Nanna Mara Nanna Neralu Abhiyana
ಸಸಿ ನೆಟ್ಟು ಸೆಲ್ಫಿ ಫೋಟೋ ಕಳಿಸಿಕೊಟ್ಟವರಿಗೆ ನಗದು ಬಹುಮಾನ
ಗುಂಡ್ಲುಪೇಟೆ: ಪಟ್ಟಣದ ಪುರಸಭೆಯು ಜೂ.5 ರಂದು ‘ನನ್ನ ಮರ ನನ್ನ ನೆರಳು’ ಅಭಿಯಾನಕ್ಕೆ ಚಾಲನೆ ನೀಡಲಿದ್ದು ಪ್ರತಿಯೊಬ್ಬ ನಾಗರಿಕರು ತಮ್ಮ ಮನೆಯ ಮುಂದೆ ಸಸಿ ನೆಟ್ಟು ಪರಿಸರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುವಂತೆ ಅಧಿಕಾರಿಗಳು ಕೋರಿದ್ದಾರೆ.
ಈ ಬಾರಿ ವಿಶ್ವ ಪರಿಸರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಮತ್ತು ಜನಪ್ರಿಯ ಚಳವಳಿಯಾಗಿ ಆಚರಿಸಲು ನಿರ್ಧರಿಸಿರುವ ಪುರಸಭೆ ತನ್ನ ವ್ಯಾಪ್ತಿಯಲ್ಲಿ ಬೃಹತ್ ಸಸಿ ನೆಡುವ ಆಂದೋಲನವನ್ನು ಹಮ್ಮಿಕೊಂಡಿದ್ದು ಇದಕ್ಕಾಗಿ ನನ್ನ ಮರ ನನ್ನ ನೆರಳು ಎಂಬ ವಿನೂತನ ಅಭಿಯಾನವನ್ನು ಆರಂಭಿಸಿದೆ.
ಜೂ.5ರ ಒಂದೇ ದಿನದಲ್ಲಿ ಪಟ್ಟಣಾದ್ಯಂತ ಸಾರ್ವಜನಿಕರ ಸಹಭಾಗಿತ್ವದಲ್ಲಿ 5000ಕ್ಕೂ ಹೆಚ್ಚು ಸಸಿಗಳನ್ನು ನೆಡುವ ಗುರಿ ಹೊಂದಿದೆ.
ಈ ಅಭಿಯಾನದಲ್ಲಿ ಭಾಗವಹಿಸುವ ಸಾರ್ವಜನಿಕರು ತಮ್ಮ ಮನೆಯ ಮುಂದೆ ಕನಿಷ್ಠ ಒಂದು ಸಸಿ ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ತಮ್ಮ ಅಳಿಲು ಸೇವೆಯನ್ನು (ಸಣ್ಣ ಕೊಡುಗೆ) ಸಲ್ಲಿಸಬೇಕಾಗಿ ಕೋರಲಾಗಿದೆ. ನಾಗರಿಕರನ್ನು ಪ್ರೋತ್ಸಾಹಿಸಲು ಮಾಧ್ಯಮಗಳ ಸಮ್ಮುಖದಲ್ಲಿ ವಿಶೇಷ ಲಕ್ಕಿ ಡ್ರಾ ಪ್ರಕ್ರಿಯೆಯನ್ನು ಆಯೋಜಿಸಲಾಗಿದೆ. ಮನೆಯ ಮುಂಭಾಗದಲ್ಲಿ ಒಂದು ಸಸಿಯನ್ನು ನೆಟ್ಟು ಅದರ ಜತೆ ನಿಂತು ಒಂದು ಸ್ಪಷ್ಟವಾದ ಸೆಲ್ಫಿ ಫೋಟೋ ತೆಗೆದು ಮೊ: 9480229054 ಗೆ ಜೂ.5ರಿಂದ ಜೂನ್ 6 ರ ಸಂಜೆ 5 ಗಂಟೆಯ ಒಳಗೆ ವಾಟ್ಸ್ ಆ್ಯಪ್ ಮಾಡಬಹುದು.
ಪಾರದರ್ಶಕ ಲಕ್ಕಿ ಡ್ರಾ: ಸಾರ್ವಜನಿಕರಿಂದ ಸ್ವೀಕೃತವಾಗುವ ಎಲ್ಲ ಫೋಟೋಗಳನ್ನು ಕ್ರೋಢೀಕರಿಸಿ, ಸ್ಥಳೀಯ ಪತ್ರಿಕಾ ಮಾಧ್ಯಮದ ಮಿತ್ರರ ಸಮ್ಮುಖದಲ್ಲಿ ಲಾಟರಿ ಮೂಲಕ ಅದೃಷ್ಟಶಾಲಿಗಳನ್ನು ಆಯ್ಕೆ ಮಾಡಲಾಗುತ್ತದೆ.
ನಗದು ಬಹುಮಾನ: ಆಯ್ಕೆಯಾದ ಐವರು ಅದೃಷ್ಟಶಾಲಿಗಳಿಗೆ ತಲಾ 1,000 ರೂ. ನಗದು ಬಹುಮಾನ ನೀಡಿ ಗೌರವಿಸಲಾಗುವುದು ಎಂದು ಪುರಸಭೆ ಪ್ರಕಟಣೆಯಲ್ಲಿ ತಿಳಿಸಿದೆ.