ಕೊಳ್ಳೇಗಾಲ ತಾಲೂಕಿನ ಕುಂತೂರಿನ ಶ್ರೀ ವೀರಸಿಂಹಾಸನ ಮಠದಲ್ಲಿ ಶನಿವಾರ ಆಯೋಜಿಸಿದ್ದ ಮಲೆ ಮಹದೇಶ್ವರ ಜಯಂತಿ ಆಚರಣೆ, ಶರಣ ಸಂಕೀರ್ತನೆ, ಆಧ್ಯಾತ್ಮಿಕ ಪ್ರವಚನ, ಹಿರಿಯ ಗುರುಗಳ ಸ್ಮರಣೋತ್ಸವ ಸಮಾರಂಭದಲ್ಲಿ ಮಠದ ಪೀಠಾಧಿಪತಿ ಶ್ರೀ ಶಿವಪ್ರಭು ಸ್ವಾಮೀಜಿ ಮಾತನಾಡಿದರು. ಶ್ರೀಕಂಠಸ್ವಾಮೀಜಿ, ಶ್ರೀಇಮ್ಮಡಿ ಗುರುಲಿಂಗ ಸ್ವಾಮೀಜಿ ಇತರರು ಇದ್ದರು.
- ನಿವೃತ್ತ ಮುಖ್ಯ ಶಿಕ್ಷಕ ಎಸ್.ಎಂ.ಸಿದ್ದರಾಜಪ್ಪ ಸಲಹೆ
- ಶ್ರೀ ಗುರು ಮಲೆಮಹದೇಶ್ವರ ಜಯಂತಿ ಮಹೋತ್ಸವ
ಕೊಳ್ಳೇಗಾಲ:
ಶ್ರೀ ಮಹದೇಶ್ವರರು ತೋರಿದ ಸನ್ಮಾರ್ಗದಲ್ಲಿ ಸಾಗುವ ಮೂಲಕ ಜನರು ಸತ್ಯ, ನ್ಯಾಯ, ನೀತಿ, ಧರ್ಮವನ್ನು ಪಾಲಿಸುತ್ತ ಬದುಕನ್ನು ಸಾರ್ಥಕ್ಯ ಮಾಡಿಕೊಳ್ಳಬೇಕೆಂದು ನಂಜನಗೂಡು ತಾಲೂಕು ಸೋನಹಳ್ಳಿಯ ನಿವೃತ್ತ ಮುಖ್ಯ ಶಿಕ್ಷಕ ಎಸ್.ಎಂ.ಸಿದ್ದರಾಜಪ್ಪ ಹೇಳಿದರು.
ತಾಲೂಕಿನ ಕುಂತೂರಿನ ವೀರ ಸಿಂಹಾಸನ ಮಠದಲ್ಲಿ ಶನಿವಾರ ಆಯೋಜಿಸಿದ್ದ ಶ್ರೀ ಗುರು ಮಲೆಮಹದೇಶ್ವರ ಜಯಂತಿ ಮಹೋತ್ಸವದಲ್ಲಿ ಶರಣ ಸಂಕೀರ್ತನೆ, ಆಧ್ಯಾತ್ಮಿಕ ಪ್ರವಚನ, ಹಿರಿಯ ಗುರುಗಳ ಸ್ಮರಣೋತ್ಸವ ಸಮಾರಂಭದಲ್ಲಿ ಮಾತನಾಡಿ, ಉತ್ತರದ ಶ್ರೀಶೈಲ ಕಡೆಯಿಂದ ಬಂದ ಶ್ರೀ ಮಹದೇಶ್ವರರು ಕತ್ತಲ ರಾಜ್ಯ ಎನಿಸಿದ್ದ ಈ ಭಾಗವನ್ನು ಧರ್ಮ, ಸಂಸ್ಕಾರ, ಕಾಯಕ, ದಾಸೋಹದ ಮೂಲಕ ಜನರಲ್ಲಿದ್ದ ಅಜ್ಞಾನ ಅಂಧಕಾರಗಳನ್ನು ಹೋಗಲಾಡಿಸಿ ಈ ಮೂಲಕ ಜನರನ್ನು ಸಂಸ್ಕಾರವಂತರನ್ನಾಗಿ ಮಾಡಿದರು. ಕುಂತೂರಿನ ಮಠಾಧಿಪತಿಗಳಾಗಿ ಧರ್ಮ ಜಾಗೃತಿಯನ್ನು ಉಂಟು ಮಾಡಿದರು. ಮಠವನ್ನು ಭಕ್ತರ ಶ್ರದ್ಧಾ ಕೇಂದ್ರವಾಗಿ ಮಾಡಿದರು ಎಂದು ಬಣ್ಣಿಸಿದರು.
ಮಕ್ಕಳ ತಜ್ಞ ಡಾ.ಶಿವು ಮಾತನಾಡಿ, ರೈತನ ಬೆವರಿನ ಫಲವಾಗಿ ಬರುವ ಆಹಾರವನ್ನು ವ್ಯರ್ಥ ಮಾಡಬಾರದೆಂದು ತಿಳಿಸಿದರು.
ಮಠದ ಪೀಠಾಧಿಪತಿ ಶ್ರೀ ಶಿವಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮುಡಿಗುಂಡ ವಿರಕ್ತ ಮಠದ ಶ್ರೀಕಂಠಸ್ವಾಮೀಜಿ, ಚಿಲಕವಾಡಿ ಮಠದ ಶ್ರೀ ಇಮ್ಮಡಿ ಗುರುಲಿಂಗ ಸ್ವಾಮೀಜಿ ಆರ್ಶೀವಚನ ನೀಡಿದರು.
ಭಾನುವಾರ ಶ್ರೀ ಮಲೆ ಮಹದೇಶ್ವರರ ಗದ್ದುಗೆಗೆ ವಿಶೇಷ ಪೂಜೆ, ಸಹಸ್ರ ಬಿಲ್ವಾರ್ಚನೆ ಮತ್ತು ಮಹಾಮಂಗಳಾರತಿ ನೆರವೇರಿಸಲಾಯಿತು. ಬಳಿಕ ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ತಿ.ನರಸೀಪುರದ ಹೆಳರಹುಂಡಿ ಮಹದೇವಸ್ವಾಮಿ ಅವರ ಮಹಿಳಾ ಭಜನಾ ತಂಡದವರಿಂದ ವಚನ ಗಾಯನ ನಡೆಯಿತು.
ಕರ್ನಾಟಕ ರಾಜ್ಯ ವಕೀಲರ ಪರಿಷತ್ ಸದಸ್ಯ ಕೆ.ಎಸ್.ಮಹದೇವ ಪ್ರಸಾದ್, ಮೈಸೂರು ಮಾನಸ ಗಂಗೋತ್ರಿಯ ಗಣಕ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ.ಡಿ.ಎಸ್.ಗುರು, ಮೈಸೂರಿನ ಸಮಾಜ ಸೇವಕ ತ್ರಿಶೂಲ್, ಎಪಿಎಂಸಿ ಅಧ್ಯಕ್ಷ ಪ್ರಭುಸ್ವಾಮಿ, ಶಿಕ್ಷಕ ತೋಂಟದಾರ್ಯ, ಗಿರೀಶ್, ಕುಂತೂರಿನ ಗೌಡರು, ಯಜಮಾನರು ಇದ್ದರು.