ಗುಂಡ್ಲುಪೇಟೆ ಪಟ್ಟಣದ ಪೊಲೀಸ್ ಠಾಣೆಗೆ ಬಿಜೆಪಿ ಕಾರ್ಯಕರ್ತರೊಂದಿಗೆ ಮುತ್ತಿಗೆಹಾಕಿದ ನಿರಂಜನಕುಮಾರ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಸಿ.ಮಹದೇವಪ್ರಸಾದ್, ಎಲ್.ಸುರೇಶ್, ಮಲ್ಲೇಶ್, ಸುನಿಲ್ ಮೂಡ್ಲು, ಮಂಜುನಾಥ್, ಕಮರಹಳ್ಳಿ ರವಿ, ಮಾಡ್ರಹಳ್ಳಿ ಮಲ್ಲೇಶ್, ನಾಗೇಂದ್ರ ಇದ್ದರು. 
ಚಾಮರಾಜನಗರ

ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಬಿಜೆಪಿ ಪ್ರತಿಭಟನೆ

ಎಂ.ರವಿ
ಗುಂಡ್ಲುಪೇಟೆ: ತಾಲೂಕಿನ ಕೆರೆಗಳಿಗೆ ನದಿ ನೀರು ತುಂಬಿಸುವಂತೆ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ್ದರೂ ಬಿಜೆಪಿ ಕಾರ್ಯಕರ್ತರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿರುವುದನ್ನು ಖಂಡಿಸಿ ಮಾಜಿ ಶಾಸಕ ಸಿ.ಎಸ್.ನಿರಂಜನಕುಮಾರ್ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಶುಕ್ರವಾರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ನಿರಂಜನಕುಮಾರ್ ಮಾತನಾಡಿ, ಕಳೆದ ಎರಡು ವರ್ಷಗಳಿಂದ ತಾಲೂಕಿನ ಕೆರೆಗಳಿಗೆ ನೀರು ತುಂಬಿಸಲು ವಿಫಲರಾದ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ವಿರುದ್ಧ ಬುಧವಾರ ಮೈಸೂರು ಸಂಸದ ಯದುವೀರಕೃಷ್ಣದತ್ತ ಒಡೆಯರ್, ವಿರೋಧಪಕ್ಷದ ನಾಯಕರಾದ ಆರ್.ಅಶೋಕ್ ಹಾಗೂ ಛಲವಾದಿ ನಾರಾಯಣಸ್ವಾಮಿ, ಮಾಜಿ ಶಾಸಕರಾದ ಹರ್ಷವರ್ಧನ್ ಮುಂತಾದ ನಾಯಕರ ಜತೆಗೂಡಿ ಬಿಜೆಪಿ ಕಾರ್ಯಕರ್ತರು ಕಲ್ಲುಕಟ್ಟೆ ಜಲಾಶಯದಿಂದ ಪಟ್ಟಣದವರೆಗೆ ಪಾದಯಾತ್ರೆ ನಡೆಸಿ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗಿತ್ತು.
 ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ್ದರೂ ಶಾಸಕರ ನಿರ್ದೇಶನದಂತೆ ಪೊಲೀಸರು ಸ್ಥಳದಲ್ಲಿಯೇ ಇಲ್ಲದ 7 ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಟ್ರಾಫಿಕ್, ಕಿಸೆಗಳ್ಳತನ, ಮನೆಗಳ್ಳತನ ಪ್ರಕರಣಗಳು ಹೆಚ್ವಾಗಿದ್ದರೂ ಪೊಲೀಸರು ತಮ್ಮ ಕರ್ತವ್ಯ ಮರೆತಿದ್ದಾರೆ. ಕಳೆದತಿಂಗಳು ಪೊಲೀಸ್ ಕ್ವಾರ್ಟರ್ಸ್‌ನ ಮೂರು ಮನೆಗಳಲ್ಲಿ ಕಳ್ಳತನವಾಗಿದ್ದರೂ ಅದನ್ನು ಪತ್ತೆಹಚ್ಚಿಲ್ಲ. ಕಲ್ಲಿನ ಟಿಪ್ಪರ್‌ಗಳು ಹಗಲಿರುಳು ಸಂಚರಿಸುತ್ತಿದ್ದರೂ ನಿಯಂತ್ರಿಸಲು ಕ್ರಮಕೈಗೊಳ್ಳುತ್ತಿಲ್ಲ. 
ನೆರೆಯ ಕೇರಳದಿಂದ ಅವ್ಯಾಹತವಾಗಿ ಲಾಟರಿ ಟಿಕೆಟ್ ಮಾರಾಟ, ದೊಡ್ಡ ಪ್ರಮಾಣದಲ್ಲಿ ಗಾಂಜಾ ಮಾರಾಟ ಮಾಡಲಾಗುತ್ತಿದ್ದರೂ, ಅನ್ನ ಭಾಗ್ಯ ಯೋಜನೆಯ ಅಕ್ಕಿಯನ್ನು ಕಳ್ಳಸಾಗಾಣಿಕೆ ಮಾಡುತ್ತಿರುವ ಬಗ್ಗೆ ಮಾಹಿತಿ ನೀಡಿದರೂ ವಶಕ್ಕೆ ಪಡೆಯುತ್ತಿಲ್ಲ. ಇಸ್ಪೀಟು, ಅಕ್ರಮ ಮದ್ಯಮಾರಾಟ ನಡೆಯುತ್ತಿದ್ದರೂ ಸುಮ್ಮನಿದ್ದಾರೆ. ಇದನ್ನೆಲ್ಲಾ ನೋಡಿದರೆ ಪೊಲೀಸರೇ ಅಕ್ರಮಗಳಲ್ಲಿ ಪಾಲ್ಗೊಂಡಿರುವ ಅನುಮಾನ ಮೂಡಿಸುತ್ತಿದೆ. ಎಂದು ಆರೋಪಿಸಿದರು.
ಹಿರಿಯ ಅಧಿಕಾರಿಗಳು ಈ ಬಗ್ಗೆ ವಿಚಾರಣೆ ನಡೆಸಿ ತಪ್ಪಿತಸ್ಥ ಪೊಲೀಸರ ವಿರುದ್ದ ಕ್ರಮಕೈಗೊಳ್ಳಬೇಕು, ನಿರಪರಾಧಿಗಳ ವಿರುದ್ಧ ದಾಖಲಿಸಿರುವ ಪ್ರಕರಣಗಳನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.
ಮಂಡಲಾಧ್ಯಕ್ಷ ಸಿ.ಮಹದೇವಪ್ರಸಾದ್, ಮಾಜಿ ಅಧ್ಯಕ್ಷರಾದ ಎಲ್.ಸುರೇಶ್, ಮಲ್ಲೇಶ್, ಪ್ರಧಾನ ಕಾರ್ಯದರ್ಶಿ ಸುನಿಲ್ ಮೂಡ್ಲು, ಮಂಜುನಾಥ್, ಕಮರಹಳ್ಳಿ ರವಿ, ಮಾಡ್ರಹಳ್ಳಿ ಮಲ್ಲೇಶ್, ನಾಗೇಂದ್ರ ಹಾಗೂ ಇತರರಿದ್ದರು.’