ಮಲೆಮಹದೇಶ್ವರ ಬೆಟ್ಟದ ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಕನಕದಾಸರ ಜಯಂತಿಯನ್ನು ಆಚರಿಸಲಾಯಿತು. ಚಂದ್ರುಶೇಖರ್, ಮಹದೇವಸ್ವಾಮಿ, ರವೀಂದ್ರ, ಮಹೇಶ್‌ಕುಮಾರ್ ಇತರರು ಇದ್ದರು.
ಹನೂರು: ಕನಕದಾಸರ ಆದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡಾಗ ಸಮಾಜದಲ್ಲಿ ಉತ್ತಮ ಜೀವನವನ್ನು ರೂಪಿಸಿಕೊಳ್ಳಬಹುದು ಎಂದು ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಉಪ ಕಾರ್ಯದರ್ಶಿ ಜಿ.ಎಲ್.ಚಂದ್ರಶೇಖರ್ ತಿಳಿಸಿದರು.
ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಿಂದಿನ ಕಾಲಘಟ್ಟದಲ್ಲಿ ಸಮಾಜದಲ್ಲಿ ಸಮಾನತೆಯನ್ನು ತರುವ ಸಲುವಾಗಿ ಹಾಗೂ ಸಮುದಾಯದ ಅಭಿವೃದ್ಧಿಗಾಗಿ ಕನಕದಾಸರು ಸೇರಿದಂತೆ ಪುರಂದರದಾಸರು, ಅಂಬೇಡ್ಕರ್, ಬುದ್ಧ, ಬಸವಣ್ಣ, ವಾಲ್ಮೀಕಿ, ಅಲ್ಲಮಪ್ರಭು ಇತರ ಸಂತರು, ಮಹನೀಯರು ದುಡಿದಿದ್ದಾರೆ. ಉತ್ತಮ ಸಮಾಜ ನಿರ್ಮಿಸಲು ಶ್ರಮಿಸಿದ್ದಾರೆ. ಅವರು ಎಂದಿಗೂ ಜಾತಿಯಿಂದ ಗುರುತಿಸಿಕೊಂಡಿಲ್ಲ. ಕಾಯಕದ ಮಹತ್ವವನ್ನು ತಿಳಿಸಿಕೊಟ್ಟಿದ್ದಾರೆ. ಜನ ಸಾಮಾನ್ಯರಲ್ಲಿ ಸತ್ಚಾರಿತ್ರ್ಯವನ್ನು ಮೂಡಿಸಲು ಶ್ರಮಿಸಿದ್ದಾರೆ. ಆದ್ದರಿಂದ ಈ ಬಗ್ಗೆ ಪ್ರತಿಯೊಬ್ಬರೂ ಮನದಟ್ಟು ಮಾಡಿಕೊಳ್ಳಬೇಕು ಎಂದರು.
ಲೆಕ್ಕಾಧೀಕ್ಷಕ ನಾಗೇಶ್, ನೌಕರರಾದ ರವೀಂದ್ರ, ಮಹದೇವಸ್ವಾಮಿ, ಮಹೇಶ್‌ಕುಮಾರ್, ನಾಗರಾಜು, ಮಲ್ಲಿಕಾರ್ಜುನ, ರಮೇಶ್, ಮಹೇಶ್ ಹಾಗೂ ಇನ್ನಿತರರು ಇದ್ದರು.