ಗುಂಡ್ಲುಪೇಟೆ ತಾಲೂಕಿನ ಬೆಂಡರವಾಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆರ್.ಕೆ.ಮಧು ಛಾಯಾಚಿತ್ರಗಳನ್ನು ಪ್ರದರ್ಶಿಸಿದರು. ಶ್ರೀಕಂಠಮೂರ್ತಿ ಇದ್ದರು. 
ಚಾಮರಾಜನಗರ

ವಿನಾಶದಂಚಿನಲ್ಲಿವೆ ಹಲವು ಜೀವರಾಶಿಗಳು

ಪ್ರಮುಖ ಮುಖ್ಯಾಂಶಗಳು

  • ಅಂತಾರಾಷ್ಟ್ರೀಯ ಪ್ರಶಸ್ತಿವಿಜೇತ ವನ್ಯಜೀವಿ ಛಾಯಾಗ್ರಾಹಕ ಆರ್.ಕೆ.ಮಧು
  • ಬೆಂಡರವಾಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಿಸರ್ಗ ಇಕೋ ಕ್ಲಬ್
ಗುಂಡ್ಲುಪೇಟೆ: ಅರಣ್ಯ ಪ್ರದೇಶವನ್ನು ಅತಿಕ್ರಮಿಸಿಕೊಂಡ ಪರಿಣಾಮ ಪರಿಸರ ಅಸಮತೋಲನಗೊಂಡಿದ್ದು, ಪರಿಸರದಲ್ಲಿನ ಏರುಪೇರಿಂದಾಗಿ ಹಲವು ಜೀವರಾಶಿಗಳು ವಿನಾಶದಂಚಿನಲ್ಲಿವೆ ಎಂದು ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತ ವನ್ಯಜೀವಿ ಛಾಯಾಗ್ರಾಹಕ ಆರ್.ಕೆ.ಮಧು ಕಳವಳ ವ್ಯಕ್ತಪಡಿಸಿದರು.
ತಾಲೂಕಿನ ಬೆಂಡರವಾಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಿಸರ್ಗ ಇಕೋ ಕ್ಲಬ್ ಮಕ್ಕಳಿಗಾಗಿ ಶಾಲೆಯಲ್ಲಿ ಆಯೋಜಿಸಿದ್ದ ಜೀವವೈವಿಧ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಭಾರತದಲ್ಲಿ ಸುಮಾರು 45,000 ಸಸ್ಯಪ್ರಭೇದಗಳು ಹಾಗೂ 10 ಲಕ್ಷದ 5 ಸಾವಿರ ಪ್ರಾಣಿಪ್ರಭೇದಗಳಿದ್ದು ಅವುಗಳು ಸಮತೋಲನದಿಂದ ಇರಲು ನಾವು ಪಣ ತೊಡಬೇಕು. ಈಗಿನಿಂದಲೇ ಪ್ರತಿಯೊಬ್ಬರೂ ಕನಿಷ್ಠ ಒಂದು ಸಸಿ ನೆಟ್ಟು ಪಾಲಿಸದಿದ್ದರೆ ಮಾನವ ಜನಾಂಗಕ್ಕೆ ಉಳಿಗಾಲವಿಲ್ಲ ಎಂದು ಹೇಳಿದರು.
ಮಕ್ಕಳಿಗೆ ಶಾಲಾ ಆವರಣದಲ್ಲಿದ್ದ ತೇಗ, ನೇರಳೆ, ಚೆರ‌್ರಿ ಮುಂತಾದ ಮರಗಳ ಪ್ರಾಮುಖ್ಯತೆ ವಿವರಿಸುವುದರ ಜತೆಗೆ ಗಿಡ ಬೆಳೆಸಲು ಸಲಹೆ ನೀಡಿದರು. ಶಾಲೆ ಮುಖ್ಯಶಿಕ್ಷಕ ಎಂ.ಶ್ರೀಕಂಠಮೂರ್ತಿ ಮಾತನಾಡಿ, ಮಕ್ಕಳು ಪ್ಲಾಸ್ಟಿಕ್ ಬಳಕೆಯನ್ನು ಕೈಬಿಡಬೇಕು. ಆ ಮೂಲಕ ಜೀವನಶೈಲಿಯನ್ನು ಪರಿಸರ ಸ್ನೇಹಿಯಾಗಿ ಮಾರ್ಪಾಡು ಮಾಡಬೇಕು ಎಂದು ಸಲಹೆ ನೀಡಿದರು.