ಯಳಂದೂರು ಸಮೀಪದ ಗೂಳೀಪುರ ಗ್ರಾಮ ಪಂಚಾಯಿತಿಯಲ್ಲಿ ಮಂಗಳವಾರ ಆಯೋಜಿಸಿದ್ದ ನರೇಗಾ ಗ್ರಾಮಸಭೆಯಲ್ಲಿ ಪಿಡಿಒ ವಸಂತಾ ಮಾತನಾಡಿದರು. ಅಧ್ಯಕ್ಷೆ ರೇಖಾ, ಉಪಾಧ್ಯಕ್ಷೆ ಮಹೇಶ್ವರಿ, ಸದಸ್ಯ ಬೂದಂಬಳ್ಳಿ ಗಿರೀಶ್ ಸೇರಿದಂತೆ ಅನೇಕರು ಇದ್ದರು.  
ಚಾಮರಾಜನಗರ

ನರೇಗಾದಡಿ 33.10 ಲಕ್ಷ ರೂ. ಕಾಮಗಾರಿ

ಎಂ.ರವಿ
ಯಳಂದೂರು: ಗೂಳೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 2024-25ನೇ ಸಾಲಿನಲ್ಲಿ 33.10 ಲಕ್ಷ ರೂ. ಕಾಮಗಾರಿಯನ್ನು ಮಾಡಲಾಗಿದೆ ಎಂದು ಗ್ರಾಪಂ ಪಿಡಿಒ ವಸಂತಾ ಮಾಹಿತಿ ನೀಡಿದರು.
ಮಂಗಳವಾರ ಪಂಚಾಯಿತಿ ಆವರಣದಲ್ಲಿ ಆಯೋಜಿಸಿದ್ದ ನರೇಗಾ ಗ್ರಾಮಸಭೆಯಲ್ಲಿ ಮಾತನಾಡಿ, ಈ ಸಾಲಿನಲ್ಲಿ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 107 ಕಾಮಗಾರಿಗಳು ನಡೆದಿವೆ. ಇದರಲ್ಲಿ 27,28 ಲಕ್ಷ ರೂ. ಕೂಲಿ ಮೊತ್ತ ಹಾಗೂ 5.31 ಲಕ್ಷ ರೂ. ಸಾಮಗ್ರಿ ಮೊತ್ತ ಸೇರಿದಂತೆ ಒಟ್ಟು 33.10 ಲಕ್ಷ ರೂ.ಗಳ ಕಾಮಗಾರಿ ನಡೆದಿದೆ. ಇದರಲ್ಲಿ ಸಿಸಿ ರಸ್ತೆ, ಚರಂಡಿ, ಸಾಮೂಹಿಕ, ವೈಯಕ್ತಿಕ ಕಾಮಗಾರಿಗಳು ಸೇರಿವೆ ಎಂದರು.
ನರೇಗಾ ಯೋಜನೆ ಒಂದು ಉತ್ತಮ ಯೋಜನೆಯಾಗಿದೆ. ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿಕೊಳ್ಳಲು ಇದರಿಂದ ಸಾಧ್ಯವಾಗುತ್ತದೆ. ರೈತರಿಗೂ ಇದು ವರದಾನವಾಗಿದೆ. ತಮ್ಮ ಜಮೀನುಗಳಿಗೆ ತೆರಳುವ ರಸ್ತೆ ಅಭಿವೃದ್ಧಿ, ಬದುಗಳ ನಿರ್ಮಾಣ, ಕಾಲುವೆಗಳ ದುರಸ್ತಿ, ನೀರಿನ ಹೊಂಡಗಳ ನಿರ್ಮಾಣ, ಕೊಟ್ಟಿಗೆ ನಿರ್ಮಾಣ ಸೇರಿದಂತೆ ಅನೇಕ ಕೆಲಸಗಳನ್ನು ಮಾಡಿಕೊಳ್ಳಲು ಇದರಿಂದ ಸಾಧ್ಯ. ಈ ನಿಟ್ಟಿನಲ್ಲಿ ಸಾರ್ವಜನಿಕರು ಇದರ ಲಾಭ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಗ್ರಾಪಂ ಅಧ್ಯಕ್ಷೆ ರೇಖಾ, ಉಪಾಧ್ಯಕ್ಷೆ ಮಹೇಶ್ವರಿ, ಸದಸ್ಯರಾದ ಬೂದಂಬಳ್ಳಿ ಗಿರೀಶ್, ನಾಗಣ್ಣ, ಶಂಕರ್, ಜಡೇಸ್ವಾಮಿ, ರವಿಶಂಕರಮೂರ್ತಿ, ಚಿನ್ನಮ್ಮ ಕಾರ್ಯದರ್ಶಿ ನಾಗರಾಜು, ರಾಜೇಂದ್ರ, ಸಾಮಾಜಿಕ ಲೆಕ್ಕ ಪರಿಶೋಧಕ ಪ್ರಸನ್ನ, ಅರಣ್ಯ ಇಲಾಖೆಯ ನಂಜುಂಡಯ್ಯ, ತೋಟಗಾರಿಕೆ ಇಲಾಖೆಯ ಮಂಜುಳಾ, ನೂತನ್, ಮಧು ಸೇರಿದಂತೆ ಅನೇಕರು ಇದ್ದರು.