ಚಾಮರಾಜನಗರ ತಾಲೂಕಿನ ಕಾಗಲವಾಡಿ ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಸಹಾಯಕ ಕೃಷಿ ನಿರ್ದೇಶಕಿ ರೂಪಾ ಮಾತನಾಡಿದರು. ವೀರಭದ್ರ, ವೀರಭದ್ರಸ್ವಾಮಿ, ಮಹದೇವಸ್ವಾಮಿ ಇದ್ದರು.
- ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ರೂಪಾ ಸಲಹೆ
- ರೈತರಿಗೆ ತರಬೇತಿ ಕಾರ್ಯಾಗಾರ
- ರಾಷ್ಟ್ರೀಯ ಖಾದ್ಯ, ತೈಲ, ಎಣ್ಣೆ ಕಾಳು ಬೆಳೆಗಳ ಕಾರ್ಯಕ್ರಮದಡಿ ಆಯೋಜನೆ
ಚಾಮರಾಜನಗರ: ಕೃಷಿ ಇಲಾಖೆಯಿಂದ ಅನುಷ್ಠಾನಗೊಳಿಸುತ್ತಿರುವ ಕೃಷಿಭಾಗ್ಯ ಹಾಗೂ ಪ್ರಧಾನಮಂತ್ರಿ ಕಿಸಾನ್ ಯೋಜನೆಯನ್ನು ರೈತರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಹಾಯಕ ಕೃಷಿ ನಿರ್ದೇಶಕಿ ರೂಪಾ ಅವರು ಸಲಹೆ ನೀಡಿದರು.
ತಾಲೂಕಿನ ಕಾಗಲವಾಡಿ ಗ್ರಾಮದಲ್ಲಿ ರಾಷ್ಟ್ರೀಯ ಖಾದ್ಯ, ತೈಲ, ಎಣ್ಣೆ ಕಾಳು ಬೆಳೆಗಳ ಕಾರ್ಯಕ್ರಮದಡಿ ಮಂಗಳವಾರ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು. ರೈತರಿಗೆ ಕೃಷಿ ಇಲಾಖೆಯಿಂದ ಅನೇಕ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಹೀಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರಗಳಿಗೆ ತೆರಳಿ ಕೃಷಿ ಇಲಾಖೆಯ ಯೋಜನೆಗಳ ಬಗ್ಗೆ ಮಾಹಿತಿ ಪಡೆದು ಯೋಜನೆಗಳ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಎಣ್ಣೆ ಕಾಳು ಬೆಳೆಗಳಾದ ಸೂರ್ಯಕಾಂತಿ ಹಾಗೂ ವಿವಿಧ ಬೇಸಾಯ ಪದ್ಧತಿಗಳನ್ನು ರೈತರು ಸೂಕ್ತ ರೀತಿಯಲ್ಲಿ ಅಳವಡಿಸಿಕೊಳ್ಳಬೇಕು. ಮುಂಬರುವ ಪೂರ್ವ ಮುಂಗಾರು ಹಂಗಾಮಿಗೆ ಸಿದ್ಧತೆ ಮಾಡಿಕೊಳ್ಳಬೇಕು. ಸಮಗ್ರ ಕೃಷಿ ಪದ್ಧತಿ ಯೋಜನೆಯಡಿ ಹೈನುಗಾರಿಕೆ, ಬಹುವಾರ್ಷಿಕ ಬೆಳೆ, ತೋಟಗಾರಿಕೆ ಸಮಗ್ರ ಬೇಸಾಯ ಕೈಗೊಳ್ಳುವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಚಂದಕವಾಡಿ ಹೋಬಳಿಯ ಕೃಷಿ ಅಧಿಕಾರಿ ವೀರಭದ್ರ, ಪ್ರಗತಿಪರ ರೈತ ವೀರಭದ್ರಸ್ವಾಮಿ, ಮಹದೇವಸ್ವಾಮಿ ಹಾಗೂ ಇತರರು ಹಾಜರಿದ್ದರು.