ಹನೂರು ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸುವಂತೆ ಬಿಜೆಪಿ ಮಂಡಲದ ಕಾರ್ಯಕರ್ತರು ತಹಸೀಲ್ದಾರ್ ಕೆ.ಎನ್.ಚೈತ್ರಾ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ವೃಷಭೇಂದ್ರಸ್ವಾಮಿ, ಲೋಕೇಶ್ ಜತ್ತಿ, ಪ್ರಕಾಶ್, ಮಲ್ಲೇಶ್ ಇತರರಿದ್ದರು.  
ಚಾಮರಾಜನಗರ

ಬಿಜೆಪಿ ಮಂಡಲದಿಂದ ತಹಸೀಲ್ದಾರ್‌ಗೆ ಮನವಿ

ಎ. ಆರ್. ರಘುರಾಮ
ಹನೂರು : ಮಳೆ ಇಲ್ಲದ ಪರಿಣಾಮ ರೈತರು ಸಂಕಷ್ಟಕ್ಕೆ ಸಿಲುಕಿರುವುದರಿಂದ ಹನೂರು ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸುವಂತೆ ಮಂಗಳವಾರ ಬಿಜೆಪಿ ಮಂಡಲದ ಕಾರ್ಯಕರ್ತರು ತಹಸೀಲ್ದಾರ್ ಕೆ.ಎನ್.ಚೈತ್ರಾ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಬಿಜೆಪಿ ಹನೂರು ಮಂಡಲಾಧ್ಯಕ್ಷ ಕೆ.ಪಿ ವೃಷಭೇಂದ್ರಸ್ವಾಮಿ ಮಾತನಾಡಿ, ತಾಲೂಕಿನಲ್ಲಿ 2 ವರ್ಷದಿಂದ ಸಮರ್ಪಕ ಮಳೆಯಾಗದ ಪರಿಣಾಮ ಹಳ್ಳಕೊಳ್ಳಗಳು, ಕೆರೆ ಕಟ್ಟೆ ಬತ್ತಿ ಹೋಗಿವೆ. ಅಂತರ್ಜಲ ಮಟ್ಟ ಕುಸಿದಿದೆ. ಇದರಿಂದ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಜಾನುವಾರುಗಳಿಗೆ ಮೇವಿನ ಸಮಸ್ಯೆ ಎದುರಾಗಿದೆ. ಇತ್ತ ರೈತರು ಬಿತ್ತನೆ ಮಾಡಲಾಗದೆ ಕಂಗಲಾಗಿದ್ದು, ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ಸರ್ಕಾರ ಈ ಬಗ್ಗೆ ಮನಗಂಡು ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು. ಪ್ರತಿ ಎಕರೆಗೆ 50 ಸಾವಿರ ರೂ. ನೀಡಬೇಕು. ಜನ ಸಾಮಾನ್ಯರಿಗೆ ಕೇಂದ್ರ ಸರ್ಕಾರದ ಪಡಿತರ ಅಕ್ಕಿಯ ಜತೆಗೆ ಇತರ ಅಗತ್ಯ ಆಹಾರ ಪದಾರ್ಥವನ್ನು ಪ್ರತಿ ತಿಂಗಳು ನೀಡಬೇಕು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜಾನುವಾರುಗಳಿಗೆ ಮೇವು ಕೇಂದ್ರ ತೆರೆಯಬೇಕು. ನೀರಿನ ಸಮಸ್ಯೆ ತಲೆದೂರಿರುವ ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ಹಾಗೂ ಬೋರ್ ಕೊರೆಸಿ ಜನರಿಗೆ ಸಮರ್ಪಕ ನೀರು ಪೂರೈಸಬೇಕು. ಬ್ಯಾಂಕ್‌ಗಳಲ್ಲಿ ರೈತರು ಪಡೆದಿರುವ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿದರು.
ತಹಸೀಲ್ದಾರ್ ಕೆ.ಎನ್.ಚೈತ್ರಾ ಅವರು ಮನವಿಯನ್ನು ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಕಳುಹಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಕಾರ್ಯಕರ್ತರಾದ ಲೋಕೇಶ್ ಜತ್ತಿ, ಮಲ್ಲೇಶ್, ಪ್ರಕಾಶ್, ರಾಜೇಶ್, ನಾಗರಾಜು, ನಿಂಗಪ್ಪ, ಮಾದೇವ, ಗುರುಮಲ್ಲರಾಧ್ಯ, ಜಡೇರುದ್ರಸ್ವಾಮಿ ಇತರರು ಇದ್ದರು.