ಕೊಳ್ಳೇಗಾಲದ ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಅರಣ್ಯ ಇಲಾಖೆಯ ಕಚೇರಿ ಆವರಣದಲ್ಲಿ ಬುಧವಾರ ನೂತನ ಸಮಗ್ರ ಕಮಾಂಡ್ ಸೆಂಟರ್ ಕೇಂದ್ರಕ್ಕೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಚಾಲನೆ ನೀಡಿದರು. ಎಂ.ಆರ್.ಮಂಜುನಾಥ್, ಸಿ.ಟಿ ಶಿಲ್ಪಾನಾಗ್, ರವಿ ಶಂಕರ್ ಇದ್ದರು.
ಕೊಳ್ಳೆಗಾಲ: ಮಾನವ ವನ್ಯಜೀವಿ ಸಂಘರ್ಷ ತಡೆಗೆ ಆಧುನಿಕ ತಂತ್ರ ಬಳಕೆ ಅಗತ್ಯವಿದೆ. ಈ ನಿಟ್ಟಿನಲ್ಲಿ ಕಮಾಂಡರ್ ಕೇಂದ್ರಕ್ಕೆ ಚಾಲನೆ ನೀಡಲಾಗಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದರು.
ಪಟ್ಟಣದ ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಅರಣ್ಯ ಇಲಾಖೆಯ ಕಚೇರಿ ಆವರಣದಲ್ಲಿ ಬುಧವಾರ ನೂತನ ಸಮಗ್ರ ಕಮಾಂಡರ್ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿ, ಅರಣ್ಯ ಕ್ಷೀಣಿಸುತ್ತಿದ್ದು ವನ್ಯಜೀವಿಗಳ ಸಂಖ್ಯೆಯಲ್ಲಿ ಹೆಚ್ಚಳ ಆಗುತ್ತಿದ್ದು ಇದು ಮಾನವ-ವನ್ಯಜೀವಿ ಸಂಘರ್ಷಕ್ಕೆ ಕಾರಣವಾಗಿದೆ. ಅತ್ಯಾಧುನಿಕ ತಂತ್ರಜ್ಞಾನದ ಬಳಕೆ ಹಾಗೂ ಸಹಬಾಳ್ವೆಯಿಂದ ಮಾತ್ರ ಇದರ ನಿಯಂತ್ರಣ ಸಾಧ್ಯವಾಗಿದೆ. ಅದರಂತೆ ಆನೆ, ಚಿರತೆ, ಹುಲಿ ಯಾವುದೇ ಪ್ರಾಣಿಗಳು ಕಾಡಿನಿಂದ ಹೊರ ಬರುವ ಮಾಹಿತಿಯನ್ನು ಕಾಡಂಚಿನ ಗ್ರಾಮಗಳ ಜನರಿಗೆ ಇಲಾಖೆ ಕಮಾಂಡರ್ ಸೆಂಟರ್ ಸಹಕಾರದಿಂದ ನೀಡುತ್ತಾರೆ. ಬಳಿಕ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ತೆರಳಿ ಕಾಡುಪ್ರಾಣಿಗಳನ್ನು ಹಿಮ್ಮೆಟ್ಟಿಸುವ ಕೆಲಸ ಮಾಡುತ್ತದೆ.
ಇನ್ನು ಗಸ್ತು ಹೆಚ್ಚಳದ ಮೂಲಕ ಹಾಗೂ ಅರಣ್ಯ ದಂಚಿನ ಜನರಲ್ಲಿ ಸಹಬಾಳ್ವೆಯ ಬಗ್ಗೆ ಅರಿವು ಮೂಡಿಸುವ ಮೂಲಕ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದ್ದು, ಕಮಾಂಡ್ ಕೇಂದ್ರ ಒಂದು ಯಶಸ್ವಿ ಪರಿಹಾರ ಆಗಲಿದೆ ಎಂದರು.
ಪ್ರಸ್ತುತ ನಾಗರಹೊಳೆ, ಎಂ.ಎಂ.ಹಿಲ್ಸ್, ಕಾಳಿ, ಮಡಿಕೇರಿ ಸೇರಿ ನಾಲ್ಕು ಕಡೆಗಳಲ್ಲಿ ಕಮಾಂಡ್ ಕೇಂದ್ರ ಸಿದ್ಧವಾಗಿದ್ದು ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಿರುವ ಚಿಕ್ಕಮಗಳೂರು ವಿಭಾಗ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ, ಮೈಸೂರು ವಿಭಾಗ, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ಬಿ.ಆರ್.ಟಿ. ಹುಲಿ ಸಂರಕ್ಷಿತ ಪ್ರದೇಶ ಹಾಗೂ ಹಾಸನ ವಲಯದಲ್ಲಿ ಕಮಾಂಡ್ ಸೆಂಟರ್ ತೆರೆಯಲು ಕ್ರಮ ಕೈಗೊಳ್ಳಲಾಗಿದೆ. ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ರಾಜ್ಯ ಮಟ್ಟದ ಕೇಂದ್ರ ಸಿದ್ಧವಾಗುತ್ತಿದ್ದು, ಅಧಿವೇಶನದ ಚಾಲನೆ ಸಿಗಲಿದೆ. ಮಾನವ-ಪ್ರಾಣಿ ಸಂಘರ್ಷ ತಡೆಗೆ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದರು.
ಅಧಿಕಾರಿಗಳ ಜತೆ ಸಭೆ: ಕಮಾಂಡರ್ ಕೇಂದ್ರಕ್ಕೆ ಚಾಲನೆ ನೀಡಿದ ಬಳಿಕ ಅರಣ್ಯ ಇಲಾಖೆ ಸಭಾಂಗಣದಲ್ಲಿ ಮೈಸೂರು ಮತ್ತು ಚಾಮರಾಜನಗರ ವೃತ್ತ ಅರಣ್ಯ ಮತ್ತು ಪರಿಸರ ಅಧಿಕಾರಿಗಳ ಜತೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಸಭೆ ನಡೆಸಿದರು.
ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ, ಹನೂರು ಶಾಸಕ ಎಂ.ಆರ್.ಮಂಜುನಾಥ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ.ಚಂದ್ರು, ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಜಿಲ್ಲಾ ಪಂಚಾಯಿತಿ ಸಿಇಒ ಮೋನಾ ರೋತ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್, ಡಿಸಿಎಫ್ ಭಾಸ್ಕರ್ ಮತ್ತಿತರರಿದ್ದರು.