ಬೂದುಬಾಳು ದೊಡ್ಡಕೆರೆಗೆ ಶಾಸಕ ಎಂ.ಆರ್ ಮಂಜುನಾಥ್ ಬಾಗಿನ ಅರ್ಪಿಸಿದರು. ಆದಿತ್ಯ ಸ್ವಾಮಿಯಾರ್, ಮಂಜೇಶ್, ವಿಜಯಕುಮಾರ್, ಶ್ರೀನಿವಾಸ್ ಇತರರಿದ್ದರು.  
ಚಾಮರಾಜನಗರ

ಬೂದುಬಾಳು ದೊಡ್ಡಕೆರೆಗೆ ಶಾಸಕರಿಂದ ಬಾಗಿನ

ಪ್ರಮುಖ ಮುಖ್ಯಾಂಶಗಳು

  • ಗ್ರಾಮಸ್ಥರಲ್ಲಿ ಮನೆ ಮಾಡಿದ ಸಂತಸ
ಹನೂರು: ತಾಲೂಕಿನ ಬೂದುಬಾಳು ದೊಡ್ಡಕೆರೆಯಲ್ಲಿ ಕಾವೇರಿ ನೀರು ಭರ್ತಿಯಾದ ಹಿನ್ನೆಲೆಯಲ್ಲಿ ಶಾಸಕ ಎಂ.ಆರ್ ಮಂಜುನಾಥ್ ಮಂಗಳವಾರ ಬಾಗಿನ ಅರ್ಪಿಸಿದರು.
ಶತಮಾನದ ಇತಿಹಾಸ ಹೊಂದಿರುವ ಈ ದೊಡ್ಡಕೆರೆಯು ಗ್ರಾಮದ ನೀರಿನ ಪ್ರಮುಖ ಮೂಲ. ಆದರೆ ಕಳೆದ ಹತ್ತಾರು ವರ್ಷಗಳಿಂದಲೂ ಸಮರ್ಪಕ ಮಳೆಯಾಗದ ಪರಿಣಾಮ ಕೆರೆ ಬತ್ತಿ ಹೋಗಿತ್ತು. ಇದರಿಂದ ಅಂತರ್ಜಲ ಮಟ್ಟ ಕ್ಷೀಣಗೊಂಡು ಬೇಸಿಗೆ ವೇಳೆ ಜನ, ಜಾನುವಾರುಗಳಿಗೆ ಕುಡಿಯುವ ನೀರಿಗೆ ಸಮಸ್ಯೆಯಾಗಿತ್ತು. ಜತೆಗೆ ಅಕ್ಕಪಕ್ಕದ ರೈತರ ಕೃಷಿ ಚಟುವಟಿಕೆಗೂ ತೊಡುಕಾಗಿ ಪರಿಣಮಿತ್ತು. ಅಲ್ಲದೆ ಜಾತ್ರಾ ವೇಳೆ ಕೆರೆಯು ಬತ್ತಿ ಹೋಗುತ್ತಿತ್ತು. ಇದರಿಂದ ಭಕ್ತರು ಹಾಗೂ ಗ್ರಾಮಸ್ಥರು ಸಮಸ್ಯೆಯನ್ನು ಎದುರಿಸುತ್ತಿದ್ದರು.
ಈ ನಡುವೆ ಗುಂಡಾಲ್ ಜಲಾಶಯಕ್ಕೆ ಕಾವೇರಿ ನದಿ ಮೂಲದಿಂದ ನೀರು ಪೂರೈಕೆಯಾಗುತ್ತಿರುವ ಬೂದುಬಾಳು ಗ್ರಾಮ ಸಮೀಪದ ನೀರು ಸರಬರಾಜು ಘಟಕದಿಂದ ರಾಮನಗುಡ್ಡೆ ಕೆರೆಗೆ ಕಾವೇರಿ ನೀರು ಹರಿಸಲು ಶಾಸಕರು ಅಗತ್ಯ ಕ್ರಮವಹಿಸಿದ್ದರು. ಈ ವೇಳೆ ಶಾಸಕರು ಗ್ರಾಮಕ್ಕೆ ಆಗಮಿಸಿದ್ದಾಗ ಗ್ರಾಮಸ್ಥರು ಗ್ರಾಮದ ದೊಡ್ಡಕೆರೆಗೂ ಕಾವೇರಿ ನೀರು ಹರಿಸುವಂತೆ ಒಕ್ಕೊರಲಿನಿಂದ ಒತ್ತಾಯಿಸಿದ್ದು, ಅಗತ್ಯ ಭರವಸೆ ನೀಡಿದ್ದರು. ಬಳಿಕ ಶಾಸಕರು ಅಧಿಕಾರಿಗಳ ಜತೆ ಚರ್ಚಿಸಿ ದೊಡ್ಡಕೆರೆಗೂ ನೀರು ಹರಿಸಲು ಅಗತ್ಯ ಕ್ರಮವಹಿಸುವಂತೆ ಸೂಚಿಸಿದ್ದರು. ಜ.16ರಂದು ರಾಮನಗುಡ್ಡೆ ಕೆರೆಗೆ ಹಳ್ಳದ ಮೂಲಕ ಕಾವೇರಿ ನೀರು ಹರಿಸಲು ಚಾಲನೆ ನೀಡಿದ್ದ ವೇಳೆ ಶಾಸಕರು ಬೂದುಬಾಳು ದೊಡ್ಡಕೆರೆಗೂ ಪೈಪ್‌ಲೈನ್ ಮೂಲಕ ನೀರು ಹರಿಸುವ ಕಾಮಗಾರಿಗೆ ಚಾಲನೆ ನೀಡಿದ್ದರು. ಕಾಮಗಾರಿ ಪೂರ್ಣಗೊಂಡ ಬಳಿಕ ಫೆ.2ರಂದು ಕೆರೆಗೆ ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದರು. ಇದೀಗ ದೊಡ್ಡಕೆರೆಯು ಭರ್ತಿಯಾದ ಹಿನ್ನೆಲೆಯಲ್ಲಿ ಶಾಸಕರು ಪೂಜೆ ನೆರವೇರಿಸಿದರು.
ಕೆರೆ ಭರ್ತಿಯಾಗಿರುವುದರಿಂದ ಅಂತರ್ಜಲ ಮಟ್ಟ ಸುಧಾರಣೆಗೊಂಡಿದ್ದು, ತಂಪು ಅನುಭವ ನೀಡುತ್ತಿದೆ. ಇದರಿಂದ ಗ್ರಾಮಸ್ಥರಲ್ಲಿ ಸಂತಸ ಮನೆ ಮಾಡಿದ್ದು, ಗ್ರಾಮಸ್ಥರು ಜಯಘೋಷ ಮೊಳಗಿಸಿ ಸಂತಸಪಟ್ಟರು.
ಗ್ರಾಮಸ್ಥರ ಆಶಯ ಈಡೇರಿಕೆ: ಶಾಸಕ ಎಂ.ಆರ್.ಮಂಜುನಾಥ್ ಮಾತನಾಡಿ, ದೊಡ್ಡಕೆರೆಯು ಗ್ರಾಮದ ಜನರಿಗೆ ನೀರಿನ ಮೂಲ. ಆದರೆ ಸಮರ್ಪಕ ಮಳೆಯಾಗದ ಹಿನ್ನೆಲೆಯಲ್ಲಿ ಹಲವು ವರ್ಷಗಳಿಂದ ಬತ್ತಿ ಹೋಗಿತ್ತು. ರಾಮನಗುಡ್ಡೆ ಕೆರೆಗೆ ಕಾವೇರಿ ನೀರು ಹರಿಸಿದಂತೆ ದೊಡ್ಡಕೆರೆಗೂ ನೀರು ಹರಿಸುವಂತೆ ಗ್ರಾಮಸ್ಥರು ಮನವಿ ಮಾಡಿದರು. ಈ ಬಗ್ಗೆ ಅಗತ್ಯ ಕ್ರಮವಹಿಸಿದ ಪರಿಣಾಮ ಈ ಕೆರೆಗೂ ಕಾವೇರಿ ನೀರು ಹರಿಸಿದಂತಾಗಿದೆ. ಇದರಿಂದ ಅಂತರ್ಜಲ ಮಟ್ಟ ಸುಧಾರಣೆಯೊಂದಿಗೆ ಜನ, ಜಾನುವಾರುಗಳಿಗೆ ಕುಡಿಯುವ ನೀರು ದೊರೆಯಲಿದೆ. ಇದರಿಂದ ಗ್ರಾಮಸ್ಥರ ಆಶಯ ಈಡೇರಿಸಿದಂತಾಗಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಆದ್ಯತೆ ಮೇರೆಗೆ ಗ್ರಾಮದ ಅಭಿವೃದ್ಧಿಗೂ ಹೆಚ್ಚಿನ ಒತ್ತು ನೀಡಲಾಗುವುದು. ಜತೆಗೆ ಕ್ಷೇತ್ರದ ನೀರಾವರಿಗೆ ಸಮಗ್ರ ಯೋಜನೆ ರೂಪಿಸಲಾಗಿದ್ದು, ಕೆರೆಗಳಿಗೆ ನೀರು ತುಂಬಿಸುವ ಮೂಲಕ ಸಮರ್ಪಕ ನೀರಾವರಿ ಸೌಕರ್ಯ ಒದಗಿಸಲು ಈಗಾಗಲೇ ಡಿಪಿಆರ್ ತಯಾರಿಸಿದ್ದು, ಅನುದಾನಕ್ಕಾಗಿ ಅಗತ್ಯ ಕ್ರಮವಹಿಸಲಾಗಿದೆ ಎಂದು ತಿಳಿಸಿದರು.
ಅರ್ಚಕ ಆದಿತ್ಯ ಸ್ವಾಮಿಯಾರ್, ಪಿಎಸಿಸಿ ಸದಸ್ಯ ಮಂಜೇಶ್, ಗ್ರಾಪಂ ಮಾಜಿ ಸದಸ್ಯರಾದ ಶ್ರೀನಿವಾಸ್, ರಾಜಪ್ಪ, ಮುಖಂಡರಾದ ವಿಜಯಕುಮಾರ್, ರಾಜಣ್ಣ, ಗೋಪಾಲ್, ವೆಂಕಟೇಶ್, ಮಹದೇವ, ತಿರುಪತಿ ಇತರರಿದ್ದರು.