ಗುಂಡ್ಲುಪೇಟೆ ತಾಲೂಕಿನ ಕಡಬೂರು ಗ್ರಾಮದಲ್ಲಿ ಆಯೋಜಿಸಿದ್ದ ಧಾರ್ಮಿಕ ಸಭೆಯನ್ನು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಉದ್ಘಾಟಿಸಿದರು. ಶ್ರೀ ಸಿದ್ದಲಿಂಗಸ್ವಾಮೀಜಿ, ಶ್ರೀ ಶಿವಲಿಂಗೇಂದ್ರಸ್ವಾಮೀಜಿ, ಶ್ರೀ ಮಹಾಂತಸ್ವಾಮೀಜಿ, ಶ್ರೀ ತೋಂಟದಾರ್ಯಸ್ವಾಮೀಜಿ, ಶ್ರೀ ಸರ್ಪಭೂಷಣಸ್ವಾಮೀಜಿ, ಶ್ರೀ ಇಮ್ಮಡಿ ಉದ್ದಾನಸ್ವಾಮೀಜಿ ಇತರರಿದ್ದರು. 
ಚಾಮರಾಜನಗರ

ಭಗವಂತನ ಸೃಷ್ಟಿ ಮೀರಿ ಮನುಷ್ಯ ಬದಕಲು ಸಾಧ್ಯವಿಲ್ಲ

ಕಿರಣ್ ಮಾದರಹಳ್ಳಿ

ಪ್ರಮುಖ ಮುಖ್ಯಾಂಶಗಳು

  • ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅಭಿಪ್ರಾಯ ಕಡಬೂರಿನಲ್ಲಿ ಧಾರ್ಮಿಕ ಸಭೆ
  • ಧಾರ್ಮಿಕ ಸಭೆಯನ್ನು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಉದ್ಘಾಟಿಸಿದರು.
  • ಕಡಬೂರು ಗ್ರಾಮದಲ್ಲಿ ಶಿವ ಹಾಗೂ ಗಣೇಶ ದೇವಾಲಯ ಉದ್ಘಾಟನೆ
ಗುಂಡ್ಲುಪೇಟೆ: ಎಲ್ಲೆಡೆ ಆವರಿಸಿರುವ ಭಗವಂತನ ಸೃಷ್ಟಿಯನ್ನು ಹೊರತುಪಡಿಸಿ ಮನುಷ್ಯ ತಾನೊಬ್ಬನೇ ಬದುಕಲು ಸಾಧ್ಯವಿಲ್ಲ ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ಶುಕ್ರವಾರ ತಾಲೂಕಿನ ಕಡಬೂರು ಗ್ರಾಮದಲ್ಲಿ ಶಿವ ಹಾಗೂ ಗಣೇಶ ದೇವಾಲಯ ಉದ್ಘಾಟನೆ ಅಂಗವಾಗಿ ಆಯೋಜಿಸಿದ್ದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು. ಇಡೀ ವಿಶ್ವದ ತುಂಬಾ ಆವರಿಸಿರುವ ಗಾಳಿಯಂತೆ ದೇವರು ಇದ್ದರೂ ಅವನನ್ನು ಕಾಣುವ ದೃಷ್ಟಿ ಪ್ರತಿಯೊಬ್ಬರಿಗೂ ಬೇರೆಬೇರೆಯಾಗಿರುತ್ತದೆ. ಹಿಂದೆ ಮನುಷ್ಯ ಸೃಷ್ಟಿಯಲ್ಲಿರುವ ಗಿಡಮರಗಳನ್ನು ದೇವರೆಂದು ಪೂಜಿಸುತ್ತಾ ಬಂದಿದ್ದಾನೆ. ಮೂರ್ತಿ ಪೂಜೆ ಭಾರತೀಯ ಸಂಸ್ಕೃತಿಯ ಭಾಗವಾಗಿದೆ. ಮನುಷ್ಯ ತನ್ನ ಕಲ್ಪನೆಗೆ ತಕ್ಕಂತೆ ದೇವರ ರೂಪವನ್ನು ಕಲ್ಪಿಸುವುದರಿಂದ ಅದರ ಮೇಲೆ ಗಮನವನ್ನು ಕೇಂದ್ರೀಕರಿಸಲು ಸಾಧ್ಯವಾಗುತ್ತದೆ. ದೇವರನ್ನು ನೇರವಾಗಿ ಕಾಣಲು ಸಾಧ್ಯವಿಲ್ಲದಿದ್ದರೂ ಒಂದಲ್ಲಾ ಒಂದು ರೂಪದಲ್ಲಿ ಅನುಭವಿಸಲು ಸಾಧ್ಯವಾಗುತ್ತದೆ. ಗಣಪತಿಗೆ ಪ್ರಿಯವಾದ ಕಡಬನ್ನು ಹೊಂದಿರುವ ಕಡಬೂರು ಗ್ರಾಮದ ಹೆಸರೇ ವಿಶಿಷ್ಟವಾಗಿದೆ. ಇದರಿಂದ ಗ್ರಾಮದ ಗಣೇಶ ದೇವಾಲಯ ಅತ್ಯಂತ ಸೂಕ್ತವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಸಕ ಎಚ್.ಎಂ.ಗಣೇಶ್‌ಪ್ರಸಾದ್ ಮಾತನಾಡಿ, ಗ್ರಾಮದ ದೇವಾಲಯದ ಉದ್ಘಾಟನೆಗೂ ಮೊದಲೇ ಮಳೆ ಬಂದಿರುವುದು ತಾಲೂಕಿಗೆ ಶುಭ ಸೂಚನೆಯಾಗಿದೆ. ಕಾಡಂಚಿನ ಗ್ರಾಮಕ್ಕೆ ಸ್ವತಃ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಆಗಮಿಸಿ ದೇವಾಲಯ ಲೋಕಾರ್ಪಣೆ ಮಾಡಿದ್ದಾರೆ. ಧಾರ್ಮಿಕ ಸಭೆಗೆ ಸುತ್ತೂರು, ಸಿದ್ದಗಂಗೆ ಮುಂತಾದ ಮಠಾಧೀಶರು ಆಗಮಿಸಿ ಆಶೀರ್ವಾದ ನೀಡಿದ್ದಾರೆ ಎಂದು ಹೇಳಿದರು.
ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ದೇವನೂರು ಮಠದ ಶ್ರೀ ಮಹಾಂತ ಸ್ವಾಮೀಜಿ, ಪಡಗೂರು ಅಡವಿ ಮಠದ ಶ್ರೀ ಶಿವಲಿಂಗೇಂದ್ರ ಸ್ವಾಮೀಜಿ, ಮಾದಾಪಟ್ಟಣ ಮಠದ ಶ್ರೀ ತೋಂಟದಾರ್ಯಸ್ವಾಮೀಜಿ, ಹರವೆ ಮಠದ ಶ್ರೀ ಸರ್ಪಭೂಷಣ ಸ್ವಾಮೀಜಿ, ಮೂಡಗೂರು ಮಠದ ಶ್ರೀ ಇಮ್ಮಡಿ ಉದ್ದಾನ ಸ್ವಾಮೀಜಿ, ಮುಖಂಡ ಕಡಬೂರು ಮಂಜುನಾಥ್ ಸೇರಿದಂತೆ ಇತರರಿದ್ದರು.