ಬೂದಬಾಳು ಶ್ರೀಗುಡಿಹಟ್ಟಿ ವೆಂಕಟರಮಣ ಸ್ವಾಮಿ ಜಾತ್ರೆ ಸಂಬಂಧ ಶಾಸಕ ಎಂ.ಆರ್. ಮಂಜುನಾಥ್ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು. ದಿನೇಶ್ ಕುಮಾರ್ ಮೀನಾ, ಕೆ.ಎನ್ ಚೈತ್ರಾ, ಬಸವರಾಜು, ಉಮೇಶ್ ಇತರರು ಇದ್ದರು.
ಹನೂರು: ಬೂದುಬಾಳು ಜಾತ್ರೆ ವೇಳೆ ವಾಹನಗಳ ಮೂಲಕ ಆಗಮಿಸುವ ಭಕ್ತರಿಂದ ಯಾವುದೇ ಕಾರಣಕ್ಕೂ ಪಾಕಿರ್ಂಗ್ ಶುಲ್ಕ ವಸೂಲಿ ಮಾಡುವಂತಿಲ್ಲ ಎಂದು ಶಾಸಕ ಎಂ.ಆರ್ ಮಂಜುನಾಥ್ ಸೂಚಿಸಿದರು.
ಹನೂರು ಸಮೀಪದ ಬೂದುಬಾಳು ಗ್ರಾಮದಲ್ಲಿ ಶ್ರೀಗುಡಿಹಟ್ಟಿ ವೆಂಕಟರಮಣಸ್ವಾಮಿ ಜಾತ್ರೆ ಸಂಬಂಧ ಅಗತ್ಯ ಸಿದ್ಧತೆ ಕುರಿತು ಶನಿವಾರ ಅಧಿಕಾರಿಗಳು ಹಾಗೂ ಗ್ರಾಮಸ್ಥರೊಂದಿಗೆ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಗ್ರಾಮದಲ್ಲಿ 5 ದಿನಗಳ ಕಾಲ ನಡೆಯುವ ಜಾತ್ರೆಗೆ ಸಾವಿರಾರು ಭಕ್ತರು ಆಗಮಿಸುತ್ತಾರೆ. ಈವರೆಗೂ ವಾಹನಗಳಿಂದ ಪಾರ್ಕಿಂಗ್ ಶುಲ್ಕವನ್ನು ಟೆಂಡರ್ ಮೂಲಕ ವಸೂಲಿ ಮಾಡಲಾಗುತ್ತಿತ್ತು. ಆದರೆ ಈ ವೇಳೆ ವಸೂಲಿ ಮಾಡುವ ಸ್ಥಳದಲ್ಲಿ ವಾಹನ ದಟ್ಟಣೆಯಿಂದ ಭಕ್ತರು ಕಿರಿಕಿರಿ ಅನುಭವಿಸುತ್ತಿರುವುದು ಗಮನಕ್ಕೆ ಬಂದಿದೆ. ಹಾಗಾಗಿ ಭಕ್ತರ ಹಿತದೃಷ್ಟಿಯಿಂದ ವಾಹನಗಳಿಂದ ಪಾಕಿರ್ಂಗ್ ಶುಲ್ಕವನ್ನು ವಸೂಲಿ ಮಾಡುವಂತಿಲ್ಲ. ಇದರಿಂದ ಭಕ್ತರ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಜಾತ್ರಾ ವೇಳೆ ಗ್ರಾಪಂ ವತಿಯಿಂದ ಸ್ವಚ್ಛತೆ ಕಾಪಾಡಬೇಕು. ಅಂಗಡಿ, ಮುಂಗಟ್ಟುಗಳಿಗೆ ಭಕ್ತರಿಗೆ ತೊಂದರೆಯಾಗದಂತೆ ಸ್ಥಳ ನಿಗದಿಪಡಿಸಬೇಕು. ಹೆಚ್ಚು ಜನಸಂದಣಿ ಸ್ಥಳದಲ್ಲಿ ಭಕ್ತರ ಸುಗಮ ಸಂಚಾರಕ್ಕೆ ಬ್ಯಾರಿಕೇಡ್ ಅಳವಡಿಸಬೇಕು. ಭಕ್ತರ ಹಿತ ದೃಷ್ಟಿಯಿಂದ ಅಗತ್ಯ ಪೊಲೀಸ್ ಬಂದೋಬಸ್ತ್ ನಿಯೋಜಿಸಬೇಕು. ಗ್ರಾಮದಲ್ಲಿ ಆಂಬುಲೆನ್ಸ್ ವ್ಯವಸ್ಥೆಯಾಗಬೇಕು. ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕು. ಈ ಬಗ್ಗೆ ಅಗತ್ಯ ಸಿದ್ಧತೆ ಕೈಗೊಳ್ಳುವುದರ ಮೂಲಕ ಜಾತ್ರೆಯಲ್ಲಿ ಭಕ್ತರಿಗೆ ಯಾವುದೇ ರೀತಿಯಲ್ಲೂ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ, ತಹಸೀಲ್ದಾರರಾದ ಹನೂರಿನ ಕೆ.ಎನ್ ಚೈತ್ರಾ, ಕೊಳ್ಳೇಗಾಲದ ಬಸವರಾಜು, ತಾಲೂಕು ಪಂಚಾಯಿತಿ ಇಒಗಳಾದ ಹನೂರಿನ ಉಮೇಶ್, ಕೊಳ್ಳೇಗಾಲದ ಗುರುಶಾಂತಪ್ಪ, ಇನ್ಸ್ಪೆಕ್ಟರ್ ಆನಂದಮೂರ್ತಿ, ದೇಗುಲದ ಧರ್ಮಾಧಿಕಾರಿ ಮಧು ಸ್ವಾಮೀಜಿ, ಮುಖಂಡರಾದ ಮಂಜೇಶ್, ವಿಜಯಕುಮಾರ್, ಮಹಾದೇವ ಇನ್ನಿತರರು ಇದ್ದರು.