ಚಾಮರಾಜನಗರದ ಜೆಎಸ್‌ಎಸ್ ಮಹಿಳಾ ಕಾಲೇಜಿನ ಸೆಮಿನಾರ್ ಹಾಲ್‌ನಲ್ಲಿ ಫ.ಗು.ಹಳಕಟ್ಟಿ ಜಯಂತಿ ವಚನ ಸಾಹಿತ್ಯ ಸಂರಕ್ಷಣಾ ದಿನ ಮತ್ತು ಎಚ್.ಜಿ.ಶಾಂತಪ್ಪ ಮತ್ತು ಬಸಮ್ಮಣ್ಣಿ ಪುಟ್ಟಸ್ವಾಮಪ್ಪ ಸ್ಮರಣಾರ್ಥ ದತ್ತಿ ಕಾರ್ಯಕ್ರಮವನ್ನು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಎಚ್.ಎಸ್.ಬಿಂದ್ಯಾ ಉದ್ಘಾಟಿಸಿದರು. ಮಹಾದೇವ ಪ್ರಭು, ಬಿ.ಕೆ.ರವಿಕುಮಾರ್, ಎಚ್.ಎಸ್.ಬಸವರಾಜು, ಕೆ.ಪಿ.ಸದಾಶಿವಮೂರ್ತಿ, ವಸಂತಮ್ಮ ಇತರರು ಹಾಜರಿದ್ದರು.
- ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಎಚ್.ಎಸ್.ಬಿಂದ್ಯಾ ಅಭಿಮತ
- ಫ.ಗು. ಹಳಕಟ್ಟಿ ಜಯಂತಿ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ
ಚಾಮರಾಜನಗರ: ಯುವತಿಯರಿಗೆ ಆಯ್ಕೆಯ ಸ್ವಾತಂತ್ರ್ಯ ಎಲ್ಲ ವಿಷಯಗಳಿಗೂ ದೊರೆತಾಗ ಮಾತ್ರ ನಿಜವಾಗಿದ ಮಹಿಳಾ ಸಬಲೀಕರಣವಾಗಲಿದೆ ಎಂದು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಎಚ್.ಎಸ್.ಬಿಂದ್ಯಾ ಹೇಳಿದರು.
ನಗರದ ಜೆಎಸ್‌ಎಸ್ ಮಹಿಳಾ ಕಾಲೇಜಿನ ಸೆಮಿನಾರ್ ಹಾಲ್‌ನಲ್ಲಿ ಶರಣ ಸಾಹಿತ್ಯ ಪರಿಷತ್ತು ಹಾಗೂ ಜೆಎಸ್‌ಎಸ್ ಮಹಿಳಾ ಕಾಲೇಜು ವತಿಯಿಂದ ಫ.ಗು.ಹಳಕಟ್ಟಿ ಜಯಂತಿ ವಚನ ಸಾಹಿತ್ಯ ಸಂರಕ್ಷಣಾ ದಿನ ಮತ್ತು ಎಚ್.ಜಿ.ಶಾಂತಪ್ಪ ಮತ್ತು ಬಸಮ್ಮಣ್ಣಿ ಪುಟ್ಟಸ್ವಾಮಪ್ಪ ಸ್ಮರಣಾರ್ಥ ದತ್ತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮದುವೆ ಸಂದರ್ಭದಲ್ಲಿ ಮಾತ್ರ ಆಯ್ಕೆಯ ತೀರ್ಮಾನವನ್ನು ಕೇಳುವಂತಾಗಬಾರದು. ನನ್ನ ಆಯ್ಕೆಯ ವಿಷಯದ ಓದಿನಿಂದ ಹಿಡಿದು ಆಲೋಚನೆವರೆಗೂ ಸ್ವಂತ ನಿರ್ಧಾರಗಳಿಗೆ ಮನ್ನಣೆ ಸಿಕ್ಕಾಗ ಮಹಿಳಾ ಸಬಲೀಕರಣವಾಗಲಿದೆ. ವಚನಕಾರ್ತಿ ಅಕ್ಕಮಹದೇವಿ 12ನೇ ಶತಮಾನದಲ್ಲೇ ಲಿಂಗ ಸಮಾನತೆ ಮತ್ತು ಮಹಿಳಾ ಸ್ವಾತಂತ್ರ್ಯವನ್ನು ಪ್ರತಿಪಾದಿಸಿದರು. ಇಂತಹ ಶರಣದ ವಚನಗಳನ್ನು .ಗು.ಹಳಕಟ್ಟಿ ಅವರು ಸಂರಕ್ಷಣೆ ಮಾಡಿದರು. ಶರಣ ಸಾಹಿತ್ಯ ಉಳಿಯುವಲ್ಲಿ .ಗು.ಹಳಕಟ್ಟಿ ಕೊಡುಗೆ ದೊಡ್ಡದು. ಪ್ರಸ್ತುತ ಓದಲು ಸಿಕ್ಕಿರುವ ಶೇ.50ರಷ್ಟು ವಚನಗಳು ಇವರ ಸಂರಕ್ಷಣೆಯಿಂದ ದೊರೆತಿವೆ ಎಂದು ತಿಳಿಸಿದರು.
ಮಹನೀಯರ ವಿಚಾರಧಾರೆಗಳು ಅವರ ಕಾಲಾನಂತರವೂ ಅವರನ್ನು ಜೀವಂತವಾಗಿ ಉಳಿಸುತ್ತವೆ. ವಚನಗಳು ಮಾನವೀಯತೆ, ಮನುಷ್ಯ ಧರ್ಮ ಬೋಧಿಸಿವೆ. ಜಾತಿ ವ್ಯವಸ್ಥೆಯ ಎಲ್ಲೆ ಮೀರಿದ ಸಂದರ್ಭದಲ್ಲಿ ಬುದ್ಧ, ಬಸವಣ್ಣ, ಅಂಬೇಡ್ಕರ್ ಸಮಾನತೆಯನ್ನು ಅನುಷ್ಠಾನ ಮಾಡಿದರು. ಹಾಗಾಗಿ ಇವರ ವಚನಗಳು ಇಂದಿಗೂ ಪ್ರಸ್ತುತ ಎಂದರು.
ಉಪನ್ಯಾಸ ನೀಡಿದ ಸಂತೇಮರಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಮಹಾದೇವ ಪ್ರಭು ಮಾತನಾಡಿ, ವಚನ ಸಾಹಿತ್ಯದ ಹೊರತಾಗಿ ಸಾಹಿತ್ಯದ ಕಲ್ಪನೆ ಮಾಡಿಕೊಳ್ಳಲುಸ ಸಾಧ್ಯವಿಲ್ಲ. ಹಾಡಿದರೆ ಪದ್ಯ, ಓದಿದರೆ ಗದ್ಯವಾಗುವುದೇ ವಚನ ಸಾಹಿತ್ಯ. ಅಂದಿನ ಕಾಲದಲ್ಲಿ ಸಾಹಿತ್ಯ ರಾಜಾಶ್ರಯದಲ್ಲಿತ್ತು. ಶರಣಸರ ಮೂಲಕ ಜನರ ಬಳಿಗೆ ವಚನ ಸಾಹಿತ್ಯ ಬಂತು. ಹೆಸರು, ಕೀರ್ತಿಗಾಗಿ ವಚನಗಳು ರಚನೆಯಾಗಲಿಲ್ಲ. ಸಮಾಜದ ಒಳತಿಗಾಗಿ ವಚನಗಳು ರಚನೆಯಾದವು. ವೈದಿಕರ ವಿರುದ್ಧ ಧಾರ್ಮಿಕ ಹೋರಾಟ ಮಾಡಿದ ಶರಣರಿಗೆ ವಚನಗಳೇ ಅಸವಾದವು. ಸಂಸ್ಕೃತದ ಕಾಲಘಟ್ಟದಲ್ಲಿ ವಚನಗಳು ಜನರ ಆಡುಭಾಷೆಯಲ್ಲಿ ರಚನೆಯಾಗಿ ಸಮಾಜವನ್ನು ತಲುಪಿತು ಎಂದು ಹೇಳಿದರು.
.ಗು.ಹಳಕಟ್ಟಿ ಅವರು ವಚನಗಳ ಸಂರಕ್ಷಣೆಯ ಹೊಣೆಗಾರಿಕೆಯನ್ನು ಹೆಗಲ ಮೇಲೆ ಹೊತ್ತರು. ಮನೆ ಮನೆಗೆ ತೆರಳಿ ಭಿಕ್ಷೆ ಬೇಡುವ ರೀತಿಯಲ್ಲಿ ವಚನಗಳ ತಾಳೆಗರಿಗಳನ್ನು ಸಂಗ್ರಹ ಮಾಡಿದರು. ಬಳಿಕ ವೈಜ್ಞಾನಿಕವಾಗಿ ಸಂಶೋಧನೆ, ಅಧ್ಯಯನ ಮಾಡಿ ವಿದ್ವತ್ ಪೂರ್ಣ ಬೃಹತ್ ವಚನ ಸಾಹಿತ್ಯ ಸಾರವನ್ನು ರಚಸಿದರು ಎಂದು ವಿವರಿಸಿದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಕೆ.ರವಿಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ವಚನ ಸಾಹಿತ್ಯವನ್ನು ಸಂರಕ್ಷಣೆ ಮಾಡುವ ಮೂಲಕ ತಮ್ಮ ಜೀವಮಾನವನ್ನೇ ಮೀಸಲಿಟ್ಟಿದ್ದ ಫ.ಗು. ಹಳಗಟ್ಟಿ ಅವರು ಹುಟ್ಟಿದ್ದು, ಜು. 2 ರಂದು. ಹೀಗಾಗಿ ಅವರ ಜನ್ಮ ದಿನವನ್ನು ವಚನ ದಿನವನ್ನಾಗಿ ಆಚರಣೆ ಮಾಡುವ ಮೂಲಕ ಅವರ ಆಶಯವನ್ನು ಈಡೇರಿಸುವ ಕೆಲಸವವನ್ನು ಶರಣ ಸಾಹಿತ್ಯ ಪರಿಷತ್ ನಿರಂತರವಾಗಿ ಮಾಡುತ್ತಿದೆ. ಶರಣರ ವಿಚಾರಧಾರೆಗಳನ್ನು ಯುವ ಪೀಳಿಗೆಗೆ ಪ್ರಚುರಿಸುವ ಸಲುವಾಗಿ ಲಿಂಗೈಕ್ಯ ಸುತ್ತೂರು ಶ್ರೀರಾಜೇಂದ್ರಸ್ವಾಮೀಜಿಗಳು ಶರಣ ಸಾಹಿತ್ಯ ಪರಿಷತ್ತನ್ನು ಸ್ಥಾಪನೆ ಮಾಡಿದ್ದರು. ಈಗಿನ ಶ್ರೀಶಿವರಾತ್ರಿದೇಶಿಕೇಂದ್ರಸ್ವಾಮೀಜಿ ರಾಜ್ಯಾದ್ಯಂತ ಸಂಘಟನೆಯನ್ನು ವಿಸ್ತರಣೆ ಮಾಡುವ ಜತೆಗೆ ದತ್ತಿ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತು ನೀಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ದತ್ತಿ ದಾನಿಗಳಾದ ಚಾಮುಲ್ ನಿರ್ದೇಶಕ ಎಚ್.ಎಸ್.ಬಸವರಾಜು, ಕೆ.ಪಿ.ಸದಾಶಿವಮೂರ್ತಿ, ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷೆ ವಸಂತಮ್ಮ, ಕಾಲೇಜಿನ ಪ್ರಾಂಶುಪಾಲರಾದ ಟಿ.ಎಂ. ಮರಿಸ್ವಾಮಿ, ದೇವರಾಜಮೂರ್ತಿ, ಪ್ರಭುಸ್ವಾಮಿ, ಎಂ.ಸುಂದರ್, ಎಸ್. ಗುರುಮಲ್ಲಪ್ಪ, ಕೆ.ಎಂ.ಯೋಗೇಶ್, ಆರ್.ಪುಟ್ಟಮಲ್ಲಪ್ಪ, ರೂಪೇಶ್ ಮೊದಲಾದವರು ಇದ್ದರು.