ಯಳಂದೂರು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿದರು. ಬಸವರಾಜ ಸ್ವಾಮೀಜಿ ಒಡೆಯರ್, ಕಿನಕಹಳ್ಳಿ ಪ್ರಭುಪ್ರಸಾದ್, ಜಿ.ಮಹಾದೇಪ್ಪ ಇತರರಿದ್ದರು.  
ಚಾಮರಾಜನಗರ

ಮಹನೀಯರ ಜಯಂತಿಯಲ್ಲಿ ಕಡ್ಡಾಯವಾಗಿ ಭಾಗವಹಿಸಿ

ಪ್ರಮುಖ ಮುಖ್ಯಾಂಶಗಳು

  • ಸರ್ಕಾರಿ ಅಧಿಕಾರಿಗಳಿಗೆ ಶಾಸಕ ಎ.ಆರ್.ಕೃಷ್ಣಮೂರ್ತಿ ಸೂಚನೆ
ಯಳಂದೂರು: ತಾಲೂಕು ಮಟ್ಟದ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲೂಕು ಆಡಳಿತ ವತಿಯಿಂದ ನಡೆಯುವ ಜಯಂತಿಗಳ ಆಚರಣೆ ಕಾರ್ಯಕ್ರಮಗಳಿಗೆ ತಾಲೂಕಿನ ಇಲಾಖೆವಾರು ಅಧಿಕಾರಿಗಳ ವರ್ಗ ಗೈರಾಗುತ್ತಿರುವುದು ಸರಿಯಾದ ಕ್ರಮವಲ್ಲ. ಮುಂದೆ ಎಲ್ಲ ಮಹನೀಯರ ಜಯಂತಿಗೆ ಕಡ್ಡಾಯವಾಗಿ ಭಾಗವಹಿಸಬೇಕು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಸೂಚಿಸಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಬಸವೇಶ್ವರ ಭಾವಚಿತ್ರಕ್ಕೆ ಪುಪ್ಪಾರ್ಚನೆ ಮಾಡಿ ಮಾತನಾಡಿದರು.
ಮಹನೀಯರ ಜಯಂತಿಗಳ ಕಾರ್ಯಕ್ರಮಗಳಿಗೆ ಕಡ್ಡಾಯವಾಗಿ ಇಲಾಖೆ ಅಧಿಕಾರಿಗಳ ವರ್ಗ ಹಾಜರಿರಬೇಕು. ಬಸವಣ್ಣನವರು 12ನೇ ಶತಮನಾದ ಮಹಾನ್ ಸಮಾಜ ಸುಧಾರಕ, ದಾರ್ಶನಿಕ ಮತ್ತು ವಚನಕಾರ, ಜಾತಿ ಪದ್ಧತಿ, ಲಿಂಗತಾರತಮ್ಯ ಮತ್ತು ಮೂಢನಂಬಿಕೆ ವಿರುದ್ಧ ಹೋರಾಡಿ ಅನುಭವ ಮಂಟಪ ಮೂಲಕ ಜಗತ್ತಿನ ಮೊದಲ ಸಂಸತ್ತು ಪರಿಕಲ್ಪನೆಯನ್ನು ರಚಿಸಿದರು ಎಂದರು.
ಬಸವಣ್ಣನವರ ವಿಚಾರಗಳು ಪ್ರಜಾಪ್ರಭುತ್ವ, ಸಮಾನತೆ,ಅಂತರ್ಜಾತಿ ವಿವಾಹವನ್ನು ಏರ್ಪಡಿಸುವ ಮೂಲಕ ಭೇದ ಭಾವಗಳಿಲ್ಲದ ಸಮಾಜದ ಕನಸನ್ನು ಬಿತ್ತಿದರು ಎಂದದರು.
ಬಸವಣ್ಣನವರ ಸಾಂಸ್ಕೃತಿಕ ನಾಯಕ ಎಂದು ಸರ್ಕಾರವು ಘೋಷಣೆ ಮಾಡಿ ಎಲ್ಲ ಇಲಾಖೆಗಳಲ್ಲಿ ಬಸವಣ್ಣನವರ ಭಾವಚಿತ್ರ ಕಡ್ಡಾಯ ಮಾಡಿದ್ದಾರೆ. ಜತೆಗೆ ಕೊಳ್ಳೇಗಾಲ ಕ್ಷೇತ್ರದಲ್ಲಿ 25 ಕೋಟಿ ರೂ., ವಿಶೇಷ ಅನುದಾನವನ್ನು ಎಲ್ಲ ವರ್ಗದ, ಎಲ್ಲ ಧರ್ಮಗಳಲ್ಲಿಗೆ ಸಮುದಾಯ ಭವನ, ರಸ್ತೆ, ಚರಂಡಿ ಅಭಿವೃದ್ಧಿಗೆ ಹಂಚಿಕೆ ಮಾಡಲಾಗಿದೆ. ಜತೆಗೆ ಸಂತೇಮಹಳ್ಳಿ ಬಸವ ಭವನಕ್ಕೆ 50 ಲಕ್ಷ ರೂ.ಕೊಳ್ಳೇಗಾಲ ಮಹಾ ಮನೆಗೆ 25 ಲಕ್ಷ ರೂ. ನೀಡಲಾಗಿದೆ ಎಂದು ತಿಳಿಸಿದರು.
ಶ್ರೀಧರ್ ಈಚಲ ಮಾತನಾಡಿ, ಬಸವಣ್ಣನವರ ವಚನಗಳನ್ನು ದೇಶ, ವಿದೇಶಗಳಲ್ಲಿ ಅಧ್ಯಯನ ಮಾಡುತ್ತಿದ್ದಾರೆ, ನಾವು ಮೊದಲು ವಚನಗಳ ಅಧ್ಯಾಯ ಮಾಡಿ ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರಪುರ ವಿರಕ್ತ ಮಠದ ಬಸವರಾಜ ಸ್ವಾಮೀಜಿ ಒಡೆಯರ್, ತಾಲೂಕು ಗ್ಯಾರಂಟಿ ಯೋಜನೆ ಅಧ್ಯಕ್ಷ ಕಿನಕಹಳ್ಳಿ ಪ್ರಭುಪ್ರಸಾದ್, ವೀರಶೈವ ಲಿಂಗಾಯಿತ ಮಹಾಸಭಾ ತಾಲೂಕು ಅಧ್ಯಕ್ಷ ಜಿ.ಮಹಾದೇಪ್ಪ, ಬಿಳಿಗಿರಿರಂಗನಬೆಟ್ಟದ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜೆ.ಶ್ರೀನಿವಾಸ್, ಪ.ಪಂ. ನಾಮನಿರ್ದೇಶನ ಸದಸ್ಯ ಲಿಂಗರಾಜುಮೂರ್ತಿ, ಗೌಡಹಳ್ಳಿ ಮಹದೇವಸ್ವಾಮಿ ಇತರರು ಇದ್ದರು.