ಗುಂಡ್ಲುಪೇಟೆ ತಾಲೂಕಿನ ಅಣ್ಣೂರುಕೇರಿ ಗ್ರಾಮದಲ್ಲಿ ಅಂತಾರಾಷ್ಟ್ರೀಯ ಮುಟ್ಟಿನ ನೈರ್ಮಲ್ಯ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. 
ಚಾಮರಾಜನಗರ

ಮುಟ್ಟಿನ ನೈರ್ಮಲ್ಯ ದಿನಾಚರಣೆ

ಲೋಕೇಶ್ ಮನು. ಡಿ
ಗುಂಡ್ಲುಪೇಟೆ : ಮಹಿಳೆಯರು ಮುಟ್ಟಿನ ಬಗ್ಗೆ ಸಮರ್ಪಕ ಮಾಹಿತಿ ಪಡೆಯುವಂತಾಗಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಅಲೀಂಪಾಷ ತಿಳಿಸಿದರು.
ತಾಲೂಕಿನ ಅಣ್ಣೂರುಕೇರಿ ಶನೈಶ್ಚರ ದೇವಾಲಯದ ಆವರಣದಲ್ಲಿ ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮುಟ್ಟಿನ ನೈರ್ಮಲ್ಯ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಹಿಳೆಯರಿಗೆ ಮುಟ್ಟಿನ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದ ಕಾರಣ ಮುಟ್ಟಾದರೆ ಮೈಲಿಗೆ ಎಂಬ ಮನೋಭಾವ ಹೊಂದಿವರ ಸಂಖ್ಯೆ ಹೆಚ್ಚಿದೆ. ಇದರಿಂದ ಮಟ್ಟಿನ ಸಂದರ್ಭ ಮನೆಯಿಂದ ಹೊರಗೆ ಇರಬೇಕು ಎಂದು ನಂಬಲಾಗುತ್ತಿದೆ. ಮುಟ್ಟು ದೇಹದ ಸಹಜ ಪ್ರಕ್ರಿಯೆ ಅದರ ಬಗ್ಗೆ ಕೀಳರಿಮೆಯ ಅಗತ್ಯ ಇಲ್ಲ. ಮುಟ್ಟಿನ ಬಗ್ಗೆ ಇರುವ ಮೌಢ್ಯ ತಿಳಿದು, ವೈಜ್ಞಾನಿಕ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಅಂಗನವಾಡಿ ಮೇಲ್ವಿಚಾರಕಿ ಸೋನಿಯಾಬೇಗಂ ಮಾತನಾಡಿ, ಹದಿಹರೆಯದ ವಯಸ್ಸಿನಲ್ಲಿ ಆಕರ್ಷಣೆ ಸಹಜ ಪ್ರಕ್ರಿಯೆ. ಆದರೆ ಮನಸ್ಸನ್ನು ಹಿಡಿತದಲ್ಲಿರಬೇಕು. ನಮ್ಮ ತಾಲೂಕಿನಲ್ಲಿ ಹದಿಹರೆಯದ ಹೆಣ್ಣು ಮಕ್ಕಳು ಪ್ರೀತಿ ಪ್ರೇಮಕ್ಕೆ ಬಲಿಯಾಗಬಾರದು ಓದುವ ಕಡೆ ಹೆಚ್ಚು ಗಮನ ನೀಡಬೇಕು ಎಂದು ಸಲಹೆ ನೀಡಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಪ್ತ ಸಮಾಲೋಚಕಿ ಜ್ಯೋತಿ ಮುಟ್ಟಿನ ಬಗ್ಗೆ ಮಾಹಿತಿ ನೀಡಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿಲ್ಪಾ, ಯಮುನಾ ಇದ್ದರು.
ನಂತರ ಗ್ರಾಮದ ಬೀದಿಗಳಲ್ಲಿ ಜಾಥಾ ನಡೆಸುವ ಮೂಲಕ ಮಹಿಳೆಯರು ಮತ್ತು ಕಿಶೋರಿಯರು ಜನರಿಗೆ ಜಾಗೃತಿಯನ್ನು ಮೂಡಿಸಲಾಯಿತು.