ಹನೂರಿನ ಜಿ.ವಿ.ಗೌಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಶಾಸಕ ಎಂ.ಆರ್.ಮಂಜುನಾಥ್ ಭೇಟಿ ನೀಡಿದ್ದ ವೇಳೆ ವಿದ್ಯಾರ್ಥಿಗಳಿಗೆ ಸಲಹೆ ನೀಡುವುದರ ಮೂಲಕ ಕೆಲಕಾಲ ಶಿಕ್ಷಕರಾಗಿ ಕಾರ್ಯನಿರ್ವಹಿಸಿದರು.
ಹನೂರು: ಪಟ್ಟಣದ ಆರ್.ಎಸ್ ದೊಡ್ಡಿಯಲ್ಲಿನ ಜಿ.ವಿ.ಗೌಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಶುಕ್ರವಾರ ಶಾಸಕ ಎಂ.ಆರ್.ಮಂಜುನಾಥ್ ಅವರು ಭೇಟಿ ನೀಡಿ ವಿದ್ಯಾರ್ಥಿಗಳ ಗುರಿ ಸಾಧನೆಗೆ ಹಲವು ಸಲಹೆಯನ್ನು ನೀಡುವುದರ ಮೂಲಕ ಕೆಲಕಾಲ ಶಿಕ್ಷಕರಾಗಿ ಕಾರ್ಯನಿರ್ವಹಿಸಿದರು.
ಕಾಲೇಜಿನ ಆವರಣದಲ್ಲಿ ಆಡಿಟೋರಿಯಂ ಹಾಗೂ ಗ್ರಂಥಾಲಯ ಕಟ್ಟಡ ನಿರ್ಮಾಣ ಸಂಬಂಧ ಶಾಸಕರು ಭೂಮಿಪೂಜೆ ನೆರವೇರಿಸಲು ಆಗಮಿಸಿದ್ದರು. ಈ ವೇಳೆ ಕಾಲೇಜಿನ ವಿದ್ಯಾರ್ಥಿಗಳೆಲ್ಲರೂ ಒಂದೆಡೆ ನೆರೆದಿದ್ದರು. ಇವರ ಬಳಿ ತೆರಳಿದ ಶಾಸಕರು ಉಪನ್ಯಾಸಕರಿಂದ ಮಾಹಿತಿ ಪಡೆದರು. ಶೈಕ್ಷಣಿಕ ಪ್ರಗತಿ, ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ಹಾಗೂ ಹೊಂದಿರುವ ನಿರ್ದಿಷ್ಟ ಗುರಿಯ ಬಗ್ಗೆ ವಿಚಾರಿಸಿದರು. ಈ ವೇಳೆ ಕೆಲ ವಿದ್ಯಾರ್ಥಿಗಳು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಬಳಿಕ ಶಾಸಕರು ಮಾತನಾಡಿ, ಹನೂರು ಭಾಗದಲ್ಲಿ ಶೈಕ್ಷಣಿಕವಾಗಿ ಹಲವು ಸವಾಲುಗಳಿದ್ದು, ಉದ್ಯೋಗವನ್ನು ಪಡೆಯಬೇಕಾದರೆ ಕಠಿಣ ಶ್ರಮ ಅಗತ್ಯ. ಇದರ ಜವಬ್ದಾರಿ ಇದೀಗ ನಿಮ್ಮ ಮೇಲಿದೆ. ಆದ್ದರಿಂದ ಪ್ರತಿಯೊಬ್ಬರೂ ಹೊಂದಿರುವ ಗುರಿಯನ್ನು ಸಾಧಿಸಬೇಕಾದರೆ ನಿರಂತರವಾಗಿ ಅಭ್ಯಾಸಿಸಬೇಕು. ಈ ಮೂಲಕ ಹೆಚ್ಚು ಅಂಕ ಗಳಿಸಬೇಕು. ಸ್ಪರ್ಧಾತ್ಮಕ ಪರೀಕ್ಷೆಗೆ ಈಗೀನಿಂದಲೇ ತಯಾರಿ ನಡೆಸಬೇಕು. ಪಾಲಕರ ಆಶಯವನ್ನು ಈಡೇರಿಸುವುದರ ಮೂಲಕ ಭವಿಷ್ಯದಲ್ಲಿ ಉತ್ತಮ ಜೀವನವನ್ನು ರೂಪಿಸಿಕೊಳ್ಳುವುದರತ್ತ ಗಮನ ಕೊಡಬೇಕು ಎಂದು ತದೇಕ ಚಿತ್ತದಿಂದ ಕೇಳುತ್ತಿದ್ದ ವಿದ್ಯಾರ್ಥಿಗಳಿಗೆ ಸುಮಾರು 20 ನಿಮಿಷಗಳ ಕಾಲ ಸಲಹೆಯನ್ನು ನೀಡುವುದರ ಮೂಲಕ ಶಿಕ್ಷಕರಾಗಿ ಕಾರ್ಯನಿರ್ವಹಿಸಿದರು. ಜತೆಗೆ ತಮ್ಮ ವಿದ್ಯಾರ್ಥಿ ಜೀವನದ ಅನುಭವವನ್ನು ಶಾಸಕರು ಹಂಚಿಕೊಂಡರು. ಈ ವೇಳೆ ನೆರೆದಿದ್ದ ಉಪನ್ಯಾಸಕರು ಹಾಗೂ ಮುಖಂಡರಲ್ಲಿ ಮೆಚ್ಚುಗೆ ವ್ಯಕ್ತವಾಯಿತು.
ಬಸ್ ನಿಲ್ಲಿಸುವಂತೆ ಮನವಿ: ಇದೇ ವೇಳೆ ವಿದ್ಯಾರ್ಥಿಗಳು ಮಾತನಾಡಿ, ಕಾಲೇಜು ಮುಂಭಾಗದ ನಿಲ್ದಾಣದಲ್ಲಿ ಬಸ್‌ಗಳು ನಿಲ್ಲಿಸುತ್ತಿಲ್ಲ. ಕಾಲೇಜಿನಿಂದ ಹನೂರಿನವರೆಗೆ ನಡೆದುಕೊಂಡೇ ತೆರಳಬೇಕಿದ್ದು, ತುಂಬ ಸಮಸ್ಯೆಯಾಗಿದೆ. ಇದರಿಂದ ಇಬ್ಬರು ವಿದ್ಯಾರ್ಥಿನಿಯರು ಕಾಲೇಜಿಗೆ ಬರುತ್ತಿಲ್ಲ. ಆದ್ದರಿಂದ ಬಸ್ ನಿಲುಗಡೆ ಗಮನಹರಿಸುವಂತೆ ಮನವಿ ಮಾಡಿದರು.
ಇನ್ನು ಕೆಲ ವಿದ್ಯಾರ್ಥಿಗಳು ಶುದ್ಧ ಕುಡಿಯುವ ನೀರಿನ ಯಂತ್ರ ಹಾಗೂ ಹೆಚ್ಚುವರಿ ಶೌಚಗೃಹ ನಿರ್ಮಿಸಿ ಕೊಡುವಂತೆ ಮನವಿ ಮಾಡಿದರು. ಕಾಲೇಜು ಮುಂಭಾಗ ಬಸ್ ನಿಲುಗಡೆಗೆ ಕ್ರಮವಹಿಸುವಂತೆ ವಿಭಾಗೀಯ ಸಂಚಾರ ನಿಂಯಂತ್ರಣಾಧಿಕಾರಿಗೆ ಸೂಚಿಸಿದರು. ಶೌಚಗೃಹ, ನೀರಿನ ಯಂತ್ರ ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದರು. ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ತೆರೆಯಲು ಅಗತ್ಯ ಕ್ರಮವಹಿಸುವುದಾಗಿ ಶಾಸಕರು ತಿಳಿಸಿದರು.