ಚಾಮರಾಜನಗರದ ಸಿಮ್ಸ್ ಆಸ್ಪತ್ರೆಯಲ್ಲಿ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಶಂಕರ್ ಸಭೆ ನಡೆಸಿದರು
- ಪೌರಕಾರ್ಮಿಕರ ಸೌಲಭ್ಯಗಳ ಪರಿಶೀಲನೆ
- ಸಿ.ಶಂಕರ್ ಅಂಕನಶೆಟ್ಟಿಪುರ ಅಧ್ಯಕ್ಷತೆಯಲ್ಲಿ ಸಭೆ
ಮೊದಲಿಗೆ ಕುದೇರಿನಲ್ಲಿರುವ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಸಂಸ್ಥೆಗೆ ತೆರಳಿ ಅಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಚ್ಚತಾ ಹಾಗೂ ಪೌರಕಾರ್ಮಿಕರ ಅಹವಾಲುಗಳನ್ನು ಆಲಿಸಿದರು.ನಿಮಗೆ ಸಮವಸ್ತ್ರ, ಸ್ವಚ್ಚತಾ ಪರಿಕರಗಳನ್ನು ಒದಗಿಸಲಾಗಿದೆಯೇ ಎಂದು ಪ್ರಶ್ನಿಸಿದರು. ಇ.ಎಸ್.ಐ.ಹಾಗೂ ಪಿ.ಎಫ್.ಸೌಲಭ್ಯ ನೀಡಲಾಗುತ್ತಿದೆಯೇ ಎಂಬ ಬಗ್ಗೆ ಪ್ರಶ್ನಿಸಿ ಮಾಹಿತಿ ಪಡೆದುಕೊಂಡರು.
ಬಳಿಕ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಶಂಕರ ಅಂಕನಶೆಟ್ಟಿಪುರ ಅವರು ಪೌರ ಕಾರ್ಮಿಕರು, ಸ್ವಚ್ಚತಾ ಕಾರ್ಮಿಕರಿಗೆ ಸಂಸ್ಥೆಯಲ್ಲಿ ಕೊಡಲಾಗುತ್ತಿರುವ ಸೌಲಭ್ಯಗಳ ಬಗ್ಗೆ ಪರಾಮರ್ಶೆ ನಡೆಸಿದರು.
ಕಾರ್ಮಿಕರಿಗೆ ನೀಡಬೇಕಿರುವ ಸೌಲಭ್ಯಗಳಿಗೆ ಯಾವುದೇ ಕೊರತೆಯಾಗಬಾರದು.ವಿಶ್ರಾಂತಿ ಕೊಠಡಿ, ಗ್ಲೌಸ್,ಗಮ್ ಬೂಟ್ ಮತ್ತಿತರ ಸ್ವಚ್ಚತಾ ಪರಿಕರಗಳನ್ನು ಸಮರ್ಪಕವಾಗಿ ವಿತರಿಸಬೇಕು.ಆರೋಗ್ಯ ತಪಾಸಣೆ ಮಾಡಿಸಬೇಕು ಎಂದು ಸೂಚನೆ ನೀಡಿದರು.
ತದ ನಂತರ ನಗರದ ಬಿ.ರಾಚಯ್ಯ ಜೋಡಿ ರಸ್ತೆಯ ಸಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಪೌರ ಕಾರ್ಮಿಕರು ಹಾಗೂ ಸ್ವಚ್ಚತಾ ಕಾರ್ಮಿಕರ ಕುಂದು ಕೊರತೆಗಳನ್ನು ವಿಚಾರಿಸಿದರು.
ಈ ವೇಳೆ ಕೆಲ ಕಾರ್ಮಿಕರು ಪಿ.ಎಫ್.ಇ.ಎಸ್.ಇ ಸೌಲಭ್ಯ ತಮಗೆ ತಲುಪದಿರುವ ಬಗ್ಗೆ ಗಮನ ಸೆಳೆದರು.ಕೂಡಲೇ ಅಧಿಕಾರಿಗಳಿಗೆ ಸೂಚನೆ ನೀಡಿ ತಕ್ಷಣವೇ ಸೌಲಭ್ಯಗಳನ್ನು ತಲುಪಿಸಲು ಪತ್ರ ಬರೆದು ಕ್ರಮವಹಿಸುವಂತೆ ತಾಕೀತು ಮಾಡಿದರು.
ನಿಮಗೆ ಸಿಗಬೇಕಾದ ಆರ್ಥಿಕ ಸವಲತ್ತುಗಳು,ಪರಿಹಾರಗಳು ಸಕಾಲಕ್ಕೆ ತಲುಪದಿದ್ದರೆ ಆಯೋಗಕ್ಕೆ ದೂರು ನೀಡಿ.ನಾವು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ ನಿಮಗೆ ಅಗತ್ಯವಾದ ಎಲ್ಲ ಸೌಲಭ್ಯಗಳನ್ನು ನೀಡಲು ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ಕಾರ್ಮಿಕರ ಶ್ರೇಯೋಭಿವೃದ್ದಿಗಾಗಿ ಅನುಷ್ಠಾನ ಮಾಡಿರುವ ಯೋಜನೆಗಳಿಂದ ಕಾರ್ಮಿಕರು ವಂಚನೆಯಾಗದಂತೆ ನೋಡಿ ಕೊಳ್ಳ ವುದು ಅಧಿಕಾರಿಗಳ ಜವಾಬ್ದಾರಿ.ಯಾವುದೇ ಲೋಪವನ್ನು ಸಹಿಸಲಾಗುವುದಿಲ್ಲ.ಕಾರ್ಮಿಕರ ಹಿತರಕ್ಷಣೆಗೆ ಮೊದಲ ಆದ್ಯತೆ ನೀಡಿ ಎಂದು ಸದಸ್ಯರಾದ ಶಂಕರ ಅಂಕನಶೆಟ್ಟಿ ಪುರ ಅವರು ತಿಳಿಸಿದರು.
ಚಾಮುಲ್ ನ ವ್ಯವಸ್ಥಾಪಕ ನಿರ್ದೇಶಕರಾದ ರಾಜ್ ಕುಮಾರ್, ಸಿಮ್ಸ್ ಆಸ್ಪತ್ರೆಯ ಡೀನ್ ಮತ್ತು ನಿರ್ದೇಶಕರಾದ ಡಾ.ಆರ್.ಎನ್.ದೇವಕಿ,ಡಾ.ಮಾರುತಿ,ಇತರರು ಇದ್ದರು.