ಹನೂರು: ಏತ ನೀರಾವರಿ ಯೋಜನೆಯನ್ನು ರೂಪಿಸುವಂತೆ ಒತ್ತಾಯಿಸಿ ತಾಲೂಕಿನ ವಡಕೆಹಳ್ಳದಲ್ಲಿ ಕಳೆದ 149 ದಿನಗಳಿಂದ ನಡೆಸುತ್ತಿರುವ ಅಹೋರಾತ್ರಿ ಧರಣಿ ಸ್ಥಳಕ್ಕೆ ಸೋಮವಾರ ಶಾಸಕ ಎಂ.ಆರ್.ಮಂಜುನಾಥ್ ಭೇಟಿ ನೀಡಿ ರೈತರೊಂದಿಗೆ ಮಾತುಕತೆ ನಡೆಸಿದರು.
ಏತ ನೀರಾವರಿ ಯೋಜನೆ ರೂಪಿಸಲು ಒತ್ತಾಯಿಸಿ ನಡೆಯುತ್ತಿರುವ ಅಹೋರಾತ್ರಿ ಧರಣಿ
ಹನೂರು: ಏತ ನೀರಾವರಿ ಯೋಜನೆಯನ್ನು ರೂಪಿಸುವಂತೆ ಒತ್ತಾಯಿಸಿ ತಾಲೂಕಿನ ವಡಕೆಹಳ್ಳದಲ್ಲಿ ಕಳೆದ 149 ದಿನಗಳಿಂದ ನಡೆಸುತ್ತಿರುವ ಅಹೋರಾತ್ರಿ ಧರಣಿ ಸ್ಥಳಕ್ಕೆ ಸೋಮವಾರ ಶಾಸಕ ಎಂ.ಆರ್.ಮಂಜುನಾಥ್ ಭೇಟಿ ನೀಡಿ ರೈತರೊಂದಿಗೆ ಮಾತುಕತೆ ನಡೆಸಿದರು.
ರೈತ ಸಂಘ ಹಾಗೂ ದಂಟಳ್ಳಿ ಏತ ನೀರಾವರಿ ಹೋರಾಟ ಸಮಿತಿ ವತಿಯಿಂದ ದಂಟಳ್ಳಿ ಸಮೀಪದ ಕಾವೇರಿ ನದಿಯಿಂದ ಮಾರ್ಟಳ್ಳಿ, ಶೆಟ್ಟಳ್ಳಿ ಹಾಗೂ ಕುರಟ್ಟಿ ಹೊಸೂರು ಗ್ರಾಪಂ ವ್ಯಾಪ್ತಿಯ ಕರೆಗಳಿಗೆ ನೀರು ತುಂಬಿಸಲು ಏತ ನೀರಾವರಿ ರೂಪಿಸುವಂತೆ ಪ್ರತಿಭಟನೆ ನಡೆಸುತ್ತಿದ್ದಾರೆ. ಆರಂಭದಲ್ಲಿ ಸ್ಥಳಕ್ಕೆ ಶಾಸಕ ಎಂ.ಆರ್.ಮಂಜುನಾಥ್, ಹಿಂದಿನ ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್, ಹಾಲಿ ಜಿಲ್ಲಾಧಿಕಾರಿ ಶ್ರೀರೂಪಾ, ತಹಸೀಲ್ದಾರ್ ಕೆ.ಎನ್.ಚೈತ್ರಾ ಹಾಗೂ ಇನ್ನಿತರ ಅಧಿಕಾರಿಗಳು ಭೇಟಿ ನೀಡಿದ್ದರು. ಅಗತ್ಯ ಭರವಸೆ ನೀಡಿದ್ದರು. ಈ ಬಾರಿಯ ಬಜೆಟ್‌ನಲ್ಲಿ ಈ ಭಾಗಕ್ಕೆ ನೀರೊದಗಿಸುವ ಉದ್ದೇಶದಿಂದ ಸಿಎಂ ಸಿದ್ದರಾಮಯ್ಯ ಅವರು ಉಡುತೊರೆ ಹಳ್ಳ ನೀರಾವರಿ ಯೋಜನೆಗೆ 490 ಕೋಟಿ ರೂ. ಅನುದಾನವನ್ನು ಮೀಸಲಿರಿಸಿದ್ದಾರೆ. ಆದರೆ ದಂಟಳ್ಳಿ ಸಮೀಪದ ಕಾವೇರಿ ನದಿಯಿಂದಲೇ ನೀರಾವರಿ ಯೋಜನೆಯನ್ನು ರೂಪಿಸಿಬೇಕು ಎನ್ನುವುದು ಧರಣಿನಿರತ ರೈತರ ವಾದವಾಗಿದ್ದು, ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಸಕರು ಸ್ಥಳಕ್ಕೆ ತೆರಳಿದ್ದರು.
ಶಾಸಕರಿಂದ ಅಗತ್ಯ ಭರವಸೆ: ಶಾಸಕ ಎಂ.ಆರ್ ಮಂಜುನಾಥ್ ಮಾತನಾಡಿ, ಸರ್ಕಾರದಿಂದ ಅನುಮೋದನೆಯಾಗಿರುವ ನೀರಾವರಿ ಯೋಜನೆಯಿಂದ ಮಾರ್ಟಳ್ಳಿ ಭಾಗಕ್ಕೆ ನೀರು ಕೊರತೆಯಾಗದಂತೆ ಅಗತ್ಯ ಕ್ರಮವಹಿಸಲಾಗುವುದು. ಗ್ರಾಮಗಳಲ್ಲಿ ಬೋರ್ ಕೊರೆಯಿಸಿ ಸಮರ್ಪಕ ಕುಡಿವ ನೀರು ಒದಗಿಸಲಾಗುವುದು. ದಂಟಳ್ಳಿ ಮಾರ್ಗ ನೀರಾವರಿ ಯೋಜನೆಗೆ ಸರ್ಕಾರಕ್ಕೆ ಡಿಪಿಆರ್ ಸಲ್ಲಿಸುವುದಾಗಿ ಭರವಸೆ ನೀಡಿದರು. ಪ್ರತಿಭಟನೆ ಕೈ ಬಿಡುವಂತೆ ತಿಳಿಸಿದ್ದಕ್ಕೆ ರೈತರು ಪ್ರತಿಕ್ರಿಯಿಸಿ, ಇದೀಗ ರೈತರ ಸಂಖ್ಯೆ ಕಡಿಮೆ ಇದೆ. 28ರಂದು ಹೆಚ್ಚಿನ ರೈತರು ಭಾಗವಹಿಸಲಿದ್ದಾರೆ. ಅಂದು ಅಧಿಕಾರಿಗಳ ಸಮೇತ ಆಗಮಿಸಿದರೆ ಪ್ರತಿಭಟನೆ ಕೈ ಬಿಡುವುದಾಗಿ ತಿಳಿಸಿದರು.
ಜಿಲ್ಲಾ ರೈತ ಸಂಘದ ಕಾರ್ಯಾಧ್ಯಕ್ಷ ಶೈಲೇಂದ್ರ, ಗ್ರಾಮ ಘಟಕದ ಅಧ್ಯಕ್ಷ ಅರ್ಪುದರಾಜ್, ರೈತ ಮುಖಂಡರಾದ ಬಸವರಾಜು, ರಾಜಣ್ಣ, ಮರಿಯ ಜೋಸೆಫ್ ಡೇವಿಡ್, ಪೀಟರ್, ಪೌಲ್ ಧರ್ಮರಾಜ್ ಹಾಗೂ ಇನ್ನಿತರರಿದ್ದರು.
ವಡಕೆಹಳ್ಳದಲ್ಲಿ ಧರಣಿ ನಡೆಸುತ್ತಿರುವ ಸ್ಥಳಕ್ಕೆ ಶಾಸಕ ಎಂ.ಆರ್.ಮಂಜುನಾಥ್ ತೆರಳಿ ರೈತರೊಂದಿಗೆ ಮಾತುಕತೆ ನಡೆಸಿದರು. ಶೈಲೇಂದ್ರ, ಅರ್ಪುದರಾಜ್, ಬಸವಣ್ಣ ಇತರರಿದ್ದರು.