ಮಲೆಮಹದೇಶ್ವರ ಬೆಟ್ಟದ ಶ್ರೀ ಮಹದೇಶ್ವರ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಚಿತ್ರನಟ ಎಸ್.ನಾರಾಯಣ್ ಉದ್ಘಾಟಿಸಿದರು. ಡಾ.ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಆರ್.ನರೇಂದ್ರ, ನಂಜುಂಡಸ್ವಾಮಿ ಇದ್ದರು. 
ಚಾಮರಾಜನಗರ

ಯಶಸ್ಸಿಗೆ ಗುರುಗಳ ಮಾರ್ಗದರ್ಶನ ಅಗತ್ಯ

ಹನೂರು: ಪ್ರತಿಯೊಬ್ಬರೂ ನಿರ್ದಿಷ್ಟ ಗುರಿಯನ್ನು ಹೊಂದುವುದರ ಮೂಲಕ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಬೇಕು ಎಂದು ಸಾಲೂರು ಬೃಹನ್ಮಠದ ಪೀಠಾಧಿಪತಿ ಡಾ.ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಶ್ರೀ ಮಹದೇಶ್ವರ ಕಾಲೇಜು ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಶ್ರೀ ಮಲೆಮಹದೇಶ್ವರ ಸ್ವಾಮಿ ಕೃಪಾ ಎಜುಕೇಷನ್ ಸೊಸೈಟಿಯ ಶಾಲಾ, ಕಾಲೇಜಿನ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಭವಿಷ್ಯದಲ್ಲಿ ಉತ್ತಮ ಜೀವನವನ್ನು ರೂಪಿಸಿಕೊಳ್ಳುವಲ್ಲಿ ವಿದ್ಯಾರ್ಥಿ ಜೀವನ ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಶೈಕ್ಷಣಿಕ ಸಾಧನೆಯತ್ತ ಹೆಚ್ಚು ಗಮನ ನೀಡಬೇಕು. ನಿರ್ದಿಷ್ಟ ಗುರಿಯನ್ನು ಹೊಂದುವುದರ ಮೂಲಕ ಗುರುಗಳು ಹೇಳಿಕೊಟ್ಟ ಮಾರ್ಗದರ್ಶನದಲ್ಲಿ ನಡೆಯಬೇಕು. ಇದರಿಂದ ಯಶಸ್ಸು ಗಳಿಸಲು ಸಾಧ್ಯ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸಾಮಾನ್ಯ ಜ್ಞಾನಕ್ಕೆ ಹೆಚ್ಚಿನ ಒತ್ತು ನೀಡಬೇಕು. ಪ್ರಚಲಿತ ಘಟನೆಗಳ ಅರಿವು ಹೊಂದಬೇಕು. ಉತ್ತಮ ಪುಸ್ತಕಗಳನ್ನು ಓದುವ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ಸಂವಹನ ಕೌಶಲಗಳನ್ನು ಕರಗತ ಮಾಡಿಕೊಳ್ಳಬೇಕು. ಇದರ ಜತೆಗೆ ಸಾಧನೆಗೆ ಸ್ಪೂರ್ತಿದಾಯಕವಾದ ಸಾಧಕರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇದರಿಂದ ನಿಶ್ಚಿತ ಗುರಿ ಸಾಧಿಸಲು ಸಾಧ್ಯ ಎಂದರು.
ಮಾಜಿ ಶಾಸಕ ಆರ್.ನರೇಂದ್ರ ಮಾತನಾಡಿ, ಜೀವನದಲ್ಲಿ ಗುರಿ ಸಾಧಿಸಬೇಕಾದರೆ ಗುರುಗಳ ಮಾರ್ಗದರ್ಶನ ಅತ್ಯಗತ್ಯ. ಆದ್ದರಿಂದ ಪ್ರತಿಯೊಬ್ಬರೂ ಈ ಬಗ್ಗೆ ಮನದಟ್ಟು ಮಾಡಿಕೊಂಡು ಗುರುಗಳ ಮಾರ್ಗದರ್ಶನ ಪಡೆದು ಓದಿನ ಕಡೆ ಹೆಚ್ಚಿನ ಒತ್ತು ನೀಡಿ ಎಂದು ಹೇಳಿದರು.
ಗುಂಡೇಗಾಲ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಚಿತ್ರನಟ ಎಸ್.ನಾರಾಯಣ್, ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ, ಉಪ್ಪಾರ ನಿಗಮದ ಮಾಜಿ ಅಧ್ಯಕ್ಷ ಶಿವಕುಮಾರ್ ಇದ್ದರು.