ಹನೂರಿನ ಶ್ರೀ ಮಹದೇಶ್ವರ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಡಾ. ಶಿವರಾತ್ರಿ ರಾಜೇಂದ್ರ ಶ್ರೀಗಳ ಜಯಂತಿ ಸಂಬಂಧ ಡಾ. ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಶಾಸಕ ಎಂ.ಆರ್ ಮಂಜುನಾಥ್, ಡಾ.ಎಸ್ ದತ್ತೇಶ್‌ಕುಮಾರ್, ನಿಶಾಂತ್, ಪೊನ್ನಾಚಿ ಮಹದೇವಸ್ವಾಮಿ ಇತರರು ಇದ್ದರು.
ಹನೂರು: ಡಾ. ಶಿವರಾತ್ರಿ ರಾಜೇಂದ್ರ ಶ್ರೀಗಳ ಜಯಂತಿ ಕಾರ್ಯಕ್ರಮಕ್ಕಾಗಿ ವ್ಯವಸ್ಥಿತವಾಗಿ ಸಿದ್ಧತೆ ಮಾಡಿಕೊಳ್ಳುವುದರ ಮೂಲಕ ಯಶಸ್ವಿಗೊಳಿಸಬೇಕು ಎಂದು ಸಾಲೂರು ಬೃಹನ್ಮಠದ ಪೀಠಾಧಿಪತಿ ಡಾ. ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರು ತಿಳಿಸಿದರು.
ಪಟ್ಟಣದ ಶ್ರೀ ಮಹದೇಶ್ವರ ಕ್ರೀಡಾಂಗಣದಲ್ಲಿ ಡಿ.13 ರಂದು ಡಾ. ಶಿವರಾತ್ರಿ ರಾಜೇಂದ್ರ ಶ್ರೀಗಳ ಶತೋತ್ತರ ದಶಮಾನೋತ್ಸವ ಕಾರ್ಯಕ್ರಮ ಆಯೋಜನೆ ಸಂಬಂಧ ಶುಕ್ರವಾರ ಕೈಗೊಂಡಿರುವ ಅಗತ್ಯ ಸಿದ್ಧತೆಯನ್ನು ಪರಿಶೀಲಿಸಿ ನಡೆದ ಸಭೆಯಲ್ಲಿ ಮಾತನಾಡಿದರು.
ಶ್ರೀಗಳ ಜಯಂತಿ ಕಾರ್ಯಕ್ರಮವು ಈ ಬಾರಿ ಹನೂರಿನಲ್ಲಿ ಆಯೋಜಿಸುವ ಅವಕಾಶ ದೊರಕಿಸಿರುವುದು ನಮ್ಮೆಲ್ಲರ ಪುಣ್ಯ. ಆದ್ದರಿಂದ ಕಾರ್ಯಕ್ರಮದ ಯಶಸ್ವಿಗೆ ಪ್ರತಿಯೊಬ್ಬರೂ ಪರಸ್ಪರ ಸಹಕಾರ ನೀಡಬೇಕು. ನೀಡಿರುವ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಯಾವುದೇ ರೀತಿಯಲ್ಲೂ ಕೊರತೆಯಾಗದಂತೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಒಟ್ಟಿನಲ್ಲಿ ಕಾರ್ಯಕ್ರಮವು ಯಶಸ್ವಿಯಾಗಬೇಕು ಎಂದು ತಿಳಿಸಿದರು.
ಇದೇ ವೇಳೆ ಶಾಸಕ ಎಂ.ಆರ್. ಮಂಜುನಾಥ್ ಅವರಿಗೆ ಆಹ್ವಾನ ಪತ್ರಿಕೆ ನೀಡುವುದರ ಮೂಲಕ ಕಾರ್ಯಕ್ರಮಕ್ಕೆ ಅಧಿಕೃತವಾಗಿ ಆಹ್ವಾನಿಸಲಾಯಿತು. ಶಾಸಕರು ಹಾಗೂ ನೆರೆದಿದ್ದ ಗಣ್ಯರು ಯಶಸ್ವಿ ಕಾರ್ಯಕ್ರಮಕ್ಕೆ ಅಗತ್ಯ ಸಲಹೆಯನ್ನು ನೀಡಿದರು. ಜನರು ಆಗಮಿಸಲು ಗ್ರಾಮಗಳಿಗೆ ಬಸ್ ಸೌಕರ್ಯ, ವೇದಿಕೆ ಸಿದ್ಧತೆ, ಊಟೋಪಚಾರ, ಅಲಂಕಾರ ಸೇರಿದಂತೆ ಇನ್ನಿತರೆ ವಿಷಯಗಳಿಗೆ ಸಂಬಂಧಿಸಿದಂತೆ ಸಭೆಯಲ್ಲಿ ಚರ್ಚಿಸಲಾಯಿತು.
ಸಮಾಜ ಸೇವಕ ನಿಶಾಂತ್, ಮಾನಸ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ.ಎಸ್ ದತ್ತೇಶ್‌ಕುಮಾರ್, ಚಾಮುಲ್ ನಿರ್ದೇಶಕ ಉದ್ದನೂರು ಪ್ರಸಾದ್, ವೀರಶೈವ ಲಿಂಗಾಯತ ಮಹಸಭಾದ ಜಿಲ್ಲಾ ಕಾರ್ಯದರ್ಶಿ ಮುರುಡೇಶ್ವರಸ್ವಾಮಿ, ನಿರ್ದೇಶಕರಾದ ಬಸವರಾಜಪ್ಪ, ಉಮೇಶ್, ಜಗದೀಶ್, ತಾಲೂಕು ಅಧ್ಯಕ್ಷ ಒಡೆಯರಪಾಳ್ಯ ಸೋಮಶೇಖರ್, ಸದಸ್ಯ ವಿನೋದ್‌ಕುಮಾರ್, ಮುಖಂಡರಾದ ಪೊನ್ನಾಚಿ ಮಹದೇವಸ್ವಾಮಿ, ಮಾದೇಶ್, ಬಸವರಾಜು, ರಮೇಶ್‌ನಾಯ್ಡು, ವೆಂಕಟೇಗೌಡ, ಶ್ರೀನಿವಾಸ್, ರಾಜಣ್ಣ ಹಾಗೂ ಇನ್ನಿತರರಿದ್ದರು.