ಚಾಮರಾಜನಗರದ ಹೊರವಲಯದಲ್ಲಿರುವ ಜೆ.ಎಸ್.ಎಸ್ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಕೈಗಾರಿಕಾ ತರಬೇತಿ ಮತ್ತು ಉದ್ಯೋಗಿ ಇಲಾಖೆ ವತಿಯಿಂದ ಮಂಗಳವಾರ ಆಯೋಜಿಸಿದ್ದ ಪ್ರಧಾನಮಂತ್ರಿ ರಾಷ್ಟ್ರೀಯ ಶಿಶಿಕ್ಷು ಮೇಳ ಕಾರ್ಯಕ್ರಮವನ್ನು ಜೆ.ಎಸ್.ಎಸ್ ಆರ್.ಐ.ಎಸ್.ಡಿ.ಸಿ ಸಂಯೋಜಕ ಬಿ. ಎಂ. ಚಂದ್ರಶೇಖರ್ ಉದ್ಘಾಟಿಸಿದರು. ಅಮಿತ್ ವಿನಾಗ್, ಎಚ್.ಎಸ್. ಪ್ರಸಾದ್, ಆರ್. ರೋಹಿತ್ ಇತರರು ಇದ್ದರು.
- ವಿದ್ಯಾರ್ಥಿಗಳಿಗೆ ಬಿ.ಎಂ.ಚಂದ್ರಶೇಖರ್ ಸಲಹೆ
- ಪ್ರಧಾನಮಂತ್ರಿ ರಾಷ್ಟ್ರೀಯ ಶಿಶಿಕ್ಷು ಮೇಳ
ಚಾಮರಾಜನಗರ: ವಿದ್ಯಾರ್ಥಿಗಳು ಪುಸ್ತಕಗಳಲ್ಲಿ ಓದಿರುವ ವಿಷಯ, ಚಟುವಟಿಕೆಗಳನ್ನು ಪ್ರಾಯೋಗಿಕವಾಗಿ ಬಳಸಿ ಕರಗತ ಮಾಡಿಕೊಳ್ಳುವಂತೆ ಮರಿಯಾಲದ ಜೆಎಸ್‌ಎಸ್ ಆರ್.ಐ.ಎಸ್.ಡಿ.ಸಿ ಸಂಯೋಜಕ ಬಿ.ಎಂ.ಚಂದ್ರಶೇಖರ್ ಸಲಹೆ ನೀಡಿದರು.
ನಗರದ ಹೊರವಲಯದಲ್ಲಿರುವ ಜೆ.ಎಸ್.ಎಸ್. ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ವತಿಯಿಂದ ಮಂಗಳವಾರ ಆಯೋಜಿಸಿದ್ದ ಪ್ರಧಾನಮಂತ್ರಿ ರಾಷ್ಟ್ರೀಯ ಶಿಶಿಕ್ಷು ಮೇಳವನ್ನು ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶಿಶಿಕ್ಷು ಮೇಳ ಆಯೋಜಿಸಲಾಗಿದೆ. ಐಟಿಐ ವಿದ್ಯಾರ್ಥಿಗಳಿಗೆ ಕೈಗಾರಿಕಾ ಪ್ರದೇಶಗಳಲ್ಲಿ ಹೆಚ್ಚಿನ ಅವಕಾಶಗಳಿವೆ. ಸ್ಥಳೀಯರಿಗೆ ಹೆಚ್ಚಿನ ಉದ್ಯೋಗ ಅವಕಾಶಗಳು ದೊರೆಯುವುದು ಶಿಶಿಕ್ಷು ಮೇಳದ ಪ್ರಮುಖ ಉದ್ದೇಶವಾಗಿದೆ. ಮೇಳದಲ್ಲಿ ಪ್ರಾಯೋಗಿಕ ಕೌಶಲಗಳನ್ನು ವೃದ್ಧಿಸಿಕೊಳ್ಳಬೇಕು. ಇತ್ತೀಚೆಗೆ ಕಂಪನಿಗಳು ತಂತ್ರಜ್ಞಾನಗಳನ್ನು ಹೆಚ್ಚಾಗಿ ಅಳವಡಿಸಿಕೊಂಡಿದ್ದು, ಅಪ್ರೆಂಟಿಸ್‌ನಂತಹ ಅವಕಾಶಗಳಿಂದ ಅನುಭವ ಹೆಚ್ಚಾಗಿ ನೌಕರಿ ಪಡೆಯುವ ಸಾಮರ್ಥ್ಯ ಹೊಂದಬಹುದಾಗಿದೆ ಎಂದು ತಿಳಿಸಿದರು.
ಬದನಗುಪ್ಪೆ ಗ್ರಾಮ ಪಂಚಾಯಿತಿ ಆಡಳಿತ ಅಧಿಕಾರಿ ಅಮಿತ್ ವಿನಾಗ್ ಮಾತನಾಡಿ, ವಿದ್ಯಾರ್ಥಿಗಳಿಗೆ ಉತ್ತಮವಾದ ಶಿಕ್ಷಣ ದೊರೆಯುತ್ತಿದ್ದು ಅದನ್ನು ಉದ್ಯೋಗ ಪಡೆದುಕೊಳ್ಳುವುದಕ್ಕಾಗಿ ಬಳಸಿಕೊಳ್ಳಬೇಕು. ವಿದ್ಯಾರ್ಥಿಗಳು ಸ್ವಾಭಿಮಾನದಿಂದ ಬದುಕಲು ಉದ್ಯೋಗ ಅವಶ್ಯಕವಾಗಿದೆ. ಯಾವುದೇ ಕೆಲಸವಾದರೂ ಶ್ರದ್ಧೆಯಿಂದ ಮಾಡಬೇಕು ಎಂದರು.
ಪ್ರಧಾನಮಂತ್ರಿ ರಾಷ್ಟ್ರೀಯ ಶಿಶಿಕ್ಷು ಮೇಳದ ನೋಡೆಲ್ ಅಧಿಕಾರಿ ಹಾಗೂ ಬೇಗೂರಿನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಅಧಿಕಾರಿ ಎಚ್.ಎಸ್. ಪ್ರಸಾದ್ ಮಾತನಾಡಿ, 2021ರಿಂದ ಸರ್ಕಾರವು ರಾಷ್ಟ್ರೀಯ ಶಿಶಿಕ್ಷು ಮೇಳ ಯೋಜನೆ ಜಾರಿಗೊಳಿಸಿದೆ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದೊಂದಿಗೆ ಉದ್ಯಮಿದಾರ, ಸ್ವ ಉದ್ಯೋಗ ಕಲ್ಪಿಸಿ ಕೊಡುವುದು ಯೋಜನೆಯ ಸದುದ್ದೇಶವಾಗಿದೆ. ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳ ನ್ಯೂನತೆಗಳನ್ನು ಕಂಡುಹಿಡಿದು ಶಿಸ್ತು, ಸಂಯಮ, ಸಮಯ ನಿರ್ವಹಣೆ ಕಲಿಸಲು ಯೋಜನೆ ಸಹಕಾರಿಯಾಗಿದೆ. ಐ.ಟಿ.ಐ ಅಪ್ರೆಂಟಿಸ್‌ಷಿಪ್‌ನ ಫಲಾನುಭವಿಗಳಿಗೆ ಹೆಚ್ಚಿನ ಉದ್ಯೋಗಾವಕಾಶಗಳು ಲಭ್ಯವಾಗಲಿವೆ ಎಂದು ಹೇಳಿದರು.
ಇ-ಉದ್ಯೋಗ ಕುರಿತು ಪಿ.ಪಿ.ಟಿ ಮೂಲಕ ಮಾಹಿತಿನೀಡಿದ ಬೇಗೂರಿನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಜಿ. ರವಿಚಂದ್ರನ್ ಅವರು ಸರ್ಕಾರವು ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ, ಎಕ್ಸ್‌ಟೇಪ್ ಫೌಂಡೇಷನ್ ಮತ್ತು ತ್ರಿಬಲ್ ಎಚ್ ಹಾಗೂ ಎಐ ಪವರ್ಡ್ ಪ್ಲೇಸ್ಮೆಂಟ್ ಅಪ್ಲಿಕೇಶನ್ ಸಹಯೋಗದಲ್ಲಿ ಐಟಿಐ ವಿದ್ಯಾರ್ಥಿಗಳಿಗೆ ಸ್ಥಳೀಯವಾಗಿ ಕೈಗಾರಿಕೆಗಳಲ್ಲಿ ಉದ್ಯೋಗಗಳು ದೊರೆಯಲು ಅನುಕೂಲವಾಗುವಂತೆ ಬ್ಲೂ ಡಾಟ್ ಅಪ್ಲಿಕೇಶನ್ ಅಭಿವೃದ್ಧಿಪಡಿಸಿದೆ ಎಂದರು.
ಶಿಶಿಕ್ಷು ನೋಂದಣಿ ಬಗ್ಗೆ ಮಾಹಿತಿ ನೀಡಿದ ಬೇಗೂರಿನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಆರ್. ರೋಹಿತ್ ಮಾತನಾಡಿ, ಕೈಗಾರಿಕೆಗಳಲ್ಲಿ 30ಕ್ಕಿಂತ ಅಧಿಕ ಜನಸಂಖ್ಯೆ ಇದ್ದಲ್ಲಿ ಅಪ್ರೆಂಟಿಸ್ ವಿದ್ಯಾರ್ಥಿಗಳಿಗೆ ಅವಕಾಶ ನೀಡಬೇಕು. ವಿದ್ಯಾರ್ಥಿಗಳಿಗೆ ಇಎಫ್, ಪಿಎಫ್ ಹಣ ಬರುವುದಿಲ್ಲ. ಐಟಿಐ ಅಪ್ರೆಂಟಿಸ್ ವಿದ್ಯಾರ್ಥಿಗಳನ್ನು ತೆಗೆದುಕೊಳ್ಳದಿದ್ದಲ್ಲಿ ಕೈಗಾರಿಕೆಗಳಿಗೆ ದಂಡ ವಿಧಿಸಲಾಗುವುದು ಎಂದು ತಿಳಿಸಿದರು.
ಕಾಯಿನಿಸ್ ಎಲೆಕ್ಟ್ರಾನಿಕ್ ಪ್ರೈವೇಟ್ ಲಿಮಿಟೆಡ್‌ನ ಎಚ್. ಆರ್.ಶಿವಗುಪ್ತ, ಅನಿಲ್, ನಂಜನಗೂಡು ಐಟಿಸಿ ಫುಡ್ ಲಿಮಿಟೆಡ್‌ನ ಎಚ್.ಆರ್.ಮುರಳಿ, ಐಟಿಸಿ ಟೊಬ್ಯಾಕೋ ಲಿಮಿಟೆಡ್‌ನ ಎಚ್.ಆರ್. ಸುಮಾಶ್ರೀ, ಮಂಜುನಾಥ್, ನಂಜನಗೂಡಿನ ಕ್ಯಾಶ್ಲೆಸ್ ಬರ್ಗ್ ಪ್ರೈವೇಟ್ ಲಿಮಿಟೆಡ್‌ನ ಎಚ್.ಆರ್, ಮಧು, ಶಶಿಕುಮಾರ್, ಪವನ್ ಕುಮಾರ್ ಹಾಗೂ ನ್ಯೂ ಹ್ಯಾರಿಯೋನ್ಸ್ ಎರ್ಜ್ ಪ್ರೈವೇಟ್ ಲಿಮಿಟೆಡ್‌ನ ಎಚ್.ಆರ್.ರಮೇಶ್ ಇತರರು ಉಪಸ್ಥಿತರಿದ್ದರು.