಸಿದರು. ಕುಮಾರಸ್ವಾಮಿ, ಮಂಜೇಶ್, ಗಿರೀಶ್ ಮತ್ತಿತತರಿದ್ದರು.
- ಶಾಸಕ ಎಂ.ಆರ್ ಮಂಜುನಾಥ್ ಅಭಿಮತ
ಹನೂರು: ಉದ್ದನೂರು ಹಾಗೂ ಬೆಳತ್ತೂರು ಕೆರೆಯ ಗಡಿಯನ್ನು ಗುರ್ತಿಸಿ ನೀರು ತುಂಬಿಸಲು ಅಗತ್ಯ ಕ್ರಮವಹಿಸಲಾಗುವುದು ಎಂದು ಶಾಸಕ ಎಂ.ಆರ್ ಮಂಜುನಾಥ್ ತಿಳಿಸಿದರು.
ಕೆರೆಗೆ ನೀರು ತುಂಬಿಸುವ ಸಂಬಂಧ ಗುರುವಾರ ತಾಲೂಕಿನ ಉದ್ದನೂರು ಹಾಗೂ ಬೆಳತ್ತೂರು ಕೆರೆಗೆ ಗ್ರಾಮಸ್ಥರೊಂದಿಗೆ ಭೇಟಿ ನೀಡಿ ಮಾಹಿತಿ ಪಡೆದು ಪರಿಶೀಲಿಸಿದ ಬಳಿಕ ಮಾತನಾಡಿದರು.
ಈ ಗ್ರಾಮದಲ್ಲಿನ ಪುರಾತನ ಕೆರೆಗಳು ಹಿಂದೆ ನೀರಿನ ಮುಖ್ಯ ಮೂಲವಾದ್ದವು. ಜನರು ಬಳಕೆ ಮಾಡುತ್ತಿದ್ದರು. ಆದ್ದರಿಂದ ಈ ಕೆರೆಯನ್ನು ಅಭಿವೃದ್ಧಿ ಪಡಿಸಿ ನೀರು ತುಂಬಿಸುವುದು ಅಗತ್ಯವಾಗಿದೆ. ಇದರಿಂದ ಅಂತರ್ಜಲ ಮಟ್ಟ ವೃದ್ಧಿಯೊಂದಿಗೆ ಕೃಷಿ ಹಾಗೂ ಜನ, ಜಾನುವಾರು ಕುಡಿಯುವ ನೀರಿಗೂ ಅನುಕೂಲವಾಗಲಿದೆ. ಈ ದೆಸೆಯಲ್ಲಿ ಅಧಿಕಾರಿಗಳೊಂದಿಗೆ ಈಗಾಗಲೇ ಚರ್ಚಿಸಲಾಗಿದೆ.
ಮೊದಲು ಗಡಿ ಗುರ್ತಿಸಲಾಗುವುದು. ಒತ್ತುವರಿಯಾಗಿದ್ದರೆ ತೆರವುಗೊಳಿಸಿ ಅಗತ್ಯ ಕ್ರಮವಹಿಸಲಾಗುವುದು. ಇನ್ನು ಉದ್ದನೂರು ಹುಬ್ಬೆಹುಣಸೆ ದೊಡ್ಡಕೆರೆಗೆ ಕಾವೇರಿ ನದಿ ಮೂಲದಿಂದ ನೀರು ತುಂಬಿಸಲು ಈಗಾಗಲೇ ಅಗತ್ಯ ಕ್ರಮವಹಿಸಲಾಗಿದೆ. ಕಾರ್ಯ ಪ್ರಕ್ರಿಯೆಯಲ್ಲಿದ್ದು, ಮುಂದಿನ ದಿನಗಳಲ್ಲಿ ಕಾರ್ಯರೂಪಕ್ಕೆ ಬರಲಿದೆ. ಈ ಭಾಗದ ಹಲವು ವರ್ಷಗಳ ಬೇಡಿಕೆಯ ಕನಸು ನನಸಾಗಲಿದೆ. ಇದಕ್ಕೆ ತಮ್ಮೆಲ್ಲರ ಸಹಕಾರ ಅಗತ್ಯ ಎಂದು ತಿಳಿಸಿದರು.
ಭೂ ಮಾಪನ ಇಲಾಖೆಯ ಸರ್ವೇಯರ್ ಕುಮಾರಸ್ವಾಮಿ, ಮುಖಂಡರಾದ ಮಂಜೇಶ್, ಗಿರೀಶ್, ಮಹದೇವಪ್ಪ ಇನ್ನಿತರರಿದ್ದರು.