ಚಾಮರಾಜನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪಿಎಂ ಮೋದಿ ಸರ್ಕಾರದ 12 ವರ್ಷಗಳ ವಿಕಾಸ, ವಿಶ್ವಾಸ ಮತ್ತು ಜನ ಕಲ್ಯಾಣ ಪ್ರಯಾಣದ ಜಿಲ್ಲಾಮಟ್ಟದ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಕಾರ್ಯದರ್ಶಿ ಡಾ.ಲಕ್ಷ್ಮಿ ಅಶ್ವಿನ್‌ಗೌಡ ಮಾತನಾಡಿದರು. ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ, ಸಿ.ಎಸ್.ನಿರಂಜನ್‌ಕುಮಾರ್, ಸ್ವಾಮಿ ಮರಳಾಪುರ, ನೂರೊಂದುಶೆಟ್ಟಿ, ಮೂಡ್ನಾಕೂಡು ಪ್ರಕಾಶ್, ವೃಷಭೇಂದ್ರಪ್ಪ, ಹೊನ್ನೂರು ಮಹದೇವಸ್ವಾಮಿ, ಎಂ.ರಾಮಚಂದ್ರ ಮತ್ತು ಇತರರು ಇದ್ದರು.
- ಬಿಜೆಪಿ ರಾಜ್ಯ ಕಾರ್ಯದರ್ಶಿ ಡಾ.ಲಕ್ಷ್ಮಿ ಅಶ್ವಿನ್‌ಗೌಡ ಅಭಿಪ್ರಾಯ
- ವಿಕಸಿತ ಭಾರತ ಸಂಕಲ್ಪ ಸಮಾವೇಶದಲ್ಲಿ ಭಾಗಿ
ಚಾಮರಾಜನಗರ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಆಡಳಿತದಿಂದ ದೇಶದ ರಾಜಕೀಯದಲ್ಲಿ ಸ್ಥಿರತೆ ಉಂಟಾಗಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಡಾ.ಲಕ್ಷ್ಮಿ ಅಶ್ವಿನ್‌ಗೌಡ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮೋದಿ ಸರ್ಕಾರದ 12 ವರ್ಷಗಳ ವಿಕಾಸ, ವಿಶ್ವಾಸ ಮತ್ತು ಜನ ಕಲ್ಯಾಣ ಪ್ರಯಾಣದ ಜಿಲ್ಲಾಮಟ್ಟದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪಿಎಂ ಮೋದಿ ಆಡಳಿತದಲ್ಲಿ ದೇಶ ಸುಭಿಕ್ಷವಾಗಿದೆ. ಅಭಿವೃದ್ಧಿಯತ್ತ ನಿರಂತರವಾಗಿ ಸಾಗುತ್ತಿದೆ. ಪ್ರಪಂಚದ ಅತಿದೊಡ್ಡ ಆರ್ಥಿಕ ರಾಷ್ಟ್ರವಾಗಿ ಭಾರತದ ಭವಿಷ್ಯ ಉಜ್ವಲಿಸಿದೆ ಎಂದರು.
ದೇಶದ ಆಂತರಿಕ ಭದ್ರತೆ ಸುಭದ್ರವಾಗಿದೆ. ಜಾಗತಿಕ ವ್ಯವಸ್ಥೆಯಲ್ಲಿ ವ್ಯತ್ಯಾಸ ಉಂಟಾದಾಗ ರಾಷ್ಟ್ರಗಳ ಮೇಲೆ ಪರಿಣಾಮ ಬೀರುತ್ತದೆ. ಯುದ್ಧದ ಸಂದರ್ಭದಲ್ಲಿ ಜನಸಾಮಾನ್ಯರ ಮೇಲೆ ಪ್ರಭಾವ ಬೀರುತ್ತದೆ. ಇಂತಹ ಸಂದರ್ಭಲ್ಲಿ ಪಿಎಂ ಮೋದಿ ಅವರ ಇಚ್ಛಾಶಕ್ತಿ ದೇಶವನ್ನು ಆರ್ಥಿಕ ಹಿಂಜರಿತರಿಂದ ಕಾಪಾಡುತ್ತದೆ ಎಂದು ಹೇಳಿದರು.
ವಿಧಾನ ಪರಿಷತ್ತಿನ ಮಾಜಿ ಸದಸ್ಯ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ ಮಾತನಾಡಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಬದಲಿಗೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಕಸಿತ ಭಾರತ-ರೋಜ್‌ಗಾರ್ ಮತ್ತು ಆಜೀವಿಕಾ ಮಿಷನ್ ಪಾರದರ್ಶಕವಾಗಿದೆ ಎಂದು ಹೇಳಿದರು.
ಜಿರಾಮ್‌ಜಿ ಯೋಜನೆ ಎಂದರೆ ಪಾರದರ್ಶಕ ನಿರ್ವಹಣೆ, ದೂರದರ್ಶಿತ್ವ, ಗ್ರಾಮೀಣ ಜನರಿಗೆ ಶಾಶ್ವತ ಮೂಲಸೌಕರ್ಯ ಕಲ್ಪಿಸುವ ಕಾರ್ಯಕ್ರಮವಾಗಿದೆ. ಹಳ್ಳಿಗಾಡಿನ ಜನರನ್ನು ಸ್ವಾವಲಂಬಿಗಳನ್ನಾಗಿ ರೂಪಿಸುವ ಯೋಜನೆ ಇದಾಗಿದೆ. ಜಿರಾಮ್‌ಜಿ ಬಗ್ಗೆ ವಿರೋಧ ಪಕ್ಷಗಳು ಟೀಕೆ ಮಾಡುತ್ತಿವೆ. ಆದೆರ ಈ ಯೋಜನೆ ಗ್ರಾಮೀಣ ಭಾಗದ ಜನರ ಸಂತೃಪ್ತಿಯ ಜೀವನಕ್ಕೆ ಅನುಕೂಲವಾಗಿದೆ. ಮನರೇಗಾದಲ್ಲಿ ಭ್ರಷ್ಟಾಚಾರ ಹೆಚ್ಚಾಗಿತ್ತು. ಆದರೆ ಜಿರಾಮ್‌ಜಿ ಗ್ರಾಮೀಣ ಜನರ ಜೀವನದಮಟ್ಟವನ್ನು ಸುಧಾರಿಸುತ್ತದೆ. ಪ್ರಧಾನ ಮಂತ್ರಿ ನರೇಂದ್ರಮೋದಿ ರೂಪಿಸಿರುವ ಯೋಜನೆಗಳು ಕಡಿಮೆ ವೆಚ್ಚದ ದೀರ್ಘಕಾಲ ಉಳಿಯುವ ಕಾರ್ಯಕ್ರಮಗಳಾಗಿವೆ. ಅರ್ಥಶಾಸಜ್ಞರೂ ಆಗಿರುವ ಪಿಎಂ ಮೋದಿ ರೂಪಿಸಿರುವ ಯೋಜನೆಗಳು ಪ್ರತಿಯೊಬ್ಬ ಭಾರತೀಯನಿಗೂ ತಲುಪುತ್ತಿವೆ ಎಂದರು.
ವಿಭಾಗ ಪ್ರಭಾರಿ ಸ್ವಾಮಿ ಮರಳಾಪುರ, ಒಬಿಸಿ ಮೋರ್ಚಾ ರಾಷ್ಟ್ರೀಯ ಕಾರ್ಯದರ್ಶಿ ಸದಸ್ಯ ನೂರೊಂದುಶೆಟ್ಟಿ, ಪ್ರಧಾನ ಕಾರ್ಯದರ್ಶಿ ಮೂಡ್ನಾಕೂಡು ಪ್ರಕಾಶ್, ವೃಷಭೇಂದ್ರಪ್ಪ, ಹೊನ್ನೂರು ಮಹದೇವಸ್ವಾಮಿ, ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ಮಾಜಿ ಜಿಲ್ಲಾಧ್ಯಕ್ಷರಾದ ನಾರಾಯಣಪ್ರಸಾದ್, ಆರ್.ಸುಂದರ್, ಮುಖಂಡರಾದ ಡಾ.ಬಾಬು, ಕೋಡಿಉಗನೆ ಮಂಜು, ಹನೂರು ವೆಂಕಟೇಶ್ ಮತ್ತು ಇತರರು ಭಾಗವಹಿಸಿದ್ದರು.
ಮೋದಿ ಆಡಳಿತದಲ್ಲಿ ದಾಖಲೆಗಳ ಸೃಷ್ಟಿ:
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಹಲವು ದಾಖಲೆಗಳು ಸೃಷ್ಟಿಯಾಗಿವೆ. ದೇಶದ ರಕ್ಷಣೆಗಾಗಿ ಅವರು ರೂಪಿಸಿರುವ ಕಾರ್ಯಕ್ರಮಗಳು ಜನಮಾನಸದಲ್ಲಿ ಹಸಿರಾಗಿ ಉಳಿದಿವೆ. ಪಿಎಂ ಮೋದಿ ನೇತೃತ್ವದ ಬಿಜೆಪಿ ಸಧೃಡವಾಗಿದ್ದು, ರಾಜ್ಯದಲ್ಲಿ ಮುಂಬರುವ ಚುನಾವಣೆಗಳಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಜಿಲ್ಲಾಧ್ಯಕ್ಷ ಸಿ.ಎಸ್.ನಿರಂಜನ್‌ಕುಮಾರ್ ಹೇಳಿದರು.