ಎಲ್ಲೇಮಾಳ ಮಲ್ಲಯ್ಯನಪುರ ಮಾರ್ಗದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಜಖಂಗೊಂಡಿರುವ ಲಾರಿ ಹಾಗೂ ಟೆಂಪೋ ಟ್ರಾವೆಲರ್.
ಹನೂರು: ಪಟ್ಟಣದಿಂದ ಮಲೆಮಹದೇಶ್ವರ ಬೆಟ್ಟಕ್ಕೆ ತೆರಳುವ ಎಲ್ಲೇಮಾಳ ಮಲ್ಲಯ್ಯನಪುರ ಗ್ರಾಮದ ಬಳಿ ಶನಿವಾರ ಟೆಂಪೋ ಟ್ರಾವೆಲರ್ ಹಾಗೂ ಲಾರಿ ನಡುವೆ ಡಿಕ್ಕಿ ಸಂಭವಿಸಿ ಚಾಲಕ ಸೇರಿದಂತೆ 12ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಬೆಂಗಳೂರಿನ ಎಲೆಕ್ಟ್ರಾನಿಕ್‌ಸಿಟಿಯ 15 ಜನರ ತಂಡ ಟೆಂಪೋ ಟ್ರಾವೆಲರ್‌ನಲ್ಲಿ ಮ.ಬೆಟ್ಟಕ್ಕೆ ತೆರಳಿ ದರ್ಶನ ಪಡೆದು ಮಧ್ಯಾಹ್ನ ಹಿಂತಿರುತ್ತಿದ್ದರು. ಈ ವೇಳೆ ಎಲ್ಲೇಮಾಳ ಮಲ್ಲಯ್ಯನಪುರ ಮಾರ್ಗದಲ್ಲಿ ಎದುರು ಬಂದ ಸಿಮೆಂಟ್ ತುಂಬಿದ ಲಾರಿ ಡಿಕ್ಕಿ ಯಾಯಿತು.
ಟಿಟಿ ಚಾಲಕ ಏಕನಾಥ್ ಸೇರಿದಂತೆ ವಾಹನದಲ್ಲಿದ್ದ 12 ಹೆಚ್ಚು ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸ್ಥಳೀಯರು ಗಾಯಾಳುಗಳನ್ನು ತುರ್ತು ವಾಹನದ ಮೂಲಕ ಹನೂರಿನ ಆಸ್ಪತ್ರೆಗೆ ಕಳುಹಿಸಿ ಚಿಕಿತ್ಸೆಗೆ ನೆರವಾದರು.
ತೀವ್ರ ಗಾಯಗೊಂಡ ಚಾಲಕನನ್ನು ಕೊಳ್ಳೇಗಾಲ ಆಸ್ಪತ್ರೆಗೆ ಕಳುಹಿಸಲಾಗಿದೆ. ಪೊಲೀಸರು ಸ್ಥಳ ಪರಿಶೀಲನೆ ನಡೆಸಿದರು. ರಾಮಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.