ಹನೂರಿಗೆ ಆಗಮಿಸಿ ಸುತ್ತೂರು ಜಾತ್ರಾ ಮಹೋತ್ಸವದ ಪ್ರಚಾರ ರಥವನ್ನು ವಿವಿಧ ಸಮುದಾಯದ ಮುಖಂಡರು ಆತ್ಮೀಯವಾಗಿ ಸ್ವಾಗತಿಸಿದರು. ಸೋಮಶೇಖರ್, ಡಾ.ಎಸ್ ದತ್ತೇಶ್‌ಕುಮಾರ್, ಮುರುಡೇಶ್ವರಸ್ವಾಮಿ, ಮಣಿ, ವಿನೋದ್ ಇತರರು ಇದ್ದರು.
ಹನೂರು: ಮೈಸೂರಿನ ಸುತ್ತೂರು ಶ್ರೀಕ್ಷೇತ್ರದಲ್ಲಿ ಜ.15 ರಿಂದ 20ರವರೆಗೆ ನಡೆಯುವ ಸುತ್ತೂರು ಜಾತ್ರಾ ಮಹೋತ್ಸವಕ್ಕೆ ಹನೂರು ತಾಲೂಕಿನ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದರ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ವೀರಶೈವ ಲಿಂಗಾಯತ ಮಹಾಸಭಾದ ತಾಲೂಕು ಅಧ್ಯಕ್ಷ ಒಡೆಯರಪಾಳ್ಯ ಸೋಮಶೇಖರ್ ತಿಳಿಸಿದರು.
ಸುತ್ತೂರು ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಶುಕ್ರವಾರ ಪಟ್ಟಣಕ್ಕೆ ಆಗಮಿಸಿದ ಪ್ರಚಾರ ರಥವನ್ನು ವಿವಿಧ ಸಮುದಾಯದ ಮುಖಂಡರೊಂದಿಗೆ ಆತ್ಮೀಯವಾಗಿ ಸ್ವಾಗತಿಸಿ ಪುಷ್ಪನಮನ ಸಲ್ಲಿಸಿದ ಬಳಿಕ ಮಾತನಾಡಿದರು.
ಸುತ್ತೂರು ಶ್ರೀಕ್ಷೇತ್ರವನ್ನು ಸಂಸ್ಥಾಪಿಸಿ ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸೇವೆಗೆ ಶ್ರಮಿಸಿದ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿ ಅವರ ಜಾತ್ರಾ ಮಹೋತ್ಸವವು 6 ದಿನಗಳ ಕಾಲ ನಡೆಯಲಿದೆ. ಇಲ್ಲಿ ಸಾಮೂಹಿಕ ವಿವಾಹ, ಭಜನಾ ಮೇಳ, ವಸ್ತು ಪ್ರದರ್ಶನ, ಕೃಷಿ ಮೇಳ, ದನಗಳ ಜಾತ್ರೆ, ಸಾಂಸ್ಕೃತಿಕ ಮೇಳ, ದೇಸಿ ಆಟಗಳು, ದೋಣಿ ವಿವಾಹ, ಚಿತ್ರಕಲೆ, ರಂಗೋಲಿ, ಗಾಳಿಪಟ, ಸೋಬಾನೆ ಪದ, ರಾಗಿ ಬೀಸುವ ಸ್ಪರ್ಧೇ ಸೇರಿದಂತೆ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ. ವಿವಿಧ ಮಠಾಧೀಶರು, ಗಣ್ಯರು ಹಾಗೂ ಲಕ್ಷಾಂತರ ಭಕ್ತರು ಆಗಮಿಸಲಿದ್ದಾರೆ. ಇದರಿಂದ ಜಾತ್ರಾ ಮಹೋತ್ಸವವು ಪ್ರತಿ ವರ್ಷ ತನ್ನದೇಯಾದ ವೈಶಿಷ್ಟ್ಯತೆಯನ್ನು ಪಡೆದುಕೊಂಡಿದೆ. ಆದ್ದರಿಂದ ಈ ಭಾಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಸುತ್ತೂರು ಧಾರ್ಮಿಕ ಪುಣ್ಯಕ್ಷೇತ್ರ: ಮಾನಸ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ.ಎಸ್.ದತ್ತೇಶ್‌ಕುಮಾರ್ ಮಾತನಾಡಿ, ಸುತ್ತೂರು ಶ್ರೀ ಕ್ಷೇತ್ರ ನಾಡಿನ ಧಾರ್ಮಿಕ ಪುಣ್ಯ ಸ್ಥಳವಾಗಿದ್ದು, ಧಾರ್ಮಿಕ, ಶೈಕ್ಷಣಿಕ ಹಾಗೂ ಸೇವಾ ಕಾರ್ಯಗಳನ್ನು ಕೈಗೊಳ್ಳುವುದರ ಮೂಲಕ ಪ್ರಸಿದ್ಧಿ ಪಡೆದಿದೆ. 360ಕ್ಕೂ ಶಿಕ್ಷಣ ಸಂಸ್ಥೆಯನ್ನು ತೆರೆದು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಆಶಾಕಿರಣವಾಗಿದೆ. ಪ್ರತಿ ವರ್ಷವೂ ಜಾತ್ರಾ ಮಹೋತ್ಸವವನ್ನು ಆಯೋಜಿಸಲಾಗುತ್ತಿದ್ದು, ವೈಶಿಷ್ಟ್ಯತೆಯನ್ನು ಪಡೆದಿದೆ. ಆದ್ದರಿಂದ ಈ ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುವುದರ ಮೂಲಕ ಜಾತ್ರೆಗೆ ಮೆರಗು ನೀಡಬೇಕು ಎಂದು ತಿಳಿಸಿದರು.
ಜಿಲ್ಲಾ ವೀರಶೈವ ಲಿಂಗಾಯತ ಮಹಾಸಭಾದ ಕಾರ್ಯದರ್ಶಿ ಮುರುಡೇಶ್ವರಸ್ವಾಮಿ, ನಿರ್ದೇಶಕ ಜಗಧೀಶ್, ತಾಲೂಕು ನಿರ್ದೇಶಕ ವಿನೋದ್, ಪಪಂ ಮಾಜಿ ಉಪಾಧ್ಯಕ್ಷ ಗಿರೀಶ್, ಸಮಾಜ ಸೇವಕ ಪೆದ್ದನಪಾಳ್ಯ ಮಣಿ, ಶಿಕ್ಷಕ ಮಲ್ಲಣ್ಣ, ಮುಖಂಡರಾದ ರಾಜಶೇಖರ ಮೂರ್ತಿ, ಮೋಹನ್, ಸಿದ್ದಪ್ಪ, ಕನಕರಾಜು ಹಾಗೂ ಇನ್ನಿತರರು ಇದ್ದರು.