ಹನೂರಿನಲ್ಲಿ ಆಯೋಜಿಸಿರುವ ಅಂಬೇಡ್ಕರ್ ಹಬಕ್ಕೆ ನಟ ದುನಿಯಾ ವಿಜಯ್ ಚಾಲನೆ ನೀಡಿದರು. ಗೋಪಾಲ್, ಮಹಾನಂದ, ಪುರುಷೋತ್ತಮ್, ಹ.ರಾ ಮಹೇಶ್, ಹನೂರು ಚೆನ್ನಪ್ಪ ಇತರರಿದ್ದರು.
- ನಟ ದುನಿಯಾ ವಿಜಯ್ ಆಶಯ
- ನೂರು ಅಂಬೇಡ್ಕರ್ ಹಬ್ಬಕ್ಕೆ ಚಾಲನೆ
ಹನೂರು: ಸಮುದಾಯದ ಯುವ ಪೀಳಿಗೆ ವಿದ್ಯಾವಂತರಾದಾಗ ಮಾತ್ರ ಅಂಬೇಡ್ಕರ್ ಅವರ ಆಶಯ ಈಡೇರಿದಂತಾಗುತ್ತದೆ ಹಾಗೂ ಜಯಂತಿ ಆಚರಣೆಗೂ ಅರ್ಥ ಬರುತ್ತದೆ ಎಂದು ನಟ ದುನಿಯಾ ವಿಜಯ್ ತಿಳಿಸಿದರು.
ಪಟ್ಟಣದ ಡಾ. ಬಿ.ಆರ್.ಸಮುದಾಯ ಭವನ ಆವರಣದಲ್ಲಿ 3 ದಿನಗಳ ಹನೂರು ಅಂಬೇಡ್ಕರ್ ಹಬ್ಬಕ್ಕೆ ಭಾನುವಾರ ಚಾಲನೆ ನೀಡಿ ಮಾತನಾಡಿದರು. ರಾಜಕೀಯದಲ್ಲಿ ನನಗೆ ಆಸಕ್ತಿ ಇಲ್ಲ. ಆದರೆ ವಿದ್ಯಾವಂತರೊಂದಿಗೆ ಕೈ ಜೋಡಿಸುವ ಮೂಲಕ ಉತ್ತಮ ಸಮಾಜ ಕಟ್ಟಲು ಕೈ ಜೋಡಿಸುತ್ತೇನೆ. ಹಾಗಾಗಿ ಅಂಬೇಡ್ಕರ್ ಅವರ ಆಶಯಗಳನ್ನು ಪ್ರತಿಯೊಬ್ಬರೂ ಈಡೇರಿಸಬೇಕು. ಚುನಾವಣಾ ವೇಳೆ ನೀಡುವ ಹಣ, ಆಮಿಷಗಳನ್ನು ತಿರಸ್ಕರಿಸಿ ಪ್ರತಿಯೊಬ್ಬರೂ ಮತ ಚಲಾಯಿಸಬೇಕು. ಇದರಿಂದ ಪ್ರಬುದ್ಧ ಸಮಾಜ ನಿರ್ಮಿಸಲು ಸಾಧ್ಯ. ಪ್ರತಿಯೊಬ್ಬರೂ ಶಿಕ್ಷಣ ಪಡೆದು ಸಂಘಟಿತರಾಗಬೇಕು. ಪ್ರತಿ ವರ್ಷವೂ ವಿದ್ಯಾವಂತರ ಸಂಖ್ಯೆ ಹೆಚ್ಚಾಗಬೇಕು. ಇದರಿಂದ ಸಮುದಾಯದ ಅಭಿವೃದ್ಧಿ ಹೊಂದಲು ಸಾಧ್ಯ. ಈ ಬಗ್ಗೆ ಪ್ರತಿಯೊಬ್ಬರೂ ಮನದಟ್ಟು ಮಾಡಿಕೊಳ್ಳಬೇಕು. ಹನೂರಿನಲ್ಲಿ ಆಚರಿಸುತ್ತಿರುವ ಈ ಹಬ್ಬ ಎಲ್ಲರಿಗೂ ಸ್ಫೂರ್ತಿಯಾಗಿದೆ ಎಂದು ತಿಳಿಸಿದರು.
ಅಂಬೇಡ್ಕರ್‌ವಾದಿ ಡಾ.ಹ.ರಾ ಮಹೇಶ್ ಮಾತನಾಡಿ, ಹನೂರಿನಲ್ಲಿ ಈ ಬಾರಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು 3 ದಿನಗಳ ಕಾಲ ಅಂಬೇಡ್ಕರ್ ಹಬ್ಬವಾಗಿ ವಿಶೇಷತೆಯಿಂದ ಆಚರಿಸುತ್ತಿರುವುದು ನಿಜಕ್ಕೂ ಸಂತಸದ ಸಂಗತಿ. ಇದು ರಾಜ್ಯಕ್ಕೆ ಮಾದರಿ ಎಂದರು.
ಆರೋಗ್ಯ ತಪಾಸಣಾ ಶಿಬಿರ: ಅಂಬೇಡ್ಕರ್ ಹಬ್ಬದ ಅಂಗವಾಗಿ ಉಚಿತ ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿತ್ತು. ಪಟ್ಟಣ ಸೇರಿದಂತೆ ಆಗಮಿಸಿದ್ದ ವಿವಿಧ ಗ್ರಾಮದ ಜನರು ಶಿಬಿರದ ಪ್ರಯೋಜನ ಪಡೆದರು. ಮೈಸೂರು ಪದ್ಮವಾಣಿ ತಂಡದಿಂದ ಭೀಮ ಗೀತ ಗಾಯನ ಕಾರ್ಯಕ್ರಮ ನಡೆಯಿತು. ಪಟ್ಟಣದ ಮಲೆಮಹದೇಶ್ವರ ಬೆಟ್ಟ, ಲೊಕ್ಕನಹಳ್ಳಿ ಮುಖ್ಯ ರಸ್ತೆ ಹಾಗೂ ಅಂಬೇಡ್ಕರ್ ವೃತ್ತವನ್ನು ವಿಶೇಷ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುವಂತೆ ವ್ಯವಸ್ಥೆ ಮಾಡಲಾಗಿತ್ತು. ನೀಲಿ ಬಾವುಟ ಹಾಗೂ ಅಂಬೇಡ್ಕರ್ ಭಾವಚಿತ್ರಗಳು ರಾರಾಜಿಸಿದವು. ಸೋಮವಾರ ಮಹಿಳೆಯರು ಹಾಗೂ ಪುರುಷರಿಗಾಗಿ ಆಟೋಟ ಸ್ಪರ್ಧೆ, ಭಾರತ ಭಾಗ್ಯವಿಧಾತ ರೂಪಕ ಹಾಗೂ ಅಂಬೇಡ್ಕರ್ ಚಲನಚಿತ್ರ ಪ್ರದರ್ಶನ ನಡೆಯಿತು.
ಕಾರ್ಯಕ್ರಮದಲ್ಲಿ ತುಮಕೂರು ಎಎಸ್ಪಿ ಮಂಗಲ ಸಿ. ಗೋಪಾಲ್, ಬೆಂಗಳೂರು ಸಿಸಿಬಿ ಎಸಿಪಿ ಮಹಾನಂದ, ಮೈಸೂರು ಮಹಾನಗರ ಪಾಲಿಕೆ ಮಾಜಿ ಮೇಯರ್ ಪುರುಷೋತ್ತಮ್, ರಾಜ್ಯ ಎಸಿ-ಎಸ್ಟಿ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರಯ್ಯ, ಸಾಹಿತಿ ಹನೂರು ಚೆನ್ನಪ್ಪ, ಅಂಬೇಡ್ಕರ್ ಆಚರಣಾ ಸಮಿತಿ ಅಧ್ಯಕ್ಷ ಪ್ರಸನ್ನಕುಮಾರ್ ಇತರರು ಇದ್ದರು.