ಚಾಮರಾಜನಗರದ ಸೋಮವಾರಪೇಟೆ ಬಡಾವಣೆಯಲ್ಲಿ ಕುಡಿಯಲು ನೀರಿಲ್ಲದೆ ಮಹಿಳೆಯರು ಬಿಂದಿಗೆ ಇಡಿದುಕೊಂಡು ಪರದಾಡುತ್ತಿರುವುದು.  
ಚಾಮರಾಜನಗರ

ಕುಡಿಯುವ ನೀರು ಕೊಡದ ನಗರಸಭೆ

ಪ್ರಮುಖ ಮುಖ್ಯಾಂಶಗಳು

  • ಹಲವು ವಾರ್ಡ್‌ಗಳಲ್ಲಿ ಪರದಾಟ
  • ಜನಪ್ರತಿನಿಧಿಗಳು, ಅಧಿಕಾರಿಗಳ ವಿರುದ್ಧ ಕಿಡಿ
ಚಾಮರಾಜನಗರ : ಚಾಮರಾಜನಗರ ನಗರಸಭೆ ವ್ಯಾಪ್ತಿಯ ಹೆಚ್ಚಿನ ವಾರ್ಡ್‌ಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದ್ದು, ಸಾರ್ವಜನಿಕರು ಆಕ್ರೋಶವ್ಯಕ್ತಪಡಿಸಿದ್ದಾರೆ.
ನಗರಸಭೆ ವ್ಯಾಪ್ತಿಯ ಸೋಮವಾರಪೇಟೆ, ಬುದ್ಧನಗರ, ಡಾ.ಅಂಬೇಡ್ಕರ್ ಬಡಾವಣೆ, ರಾಮಸಮುದ್ರ ಬಡಾವಣೆ, ಇತರ ಬಡಾವಣೆಗಳಲ್ಲಿ ಕುಡಿಯುವ ನೀರು ಪೂರೈಕೆ ಮಾಡಿ ಸುಮಾರು 15 ದಿನಗಳೇ ಕಳೆದಿದ್ದು, ನಿವಾಸಿಗಳು ನಿತ್ಯವೂ ನೀರಿನ ಸಮಸ್ಯೆ ಅನುಭವಿಸುತ್ತಿದ್ದಾರೆ. ಹಲವು ವಾರ್ಡ್‌ಗಳಲ್ಲಿ ಕಾವೇರಿ ನೀರು ಪೂರೈಕೆಯಾಗದೆ ಜನರು ತೊಂದರೆ ಅನುಭವಿಸುವಂತಾಗಿದೆ.
ಹಲವು ವಾರ್ಡ್‌ಗಳಲ್ಲಿ ಇರುವ ಬೋರ್‌ವೆಲ್‌ಗಳು ಕೆಟ್ಟು ನಿಂತಿದ್ದು, ಅದನ್ನು ದುರಸ್ತಿಗೊಳಿಸಿ ನೀರು ಪೂರೈಕೆ ಮಾಡುವಲ್ಲಿ ನಗರಸಭೆ ಅಧಿಕಾರಿಗಳು ಸಂಪೂರ್ಣ ವಿಲರಾಗಿದ್ದಾರೆ. ಕೆಲವು ವಾರ್ಡ್‌ಗಳಲ್ಲಿ ಬೋರ್‌ವೆಲ್ ಕೊರೆಸಿದರೂ ನೀರು ಸಿಗದೆ ನಿವಾಸಿಗಳು ಸಾವಿರಾರು ರೂ. ಕೊಟ್ಟು ಟ್ರ್ಯಾಕ್ಟರ್‌ಗಳಲ್ಲಿ ನೀರು ತೆಗದುಕೊಳ್ಳುವ ಪರಿಸ್ಥಿತಿ ಉಂಟಾಗಿದೆ. ಪರಿಣಾಮವಾಗಿ ಬಡ ಮತ್ತು ಮಧ್ಯಮ ವರ್ಗದ ಜನರು ನೀರು ಪೂರೈಕೆ ಮಾಡಿಕೊಳ್ಳಲಾಗದೆ ಪರದಾಡುವಂತಾಗಿದೆ. ಈಗಾಗಲೇ ನಗರಸಭೆ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಸಾರ್ವಜನಿಕರು ಮನವಿ ಮಾಡಿದ್ದರೂ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ದೊರೆತಿಲ್ಲ. ಒಟ್ಟಾರೆ ಬೇಸಿಗೆಗೂ ಮೊದಲೇ ಜಿಲ್ಲಾ ಕೇಂದ್ರದಲ್ಲಿ ನೀರಿಗೆ ಹಾಹಾಕಾರ ಉಂಟಾಗಿದ್ದು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಸಾರ್ವಜನಿಕರು ಬೇಸರ ಹೊರಹಾಕಿದ್ದಾರೆ. ಕೂಡಲೇ ನೀರಿನ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಚುನಾವಣೆ ಬಹಿಷ್ಕರಿಸುತ್ತೇವೆ:
ನಗರಸಭೆ ವ್ಯಾಪ್ತಿಯ ಸೋಮವಾರಪೇಟೆ ಬಡಾವಣೆಯಲ್ಲಿ ನೀರಿನ ಸಮಸ್ಯೆ ಬಗೆಹರಿಸದಿದ್ದರೆ ಮುಂಬರುವ ಚುನಾವಣೆಗಳನ್ನು ಬಹಿಷ್ಕರಿಸುತ್ತೇವೆ ಎಂದು ನಿವಾಸಿಗಳು ಎಚ್ಚರಿಸಿದ್ದಾರೆ. ಬಡಾವಣೆಯ ಸುಮಾರು 5 ಬೀದಿಗಳಲ್ಲಿ 60-70 ಕುಟುಂಬಗಳು ವಾಸ ಮಾಡುತ್ತಿದ್ದು, ಕಳೆದ 4 ವರ್ಷಗಳಿಂದಲೂ ನೀರಿನ ಸಮಸ್ಯೆ ಎದುರಾಗುತ್ತಲೇ ಇದೆ. ಈ ಬಡಾವಣೆಗೆ ಈವರೆಗೂ ಕಾವೇರಿ ನೀರು ಬಂದಿಲ್ಲ. ಶಾಸಕರು 1-2 ಬೋರ್ ಹಾಕಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೆಲವು ಬೋರ್‌ವೆಲ್‌ಗಳು ಕೆಟ್ಟು ನಿಂತಿದ್ದು, 15 ದಿನಕ್ಕೊಮ್ಮೆ ನೀರು ಪೂರೈಕೆ ಮಾಡುವುದರಿಂದ ಸಮಸ್ಯೆ ಬಿಗಡಾಯಿಸಿದೆ. ಹೆಂಗಸರು ಮತ್ತು ಮಕ್ಕಳು ದೂರದ ಪಂಪ್‌ಸೆಟ್‌ಗಳಿಗೆ ಹೋಗಿ ನೀರು ತರುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ನಿವಾಸಿ ಮಹದೇವಮ್ಮ ಎಂಬುವವರು ವಿಜಯವಾಣಿ ಜತೆ ಮಾತನಾಡಿ, ಕಳೆದ ಒಂದು ತಿಂಗಳಿಂದಲೂ ನೀರಿಗೆ ತುಂಬ ಸಮಸ್ಯೆಯಾಗಿದೆ. ಕೂಡಲೇ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನೀರಿನ ಸಮಸ್ಯೆ ಬಗೆಹರಿಸದಿದ್ದರೆ ಮುಂಬರುವ ಚುನಾವಣೆಗಳನ್ನು ಬಹಿಷ್ಕರಿಸುವ ಮೂಲಕ ಹೋರಾಟ ನಡೆಸಲಿದ್ದೇವೆ ಎಂದು ಕಿಡಿಕಾರಿದರು.
ಹಲವು ವಾರ್ಡ್‌ಗಳಲ್ಲೂ ಸಮಸ್ಯೆ:
ನಗರಸಭೆ ವ್ಯಾಪ್ತಿಯ ಹಲವು ವಾರ್ಡ್‌ಗಳಲ್ಲೂ ಕುಡಿಯುವ ನೀರಿನ ಸಮಸ್ಯೆ ತಾರಕಕ್ಕೆ ಏರುತ್ತಿದೆ. ಡಾ.ಅಂಬೇಡ್ಕರ್ ಬಡಾವಣೆಯಲ್ಲಿ ಕುಡಿಯುವ ನೀರು ಪೂರೈಕೆ ಮಾಡಿ 15 ದಿನಗಳಾಗಿವೆ. ಬೋರ್‌ವೆಲ್‌ಗಳು ಕೆಟ್ಟು ನಿಂತಿದ್ದು, ಅಧಿಕಾರಿಗಳು ಇತ್ತ ಮುಖ ಮಾಡುತ್ತಿಲ್ಲ ಎಂದು ಬಡಾವಣೆ ನಿವಾಸಿ ದುಷ್ಯಂತ್ ಅಳಲು ತೋಡಿಕೊಂಡರು. 26ನೇ ವಾರ್ಡ್‌ನಲ್ಲೂ ಇದೇ ಸಮಸ್ಯೆ ಉಂಟಾಗಿದ್ದು, 10-15 ದಿನಗಳಿಂದ ನೀರು ಪೂರೈಕೆ ಮಾಡದೇ ಸಾಕಷ್ಟು ಸಮಸ್ಯೆ ಉಂಟಾಗಿದೆ. ಬಡಾವಣೆಯ ನಿವಾಸಿಗಳು ನಗರಸಭೆ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ನಿವಾಸಿ ಮಂಜುಳಾ ಆಕ್ರೋಶ ಹೊರಹಾಕಿದರು.
ಕೆಟ್ಟು ನಿಂತ ಬೋರ್‌ವೆಲ್‌ಗಳು
ನಗರಸಭೆ ವ್ಯಾಪ್ತಿಯ ಹಲವು ವಾರ್ಡ್‌ಗಳಲ್ಲಿ ಬೋರ್‌ವೆಲ್‌ಗಳು ಕೆಟ್ಟು ನಿಂತಿದ್ದು, ಕಾವೇರಿ ನೀರು ಪೂರೈಕೆಯಾಗದೆ ಸಮಸ್ಯೆ ಬಿಗಡಾಯಿಸುತ್ತಿದೆ. ಹಲವು ಬೋರ್‌ವೆಲ್‌ಗಳನ್ನು ರಿಪೇರಿ ಮಾಡಿದರೆ ನೀರು ಬರುವ ಸಾಧ್ಯತೆಗಳಿದ್ದು, ಅದನ್ನು ಮಾಡದಿರುವುದು ನೀರಿನ ಸಮಸ್ಯೆಗೆ ಕಾರಣವಾಗುತ್ತಿದೆ. ಕೆಲವು ಕಡೆಗಳಲ್ಲಿ ಹೊಸದಾಗಿ ಬೋರ್‌ವೆಲ್ ಕೊರೆಸಿದ್ದರೂ, ನೀರು ಸಿಗದೆ ಸಮಸ್ಯೆ ಪುನರಾವರ್ತನೆಯಾಗುತ್ತಲೇ ಇದೆ. ಪರಿಣಾಮವಾಗಿ ಸಾವಿರಾರು ರೂ. ಖರ್ಚು ಮಾಡಿ ಟ್ರ್ಯಾಕ್ಟರ್ ಮೂಲಕ ನೀರು ಪೂರೈಕೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸೋಮವಾರಪೇಟೆ ಬಡಾವಣೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸಿದ್ದು, ಬಡಾವಣೆಯ ನಿವಾಸಿಗಳು ನಿರಂತರವಾಗಿ ತೊಂದರೆ ಅನುಭವಿಸುವಂತಾಗಿದೆ. ಮೋಟರ್ ಹಾಕಿದರೂ ನೀರು ಸಿಗುತ್ತಿಲ್ಲ. ಕಾವೇರಿ ನೀರು ಪೂರೈಕೆ ಮಾಡಿದರೆ ತಕ್ಕಮಟ್ಟಿಗೆ ಸಮಸ್ಯೆ ಬಗೆಹರಿಯಬಹುದಾಗಿದೆ.
ಮಹೇಶ್, ನಿವಾಸಿ, ಸೋಮವಾರಪೇಟೆ, ಚಾಮರಾಜನಗರ
ನಗರಸಭೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವುದು ನನ್ನ ಗಮನಕ್ಕೆ ಬಂದಿದ್ದು, ಈ ಕುರಿತು ಶಾಸಕರೊಂದಿಗೆ ಚರ್ಚೆ ಮಾಡುತ್ತೇನೆ. ಸಮಸ್ಯೆ ಬಗೆಹರಿಸಲು ಕೂಡಲೇ ಕ್ರಮವಹಿಸಲಾಗುವುದು.
ಶ್ರೀರೂಪಾ, ಜಿಲ್ಲಾಧಿಕಾರಿ, ಚಾಮರಾಜನಗರ
ಜಿಲ್ಲಾ ಕೇಂದ್ರದ ಸಮೀಪದಲ್ಲಿರುವ ಕೆರೆಗಳಲ್ಲಿ ನೀರು ಬರಿದಾಗಿದ್ದ ಕಾರಣದಿಂದ ಬೋರ್‌ವೆಲ್‌ಗಳನ್ನು ಕೊರೆಸಿದರೂ ನೀರು ಸಿಗುತ್ತಿಲ್ಲ. ಆದರೂ 3-4 ಬೋರ್‌ವೆಲ್ ಕೊರೆಸಲು ಕ್ರಮವಹಿಸಿದ್ದೇನೆ. ಸಮಸ್ಯೆ ಬಿಗಾಡಿಸಿದರೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲು ಕ್ರಮವಹಿಸುತ್ತೇನೆ. ಮಾಲಂಗಿ ಕುಡಿಯುವ ನೀರಿನ ಯೋಜನೆಯಡಿ 143 ಕೋಟಿ ರೂ., ಟೆಂಡರ್ ಆಗಿದ್ದು, ಯೋಜನೆ ಮುಕ್ತಾಯವಾದರೆ ಸಮಸ್ಯೆಗಳಿಗೆ ಪರಿಹಾರ ದೊರಕಿದಂತಾಗುತ್ತದೆ.
ಸಿ.ಪುಟ್ಟರಂಗಶೆಟ್ಟಿ, ಶಾಸಕ, ಚಾಮರಾಜನಗರ