ರಾಮಾಪುರದಲ್ಲಿ ಸುರಿದ ಜೋರು ಮಳೆ. 
ಚಾಮರಾಜನಗರ

ರಾಮಾಪುರದಲ್ಲಿ ತಂಪೆರೆದ ಮಳೆ

ಪ್ರಜ್ವಲ್.ಎನ್
ಹನೂರು: ತಾಲೂಕಿನ ರಾಮಾಪುರದಲ್ಲಿ ಮಂಗಳವಾರ ಸುಮಾರು ಒಂದು ಗಂಟೆ ಕಾಲ ಜೋರು ಮಳೆ ಸುರಿದಿದ್ದು, ಬಿಸಿಲಿನ ಬೇಗೆಯಿಂದ ಬಸವಳಿದಿದ್ದ ಜನತೆಗೆ ತಂಪು ಅನುಭವ ನೀಡಿದೆ.
ತಾಲೂಕಿನಲ್ಲಿ ಅದರಲ್ಲೂ ರಾಮಾಪುರ ಹೋಬಳಿ ವ್ಯಾಪ್ತಿಯಲ್ಲಿ ಕಳೆದ ಒಂದು ತಿಂಗಳಿನಿಂದಲೂ ಬಿಸಿಲಿನ ಬೇಗೆ ವಿಪರೀತವಾಗಿತ್ತು. ಸೂರ್ಯನ ಪ್ರಖರತೆಗೆ ಜನರು ಹೈರಾಣಾಗಿದ್ದರು. ಇತ್ತ ಮಳೆಯಿಲ್ಲದ ಪರಿಣಾಮ ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೂರಿತ್ತು. ಸೋಮವಾರ ಹನೂರು ಪಟ್ಟಣ ಸೇರಿದಂತೆ ಕೌದಳ್ಳಿ, ಬಂಡಳ್ಳಿ, ಶಾಗ್ಯ ಹಾಗೂ ಇತರ ಕಡೆಗಳಲ್ಲಿ ಮಳೆಯಾಗಿತ್ತು. ಆದರೆ ರಾಮಾಪುರದಲ್ಲಿ ಮಳೆಯಾಗಿರಲಿಲ್ಲ. ಮಂಗಳವಾರ ಬೆಳಗ್ಗೆ ಎಂದಿನಂತೆಯೇ ಬಿಸಿಲಿನ ತೀವ್ರತೆ ಇತ್ತು. ಮಧ್ಯಾಹ್ನ 3.30ರಲ್ಲಿ ಮೋಡಕವಿದ ವಾತವರಣ ನಿರ್ಮಾಣವಾಗಿತ್ತು. ಬಳಿಕ ಆರಂಭವಾದ ಜೋರು ಮಳೆ ಸುಮಾರು ಒಂದು ಗಂಟೆಗಳ ಕಾಲ ಸುರಿಯಿತು. ಇದರಿಂದ ಬಿಸಿಲಿನ ಬೇಗೆಯಿಂದ ತತ್ತರಿಸಿದ್ದ ಜನತೆಗೆ ಈ ಮಳೆ ತಂಪು ಅನುಭವ ನೀಡಿತು. ರಸ್ತೆ ಹಾಗೂ ಗ್ರಾಮದ ಹಳ್ಳದಲ್ಲಿ ನೀರು ಹರಿಯುವಂತಾಯಿತು. ಇದರಿಂದ ರೈತರ ಮೊಗದಲ್ಲಿ ಸಂತಸವನ್ನು ಉಂಟು ಮಾಡಿದ್ದು, ಕೊಂಚ ನಿಟ್ಟುಸಿರು ಬಿಟ್ಟಂತಾಗಿದೆ.
ಕೆಲವು ಕಡೆಗಳಲ್ಲಿ ಸಾಧಾರಣ ಮಳೆ: ತಾಲೂಕಿನಲ್ಲಿ ಮಂಗಳವಾರ ಮಧ್ಯಾಹ್ನದ ಬಳಿಕ ಮೋಡ ಕವಿದ ವಾತವರಣ ನಿರ್ಮಾಣವಾಗಿತ್ತು. ಸಂಜೆ 4ರ ವೇಳೆಯಲ್ಲಿ ಹನೂರು ಪಟ್ಟಣ ಸೇರಿದಂತೆ ಮಂಗಲ, ಕಣ್ಣೂರು, ಆನಾಪುರ, ಗುಂಡಾಪುರ, ಬೂದುಬಾಳು ಹಾಗೂ ಇನ್ನಿತರೆ ಕಡೆಗಳಲ್ಲಿ ಅರ್ಧಗಂಟೆಗೂ ಹೆಚ್ಚು ಕಾಲ ಸಾಧಾರಣ ಮಳೆಯಾಯಿತು. ತಾಲೂಕಿನ ಕೆಲವು ಕಡೆಗಳಲ್ಲಿ ಕಳೆದ 2 ದಿನಗಳಿಂದ ಆಗ್ಗಾಗ್ಗೆ ಸಾಧಾರಣಾ ಪ್ರಮಾಣದಲ್ಲಿ ಮಳೆಯಾಗುತ್ತಿರುವುದರಿಂದ ರೈತರಲ್ಲಿ ಸಂತಸವನ್ನು ಉಂಟು ಮಾಡಿದ್ದರೆ, ಬಿಸಿಲಿನ ಬೇಗೆಯಿಂದ ತತ್ತರಿಸಿದ್ದ ಜನಸಾಮಾನ್ಯರು ನಿಟ್ಟುಸಿರು ಬಿಟ್ಟಂತಾಗಿದೆ.