ಕೊಳ್ಳೇಗಾಲ ಮಾನಸ ಶಿಕ್ಷಣ ಸಂಸ್ಥೆಯಲ್ಲಿ ಶುಕ್ರವಾರ ಆರ್.ಸಿದ್ದೇಗೌಡ-ಲಿಂಗಮ್ಮ ಸ್ಮರಣಾರ್ಥ ಆಯೋಜಿಸಿದ್ದ ಮಾನಸೋತ್ಸವವನ್ನು ಬೆಂಗಳೂರು ಕೆಂಗೇರಿಯ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಡಾ.ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಹಾಗೂ ರಂಗಕರ್ಮಿ ಪ್ರಸನ್ನ ಉದ್ಘಾಟಿಸಿದರು. ಎಸ್.ದತ್ತೇಶ್‌ಕುಮಾರ್, ಡಾ.ಎಸ್.ಶಿವರಾಜಪ್ಪ, ಎಂ.ಆರ್.ಸತ್ಯನಾರಾಯಣ, ಕೆ.ಕೆ ನಟರಾಜು ಇದ್ದರು.  
ಚಾಮರಾಜನಗರ

ಮಿತಿಮೀರಿ ಬಳಸಿದರೆ ವಿನಾಶಕಾರಿಯಾಗಲಿದೆ ಮೊಬೈಲ್

ಪ್ರಮುಖ ಮುಖ್ಯಾಂಶಗಳು

  • ರಂಗಕರ್ಮಿ ಪ್ರಸನ್ನ ಕಳವಳ
  • ಕೊಳ್ಳೇಗಾಲದಲ್ಲಿ ಮಾನಸೋತ್ಸವಕ್ಕೆ ಚಾಲನೆ
ಕೊಳ್ಳೇಗಾಲ: ಮೊಬೈಲ್ ಅನ್ನು ಮಿತಿ ಹಾಗೂ ಅರಿವಿನಿಂದ ಬಳಸಿದಾಗ ಒಳಿತು ಆಗಲಿದೆ. ಆದರೆ, ಅದರ ಚಟಕ್ಕೆ ಬಿದ್ದಾಗ ಬೇರೆಲ್ಲ ಚಟಕ್ಕಿಂತ ವಿನಾಶಕಾರಿಯಾಗಲಿದೆ ಎಂದು ರಂಗಕರ್ಮಿ ಪ್ರಸನ್ನ ಕಳವಳ ವ್ಯಕ್ತಪಡಿಸಿದರು.
ಪಟ್ಟಣದ ಮಾನಸ ಶಿಕ್ಷಣ ಸಂಸ್ಥೆಯಲ್ಲಿ ಶುಕ್ರವಾರ ಆರ್.ಸಿದ್ದೇಗೌಡ-ಲಿಂಗಮ್ಮ ಸ್ಮರಣಾರ್ಥ ಆಯೋಜಿಸಿರುವ ಮೂರು ದಿನಗಳ ಮಾನಸೋತ್ಸವ-2025ಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.
21ನೇ ಶತಮಾನ ಒಂದು ಕಡೆಯಿಂದ ಅಸಾಧಾರಣ ಪ್ರಗತಿಯ ಯುಗವೂ ಹೌದು, ಮತ್ತೊಂದು ಕಡೆಯಿಂದ ಅತ್ಯಂತ ಸ್ವಾರ್ಥಪರತೆ ಯುಗವೂ ಹೌದು. ಈ ದ್ವಂದವನ್ನು ಎದುರಿಸುವ ಶಕ್ತಿ ಯುವಪೀಳಿಗೆ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಚಾಮರಾಜನಗರದ ದೀನಬಂದು ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಜಯದೇವ ಮಾತನಾಡಿ, ಶಿಕ್ಷಣ ಸಂಸ್ಥೆಗಳು ಕೇವಲ ಹಣ ಗಳಿಸುವ ವಾಣಿಜ್ಯ ಸಂಸ್ಥೆಗಳಾಗಬಾರದು. ಸಮಾಜದ ಭಾಗವಾಗಿ ಶಿಕ್ಷಣ ಸಂಸ್ಥೆ ಬೆಳೆಯಬೇಕು. ಎಲ್ಲ ತೊಡಕುಗಳನ್ನು ಮೀರಿ ಸತ್ಯವನ್ನೇ ಧೈರ್ಯವಾಗಿಟ್ಟು ಮಾನಸ ಶಿಕ್ಷಣ ಸಂಸ್ಥೆಯನ್ನು ನಿರ್ಮಿಸಿರುವ ಡಾ.ಎಸ್.ದತ್ತೇಶ್‌ಕುಮಾರ್ ಅವರು ಅಭಿನಂದನಾರ್ಹ ಎಂದು ತಿಳಿಸಿದರು.
ಸಹಜಶೀಲತೆ, ವಿನಯಶೀಲತೆ ಬಹಳ ಮುಖ್ಯವಾಗಿದೆ. ಮೊಬೈಲ್ ಫೋನ್ ಚಟ ಮಾನಸಿಕ ರೋಗಿಗಳನ್ನು ಹುಟ್ಟು ಹಾಕುತ್ತಿದೆ. ನಿಮ್ಹಾನ್ಸ್‌ನಲ್ಲಿ ಪ್ರತ್ಯೇಕ ಕೇಂದ್ರ ತೆರೆದಿರುವುದು ಆಧುನಿಕ ಸಮಾಜ ಬೆಚ್ಚಿ ಬೀಳುವ ಸಂಗತಿಯಾಗಿದೆ. ಕೃತಕ ಬುದ್ಧಿಮತ್ತೆಯಿಂದ ದೂರವಾಗಬೇಕು ಎಂದು ಸಲಹೆ ನೀಡಿದರು.
ಮಾನಸ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎಸ್.ದತ್ತೇಶ್‌ಕುಮಾರ್ ಮಾತನಾಡಿ, ಚಾಮರಾಜನಗರ ಜಿಲ್ಲೆಗೆ ಬಂದರೆ ಶಾಪ, ಮಾಟಕ್ಕೆ ಪ್ರಸಿದ್ಧಿ ಕೊಳ್ಳೇಗಾಲ ಎಂಬ ಅಪಖ್ಯಾತಿಯನ್ನು ಹೊರೆಸಲಾಗುತ್ತಿದೆ. ನಮ್ಮ ಜಿಲ್ಲೆ ಶ್ರೀ ಮಲೆ ಮಹದೇಶ್ವರ, ಶ್ರೀ ಮಂಟೇಸ್ವಾಮಿ ಇನ್ನಿತರ ಮಹಾಪುರುಷರು ನೆಲೆಗೊಂಡಿರುವ ಪವಿತ್ರ ಸ್ಥಳವಾಗಿದೆ. ಯುವ ಜನರು ಭ್ರಷ್ಟಾಚಾರಕ್ಕೆ ಮುಳುಗಿ ಹೋಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಸುವುದು ವಿದ್ಯಾರ್ಥಿಗಳ ಕೈಯಲ್ಲಿದೆ. 30 ವರ್ಷಗಳಿಂದ ಮಾನಸ ಶಿಕ್ಷಣ ಸಂಸ್ಥೆ ಶೈಕ್ಷಣಿಕ ಸೇವೆ ನೀಡುತ್ತಿದೆ. ಇಲ್ಲಿ ಓದಿದ ವಿದ್ಯಾರ್ಥಿಗಳು ದೇಶ, ವಿದೇಶದಲ್ಲಿ ವಿವಿಧ ಕ್ಷೇತ್ರದಲ್ಲಿ ಉನ್ನತ ಹುದ್ದೆಗಳನ್ನು ನಿರ್ವಹಿಸುತ್ತಿರುವುದು ನಮ್ಮ ಹೆಮ್ಮೆ ಎಂದು ಹೇಳಿದರು.
ಮಕ್ಕಳ ಭವಿಷ್ಯವನ್ನು ರೂಪಿಸುವುದೇ ತಂದೆ-ತಾಯಿಯ ಆದ್ಯ ಕರ್ತವ್ಯ. ಹಾಗಾಗಿ ಮಕ್ಕಳು ಹೆತ್ತವರಿಗೆ ಶೋಭೆಯನ್ನು ತರಬೇಕೇ ಹೊರತು ಕ್ಷೋಭೆಯನ್ನು ಉಂಟು ಮಾಡಬಾರದು. ನಿಮ್ಮ ಉಜ್ವಲ ಭವಿಷ್ಯದ ಹಿಂದೆ ಪಾಲಕರ ತ್ಯಾಗವಿದೆ. ಸಮಾಜ ಮತ್ತು ರಾಷ್ಟ್ರದ ತ್ಯಾಗವನ್ನು ಮಕ್ಕಳು ಅರ್ಥ ಮಾಡಿಕೊಳ್ಳಬೇಕು ಎಂದು ಬೆಂಗಳೂರು ಕೆಂಗೇರಿಯ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಡಾ. ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಹೇಳಿದರು.
ರಾಷ್ಟ್ರ ನಾಯಕರ ಆದರ್ಶಗಳನ್ನು ಪಾಲಿಸಬೇಕಾದ ಯುವ ಸಮುದಾಯ ದೇಶದ್ರೋಹ ಕೆಲಸದಲ್ಲಿ ತೊಡಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಇಂತಹ ಸಂಸ್ಕೃತಿ ಹೀನರಾಗಿ ಬದುಕುತ್ತಿರುವುದು ಸರಿಯಲ್ಲ. ಮಕ್ಕಳಲ್ಲಿ ಆದರ್ಶ, ಮೌಲ್ಯಗಳನ್ನು ಬಿತ್ತುವ ಆಲದ ಮರವಾಗಿ ಕೊಳ್ಳೇಗಾಲದಲ್ಲಿ ನಿಂತಿರುವ ಮಾನಸ ಶಿಕ್ಷಣ ಸಂಸ್ಥೆ ಅಭಿನಂದನಾರ್ಹವಾಗಿದೆ. ಅಕ್ಷರ ತಲೆಗೆ ಬೀಳುವ ಬದಲು ಹೃದಯಕ್ಕೆ ಬೀಳಬೇಕು. ಮಾನಸೋತ್ಸವ ಮನಸು ಕಟ್ಟುವ ಉತ್ಸವವಾಗಲಿ ಎಂದು ತಿಳಿಸಿದರು.
ವಿವಿಧ ಕ್ರೀಡೆಗಳಲ್ಲಿ ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಮೈಸೂರು ವಿಶ್ವವಿದ್ಯಾಲಯ ಪ್ರಾಚ್ಯ ಸಂಶೋಧನಾಲಯ ವಿಶ್ರಾಂತ ನಿರ್ದೇಶಕ ಡಾ.ಎಸ್.ಶಿವರಾಜಪ್ಪ, ವಿಜಯವಾಣಿ ಪತ್ರಿಕೆ ಮೈಸೂರು ಆವೃತ್ತಿ ಸ್ಥಾನಿಕ ಸಂಪಾದಕ ಎಂ.ಆರ್.ಸತ್ಯನಾರಾಯಣ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಕೆ.ನಟರಾಜು, ಮಾನಸ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಸ್.ನಾಗರಾಜು ಇತರರು ಇದ್ದರು.