ಮೆದಗನಾಣೆ ಗಿರಿಜನರ ಹಾಡಿಗೆ ಸೆಸ್ಕ್‌ನಿಂದ ವಿದ್ಯುತ್ ಸೌಕರ್ಯ ಕಲ್ಪಿಸಿರುವುದು. 
ಚಾಮರಾಜನಗರ

ಮೆದಗನಾಣೆ ಗಿರಿಜನರ ಹಾಡಿಗೆ ಬೆಳಕಿನ ಭಾಗ್ಯ

ಪ್ರಮುಖ ಮುಖ್ಯಾಂಶಗಳು

  • ಉಪವಾಸ ಸತ್ಯಾಗ್ರಹಕ್ಕೆ ಸಂದ ಜಯ
ಹನೂರು: ತಾಲೂಕಿನ ಮೆದಗನಾಣೆ ಗಿರಿಜನರ ಹಾಡಿಗೆ ಶುಕ್ರವಾರ ರಾತ್ರಿ ವಿದ್ಯುತ್ ಸೌಕರ್ಯ ಕಲ್ಪಿಸಲಾಗಿದ್ದು, ಗಿರಿಜನರು ಒಂದು ವಾರದಿಂದ ಕೈಗೊಂಡಿದ್ದ ಉಪವಾಸ ಸತ್ಯಾಗ್ರಹಕ್ಕೆ ಶುಕ್ರವಾರ ರಾತ್ರಿ ಫಲ ಸಿಕ್ಕಿದೆ.
ಮಲೆಮಹದೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೆದಗನಾಣೆ ಗಿರಿಜನರ ಹಾಡಿಯಲ್ಲಿ ಸುಮಾರು 45ಕ್ಕೂ ಹೆಚ್ಚು ಕುಟುಂಬಗಳಿದ್ದು, ಈವರೆಗೂ ವಿದ್ಯುತ್ ಸೌಕರ್ಯವಿರಲಿಲ್ಲ. ಇದರಿಂದ ಜನರು ಸಮಸ್ಯೆ ಎದುರಿಸುತ್ತಿದ್ದರು. ಇದನ್ನು ಮನಗಂಡ ಸರ್ಕಾರ ವಿದ್ಯುತ್ ಸೌಕರ್ಯ ಕಲ್ಪಿಸಲು ಮುಂದಾಯಿತು. ಸೆಸ್ಕ್ ವತಿಯಿಂದ ಕಾಮಗಾರಿ ಪೂರ್ಣಗೊಂಡು ವರ್ಷವೇ ಕಳೆದಿತ್ತು. ಆದರೆ ಅರಣ್ಯ ಇಲಾಖೆಯಿಂದ ಅನುಮತಿ ದೊರಕಿಲ್ಲವೆಂದು ಗ್ರಾಮಕ್ಕೆ ವಿದ್ಯುತ್ ಸಂಪರ್ಕ ನೀಡಿರಲಿಲ್ಲ. ಈ ಸಂಬಂಧ ಸೆಸ್ಕ್ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳಲ್ಲಿ ಗ್ರಾಮಸ್ಥರು ಹಲವು ಬಾರಿ ಮನವಿ ಮಾಡಿದ್ದರು. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ. ಇದರಿಂದ ಬೇಸತ್ತ ಗಿರಿಜನರು ಏ.10 ರಂದು ಜಿಲ್ಲಾ ಬುಡಕಟ್ಟು ಹಿತರಕ್ಷಣಾ ಸಮಿತಿ ಜತೆಗೂಡಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು.
ಸೆಸ್ಕ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಅಗತ್ಯ ಭರವಸೆ ನೀಡಿದರೂ ಸತ್ಯಾಗ್ರಹ ಕೈ ಬಿಟ್ಟಿರಲಿಲ್ಲ. ಈ ವೇಳೆ ಮೂವರು ಅಸ್ವಸ್ಥಗೊಂಡು ಚಿಕಿತ್ಸೆ ಪಡೆದು ಚೇರಿಸಿಕೊಂಡಿದ್ದರು. ವಿದ್ಯುತ್ ಸೌಕರ್ಯ ಕಲ್ಪಿಸದಿದ್ದಲ್ಲಿ ಯಾವುದೇ ಕಾರಣಕ್ಕೂ ಉಪವಾಸ ಸತ್ಯಾಗ್ರಹವನ್ನು ಕೈ ಬಿಡುವುದಿಲ್ಲ ಎಂದು ಪಟ್ಟು ಹಿಡಿದ ಗಿರಿಜನರು ಸತ್ಯಾಗ್ರಹವನ್ನು ಮುಂದುವರಿಸಿದ್ದರು.
ಈ ಬಗ್ಗೆ ಅರಿತ ಜಿಲ್ಲಾಧಿಕಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಿದ್ದರು. ಇದರ ಪರಿಣಾಮ ಶುಕ್ರವಾರ ರಾತ್ರಿ ಸೆಸ್ಕ್ ಸಿಬ್ಬಂದಿ ಗ್ರಾಮಕ್ಕೆ ವಿದ್ಯುತ್ ಸೌಕರ್ಯ ಕಲ್ಪಿಸಿದೆ. ಇದರಿಂದ ಗಿರಿಜನರು ಕಳೆದ ಒಂದು ವಾರದಿಂದ ಕೈಗೊಂಡಿದ್ದ ಉಪವಾಸ ಸತ್ಯಾಗ್ರಹಕ್ಕೆ ಕೊನೆಗೂ ಫಲ ದೊರಕಿದ್ದು, ಗ್ರಾಮ ಬೆಳಕಿನಿಂದ ಬೆಳಗುತ್ತಿದೆ. ವಿದ್ಯಾರ್ಥಿಗಳು ಕಲಿಕೆಯಲ್ಲಿ ತೊಡಗಿದ್ದಾರೆ. ಈವರೆಗೂ ರಾತ್ರಿ ವೇಳೆ ಕತ್ತಲೆಯಲ್ಲಿ ಕಳೆಯುತ್ತಿದ್ದು, ಸಮಸ್ಯೆಯನ್ನು ಎದುರಿಸುತ್ತಿದ್ದ ಗಿರಿಜನರು ಬೆಳಕನ್ನು ಕಂಡು ಸಂತಸ ವ್ಯಕ್ತಪಡಿಸಿದ್ದು, ನಿಟ್ಟುಸಿರು ಬಿಟ್ಟಂತಾಗಿದೆ.